Advertisement

ಬನ್ನಿ ಭಾರತಕ್ಕೆ, ದೀಪಾವಳಿ ಆಚರಿಸೋಣ-ಆಸೀಸ್‌ PM ಆಲ್ಬನೀಸ್‌ಗೆ ಮೋದಿ ಕರೆಯೋಲೆ

10:02 PM May 24, 2023 | Team Udayavani |

ಸಿಡ್ನಿ/ನವದೆಹಲಿ: “ಈ ಬಾರಿಯ ದೀಪಾವಳಿಯನ್ನು, ನ.12ರಂದು ಭಾರತದಲ್ಲಿಯೇ ಆಚರಿಸೋಣ. ಜತೆಗೆ ವಿಶ್ವಕಪ್‌ ಕ್ರಿಕೆಟ್‌ ಅನ್ನೂ ನೋಡೋಣ’… ಇದು ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಅವರಿಗೆ ನೀಡಿದ ಆಹ್ವಾನ.

Advertisement

ಸಿಡ್ನಿಯಲ್ಲಿ ಬುಧವಾರ ಆ್ಯಂಟನಿ ಅಲ್ಬನೀಸ್‌ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಇಬ್ಬರು ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಆಹ್ವಾನವನ್ನು ಆಸೀಸ್‌ ಪ್ರಧಾನಿಯವರಿಗೆ, ಪ್ರಧಾನಿ ಮೋದಿ ನೀಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಟಿ20 ಕ್ರಿಕೆಟ್‌ನಂತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ಕ್ರಿಕೆಟ್‌ ವಿಶ್ವಕಪ್‌ ನಡೆಯಲಿದೆ. ಜತೆಗೆ ನ.12ರಂದು ಬೆಳಕಿನ ಹಬ್ಬಗಳ ದೀಪಾವಳಿಯೂ ಬರಲಿದೆ. ಆ ಅವಧಿಯಲ್ಲಿ ಭಾರತ ಪ್ರವಾಸ ಕೈಗೊಂಡರೆ ಹಬ್ಬದ ಆಚರಣೆ ಮತ್ತು ಕ್ರಿಕೆಟ್‌ ನೋಡಲೂ ಅವಕಾಶ ಲಭ್ಯವಾಗುತ್ತದೆ. ಹೀಗಾಗಿ, ಆ ಅವಧಿಯಲ್ಲಿ ಭಾರತಕ್ಕೆ ಬನ್ನಿ ಎಂದು ಪ್ರಧಾನಿ ಮೋದಿಯವರು ಆತಿಥೇಯ ಪ್ರಧಾನಿಗೆ ವಿಧ್ಯುಕ್ತ ಆಹ್ವಾನ ನೀಡಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಇಬ್ಬರು ನಾಯಕರ ನಡುವೆ ಆರನೇ ಭೇಟಿ ಇದು ಎಂದು ಹೇಳಿಕೊಂಡ ಪ್ರಧಾನಿ, ಎರಡೂ ದೇಶಗಳ ನಡುವಿನ ಬಾಂಧವ್ಯ ಬಿರುಸಾಗಿ ಬೆಳೆದಿದೆ ಎಂದರು.

ದೇಗುಲ ದಾಳಿ ಪ್ರಸ್ತಾಪ: ಖಲಿಸ್ತಾನಿ ಪರ ಗುಂಪುಗಳಿಂದ ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿ ದೇಗುಲಗಳ ಮೇಲೆ ನಡೆದ ದಾಳಿಯನ್ನು ಪ್ರಧಾನಿ ಆಲ್ಬನೀಸ್‌ ಜತೆಗೆ ಮೋದಿ ಪ್ರಸ್ತಾಪಿಸಿದ್ದಾರೆ. ಇಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಭರವಸೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು ಮೋದಿ.

Advertisement

ಕಾರ್ಯಪಡೆ ರಚನೆ: ಗ್ರೀನ್‌ ಹೈಡ್ರೋಜನ್‌ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಪಡೆಯ ಸ್ಥಾಪನೆ ಮಾಡುವ ಅಂಶವನ್ನೂ ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಕೆಲವೊಂದು ಖನಿಜ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಸಹಕಾರ ವೃದ್ಧಿಗೆ ಒಪ್ಪಿಕೊಳ್ಳಲಾಗಿದೆ ಎಂದರು ಪ್ರಧಾನಿ. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಬಾಂಧವ್ಯ ವೃದ್ಧಿಗಾಗಿ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಜಾರಿ ಮಾಡುವ ಬಗ್ಗೆ ಕೂಡ ಒಪ್ಪಿಕೊಳ್ಳಲಾಗಿದೆ ಎಂದು ಪ್ರಧಾನಿ ಪ್ರಕಟಿಸಿದರು.

ತ್ರಿವರ್ಣ ಧ್ವಜ: ಸಿಡ್ನಿಯ ಪ್ರಧಾನ ಕೇಂದ್ರಗಳಾಗಿರುವ ಸಿಡ್ನಿ ಹಾರ್ಬರ್‌ ಬ್ರಿಡ್ಜ್ ಮತ್ತು ಒಪೇರಾ ಹೌಸ್‌ನಲ್ಲಿ ಪ್ರಧಾನಿ ಮೋದಿ ಭೇಟಿ ಗೌರವಾರ್ಥ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು.

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ದೂತಾವಾಸ: ಆಲ್ಬನೀಸ್‌
ಬ್ರಿಸ್ಬೇನ್‌ನಲ್ಲಿ ಭಾರತದ ದೂತಾವಾಸ ಕಚೇರಿ ಸ್ಥಾಪನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಾಗ್ಧಾನ ಮಾಡಿರುವಂತೆಯೇ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಬೆಂಗಳೂರಿನಲ್ಲಿ ದೂತಾವಾಸ ಕಚೇರಿ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಒಂದು ತಿಂಗಳಲ್ಲಿಯೇ ಅದು ಕಾರ್ಯಾರಂಭ ಮಾಡಲಿದೆ ಎಂದೂ ಅವರು ಪ್ರಕಟಿಸಿದ್ದಾರೆ. ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ ಬಳಿಕ ಐದನೇ ನಗರ ಉದ್ಯಾನನಗರಿಯಾಗಲಿದೆ. ಹೊಸ ನಿರ್ಧಾರದಿಂದಾಗಿ ಆಸ್ಟ್ರೇಲಿಯಾದ ವಿವಿಗಳಿಗೆ ತೆರಳಲು ಬೇಕಾಗಿರುವ ವೀಸಾ ಮತ್ತು ಇತರ ಅಗತ್ಯ ಪೂರೈಕೆಗಳನ್ನು ಪೂರೈಸಲು ಕರ್ನಾಟಕದವರಿಗೆ ಹೆಚ್ಚಿನ ರೀತಿ¿ಲ್ಲಿ ನೆರವಾಗಲಿದೆ. ಜತೆಗೆ ಉದ್ದಿಮೆ-ವಾಣಿಜ್ಯಿಕ ಕ್ಷೇತ್ರದವರಿಗೆ ಕೂಡ ಅನುಕೂಲವಾಗಲಿದೆ. ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್ ಮತ್ತು ಪರ್ಥ್ನಲ್ಲಿ ದೂತಾವಾಸ ಕಚೇರಿಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next