Advertisement

“ಬನ್ನಿ ನನ್ನ ಕಥಾ ಪ್ರಪಂಚಕ್ಕೆ..”; ಕಥೆ ಹೇಳಲು ಹೊರಟ ರಕ್ಷಿತ್ ಶೆಟ್ಟಿ: ಏನಿದು ಹೊಸ ಸರಣಿ

02:42 PM Jul 03, 2023 | Team Udayavani |

ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಿರ್ದೇಶಕದ ಕುರ್ಚಿಯಲ್ಲಿ ಕುಳಿತಿದ್ದ ಉಡುಪಿಯ ಕುವರ ರಕ್ಷಿತ್ ಶೆಟ್ಟಿ ಇದೀಗ ದಶಕದ ಬಳಿಕ ಮತ್ತೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇದರ ನಡುವೆ ‘ತಮ್ಮ ಕಥಾ ಪ್ರಪಂಚ’ಕ್ಕೆ ನಮ್ಮೆಲ್ಲರನ್ನೂ ಆಹ್ವಾನಿಸಿದ್ದಾರೆ.

Advertisement

ಬಾಲ್ಯದ ದಿನಗಳಲ್ಲಿನ ಉಡುಪಿಯ ರಥಬೀದಿ, ಶ್ರೀ ಕೃಷ್ಣ, ರಾಘವೇಂದ್ರ, ಅನಂತೇಶ್ವರನ ಸನ್ನಿಧಿಯ ಓಡಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿಂಪಲ್ ಸ್ಟಾರ್, ಅನಂತೇಶ್ವರನ ಸನ್ನಿಧಿಯಲ್ಲಿ ತನಗೆ ಕಾಡಿದ ಪ್ರಶ್ನೆಗಳು, ಅದರಿಂದ ತನ್ನೊಳಗೊಬ್ಬ ಕಥೆಗಾರನ ಹುಟ್ಟಿದ ಬಗೆಯನ್ನು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ:Pension: ಈ ರಾಜ್ಯದಲ್ಲಿರುವ ಅವಿವಾಹಿತರಿಗೆ ಶೀಘ್ರದಲ್ಲೇ ಸಿಗಲಿದೆಯಂತೆ ಪಿಂಚಣಿ…

ಇದೇ ಪಯಣದಲ್ಲಿ ತಿಳಿದುಕೊಂಡ ಪುರಾಣ ಮತ್ತು ಇತಿಹಾಸ, ಅದರಿಂದ ಕಂಡುಕೊಂಡ ವಿಜ್ಞಾನ, ಈ ಇತಿಹಾಸದಿಂದ ಅಳವಡಿಸಿಕೊಂಡ ಆಧುನಿಕ ಕಥೆಗಳ ಸರಣಿಯನ್ನು ಆರಂಭಿಸಲು ರಕ್ಷಿತ್ ಶೆಟ್ಟಿ ಹೊರಟದ್ದಾರೆ. ಇದಕ್ಕೆ ‘ನಾ ಕಂಡಂತೆ’ ಎಂದು ರಕ್ಷಿತ್ ಹೆಸರಿಟ್ಟಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಪೋಸ್ಟ್ ನ ಪ್ರತಿ ಇಲ್ಲಿದೆ.

Advertisement

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ.

ಅಸ್ಮದಾಚಾರ್ಯಪರ್ಯನ್ತಾಂ ವನ್ದೆ ಗುರುಪರಂಪರಾಂ.

ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.

ನಾನು ಚಿಕ್ಕವನಾಗಿದ್ದಾಗ, ಪ್ರತಿ ಸೋಮವಾರ ನನ್ನ ತಾಯಿ ಶಾಲೆಯಿಂದ ನನ್ನನ್ನು ನೇರ ರಥಬೀದಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮೊದಲಿಗೆ ಅನಂತೇಶ್ವರನ ಸನ್ನಿಧಿ, ತದನಂತರ ಕೃಷ್ಣನ ದೇವಸ್ಥಾನ ಮತ್ತೆ ಗುರು ರಾಘವೇಂದ್ರ ದೇವಸ್ಥಾನದ ದರ್ಶನ. ನನ್ನ ಖುಷಿಗೆ ಮತ್ತೊಂದು ಕಾರಣ “ಸಂಪೂರ್ಣ” ಅಂಗಡಿಯಲ್ಲಿ ನಾವು ತೆಗೆದುಕೊಳ್ಳುತ್ತಿದ್ದ ಆ 5 ಸ್ಟಾರ್ ಚಾಕ್ಲೆಟ್. ನಮ್ಮ ಸೋಮವಾರದ ದಿನಚರಿಯ ಸಂಭ್ರಮ ಹೀಗಿರುತ್ತಿತ್ತು.

ಪ್ರತಿಬಾರಿ ನಾವು ದೇವಸ್ಥಾನಕ್ಕೆ ಹೋದಾಗ ನನಗೆ ಅದರ ಹಿಂದಿರುವ ಕಥೆಗಳನ್ನು ತಿಳಿದುಕೊಳ್ಳಲು ಎಲ್ಲಿಲ್ಲದ ಕುತೂಹಲ. ಒಂದಷ್ಟು ಕಥೆಗಳನ್ನು ಅಮ್ಮ ಹೇಳುತ್ತಿದ್ದರು, ಇನ್ನುಳಿದ ಕುತೂಹಲಕ್ಕೆ ಅಲ್ಲಿಗೆ ಬರುತ್ತಿದ್ದ ಜನರು ಬೆಳಕು ಚೆಲ್ಲುತ್ತಿದ್ದರು

ಉಳಿದ ಎಲ್ಲಾ ದೇವಸ್ಥಾನಗಳಿಗಿಂತ ನನ್ನನು ಅತ್ಯಂತವಾಗಿ ಸೆಳೆದಿದ್ದು “ಅನಂತೇಶ್ವರನ” ಸನ್ನಿಧಿ. ಕಾರಣ, ಶಿವ ನನ್ನ ಇಷ್ಟದೈವ. ಆದರೆ ಶಿವನಿಗೆ ಸಮರ್ಪಿತವಾದ ಅನಂತೇಶ್ವರನ ದೇಗುಲವು ಲಿಂಗಸ್ವರೂಪದಲ್ಲಿರುವ ಪರಶುರಾಮರು ಎಂದು ತಿಳಿದಾಗ, ಸಹಸ್ರಾರು ಪ್ರಶ್ನೆಗಳು ಕಾಡಲಾರಂಭಿಸಿತು. ಇನ್ನೂ ಉತ್ತರಗಳನ್ನು ಅರಸುತ್ತಾ ನಾನು ಸುತ್ತುತ್ತಿದ್ದೇನೆ, ಅದಕ್ಕೆ- ಏನೋ ನಾನೊಬ್ಬ ಕಥೆಗಾರನಾಗಬೇಕು ಎನ್ನುವ ಹಂಬಲ ನನ್ನಲ್ಲಿ ಹುಟ್ಟಿದ್ದು.

ಇದೇ ಹಿನ್ನೆಲೆಯಲ್ಲಿ “ನಾ ಕಂಡಂತೆ” ಒಂದು ಸಂವಾದಾತ್ಮಕ ಸರಣಿ. ನಮ್ಮ ಪುರಾಣಗಳು ಮತ್ತು ಇತಿಹಾಸ ಬರಿ ಕಥೆಗಳಲ್ಲ, ಅವು ಪುರಾತನ ಕಾಲದಿಂದ ನಮಗೆ ಬಳುವಳಿಯಾಗಿ ಬಂದಂತಹ ವಿಜ್ಞಾನ ಹಾಗೂ ಮನುಜಕುಲವನ್ನು ಇನ್ನಷ್ಟು ವಿಕಾಸಗೊಳಿಸುವಂತಹ ಅಧ್ಯಯನ. ನಾವು ಈ ಇತಿಹಾಸವನ್ನು ನಮ್ಮ ಆಧುನಿಕ ಕಥೆಗಳಿಗೆ ಅಡವಳಿಸಿ ಕೊಳ್ಳಲು ಸಾಧ್ಯವೆ ಎನ್ನುವ ಪ್ರಶ್ನೆಗೆ “ನಾ ಕಂಡಂತೆ” ಸರಣಿಯ ಮುಂಬರುವ ಸಂಚಿಕೆಗಳು ಉತ್ತರವಾಗಲಿವೆ.

“ನಿಮ್ಮೆಲ್ಲರಿಗೂ ನನ್ನ ಕಥಾಪ್ರಪಂಚಕ್ಕೆ ಸ್ವಾಗತ”

Advertisement

Udayavani is now on Telegram. Click here to join our channel and stay updated with the latest news.

Next