Advertisement

ಶಾಲೆಗೆ ಹೋಗೋಣ ಬನ್ನಿರೋ…!

11:45 AM Oct 25, 2021 | Team Udayavani |

ರಾಯಚೂರು: ಕೋವಿಡ್‌ 19 ಮೂರನೇ ಅಲೆಯ ಆತಂಕದಲ್ಲಿ ಮುಂದೂಡಲ್ಪಟ್ಟಿದ್ದ ಪ್ರಾಥಮಿಕ ಶಾಲೆ ಶೈಕ್ಷಣಿಕ ಚಟುವಟಿಕೆಯನ್ನು ಸೋಮವಾರದಿಂದ ಪುನಾರಂಭಿಸಲಾಗುತ್ತಿದೆ.

Advertisement

ಈಗಾಗಲೇ 5ರಿಂದ 10ನೇ ತರಗತಿ ಶಾಲೆಗಳು ಆರಂಭವಾಗಿದ್ದು, ಈಗ ಒಂದನೇ ತರಗತಿಯಿಂದಲೇ ತರಗತಿ ನಡೆಸಲು ಶಿಕ್ಷಣ ಇಲಾಖೆ ಸಮಗ್ರ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ನೀಡಿದ ನಿರ್ದೇಶನಗಳನ್ವಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

5ನೇ ತರಗತಿಯಿಂದ ಶಾಲೆ ಆರಂಭಿಸಿದ ವೇಳೆ ಕೈಗೊಂಡ ಕೋವಿಡ್‌ ನಿಯಮಗಳನ್ನು ಈಗಲೂ ಕಡ್ಡಾಯವಾಗಿ ಪಾಲಿಸುವುದರ ಜತೆಗೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಲು ತಿಳಿಸಲಾಗಿದೆ. ಸದ್ಯಕ್ಕೆ 1-5ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದವರೆಗೆ ಮಾತ್ರ ಶಾಲೆ ಇರಲಿದ್ದು, ನ.2ರಿಂದ ಮಧ್ಯಾಹ್ನವೂ ಶಾಲೆ ನಡೆಸಲು ಇಲಾಖೆ ಕ್ರಮ ವಹಿಸಿದೆ. ­

ಕೋವಿಡ್‌ ನಿಯಮ ಪಾಲನೆ

ಈಗಾಗಲೇ ಬಿಇಒ, ಸಿಆರ್‌ಪಿ, ಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ. ಸರ್ಕಾರದ ಸುತ್ತೋಲೆ ನೀಡಿದ್ದು, ಕಡ್ಡಾಯವಾಗಿ ಮುದ್ರಣ ಮಾಡಿಕೊಂಡು ಪಾಲಕರಿಗೆ ತೋರಿಸಲು ತಿಳಿಸಲಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ಅದೇ ರೀತಿ ತರಗತಿಗಳನ್ನು ನಡೆಸುತ್ತಿದ್ದು, ಮುಂದೆಯೂ ಅದನ್ನು ಪಾಲಿಸುವಂತೆ ತಿಳಿಸಲಾಗಿದೆ. ಈಗ 1-5ನೇ ತರಗತಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿಲ್ಲ. ಕೇವಲ ಪಠ್ಯ ಮಾತ್ರ ಮಾಡಲು ನಿರ್ಧರಿಸಲಾಗಿದೆ. ­

Advertisement

ಇದನ್ನೂ ಓದಿ: ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ತಂಡಗಳ ಆಧಾರದಲ್ಲಿ ತರಗತಿ

ಕೆಲವೊಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ತರಗತಿ ಕೋಣೆಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಮಕ್ಕಳ ಗುಂಪುಗಳನ್ನಾಗಿ ವಿಂಗಡಿಸಿ ಒಂದೊಂದು ತಂಡಕ್ಕೆ ಒಮ್ಮೆ ತರಗತಿ ನಡೆಸುವಂತೆ ತಿಳಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಕಡೆ ಮಾತ್ರ ಈ ರೀತಿ ಮಾಡಲು ತಿಳಿಸಿದ್ದು, ಕಡಿಮೆ ಇದ್ದಲ್ಲಿ ಸಾಮಾಜಿಕ ಅಂತರದಡಿ ಕೆಲಸ ನಿರ್ವಹಿಸಲು ತಿಳಿಸಲಾಗಿದೆ.

ಸರ್ಕಾರದ ಸುತ್ತೋಲೆಯನ್ನು ಎಲ್ಲ ಶಾಲೆಗಳಿಗೆ ಕಳುಹಿಸಲಾಗಿದೆ. ಯಾವುದೇ ಆತಂಕವಿಲ್ಲದೇ ಶಾಲೆ ಪುನಾರಂಭಿಸಲಾಗುತ್ತಿದೆ. ಈಗಾಗಲೇ ಕೋವಿಡ್‌ ನಿಯಮಗಳನ್ವಯ ಪಾಲಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು, ಪ್ರವೇಶಾತಿ ನೀಡಲಾಗುತ್ತಿದೆ. ಈಗಾಗಲೇ ಶಾಲೆಗಳನ್ನು ಅದ್ದೂರಿಯಾಗಿ ಆರಂಭಿಸಿದ ಕಾರಣ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಂದು ವೇಳೆ ಶಿಕ್ಷಕರು ಆಸಕ್ತಿ ಇದ್ದಲ್ಲಿ ಚನ್ನಾಗಿ ಕಾರ್ಯಕ್ರಮ ಮಾಡಬಹುದು. ಸರ್ಕಾರದ ಸುತ್ತೋಲೆಯನ್ನು ವಾಟ್ಸ್‌ಆ್ಯಪ್‌ ನಲ್ಲಿ ಹಾಕದೆ ಮುದ್ರಣ ಮಾಡಿಯೇ ನೋಟಿಸ್‌ಗೆ ಹಾಕುವಂತೆ ತಿಳಿಸಲಾಗಿದೆ. -ವೃಷಭೇಂದ್ರಯ್ಯ, ಡಿಡಿಪಿಐ ರಾಯಚೂರು

ಹೀಗಿದೆ ಮಕ್ಕಳ ಅಂಕಿ ಸಂಖ್ಯೆ

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 1-10ನೇ ತರಗತಿವರೆಗೆ ಸುಮಾರು 4,11,949 ಮಕ್ಕಳಿದ್ದಾರೆ. ಒಂದರಿಂದ ಐದನೇ ತರಗತಿವರೆಗೆ 2,19,796 ವಿದ್ಯಾರ್ಥಿಗಳಿದ್ದಾರೆ. 1,15,955 ಬಾಲಕರಿದ್ದರೆ, 1,05,208 ಬಾಲಕಿಯರಿದ್ದಾರೆ. ಇನ್ನೂ ದಾಖಲಾತಿ ಪ್ರಕ್ರಿಯೆ ಮುಂದುವರಿದಿದೆ. ಅದರಲ್ಲಿ ಸರ್ಕಾರಿ ಶಾಲೆಯ ಮಕ್ಕಳು 1,43,062 ಮಕ್ಕಳಿದ್ದು, 70,240 ಬಾಲಕರು, 72,050 ಬಾಲಕಿಯರಿದ್ದಾರೆ ಎಂದು ಇಲಾಖೆ ವಿವರ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next