ಬಾಳೆ ಬೆಳೆಯುವ ರೈತರು ಸ್ವಲ್ಪ ಈ ಕಡೆ ನೋಡಿ. ಬೆಳ್ತಂಗಡಿಯ ಬೈಕುಡೆ ಶ್ಯಾಸುಂದರ ಭಟ್ಟರು ಇಸ್ರೇಲ್‌ನಿಂದ ಬಾಳೆ ತಳಿ ತರಿಸಿ, ಕಸಿ ಮಾಡಿ ಹೊಸ ಮಾದರಿಯ ಬಾಳೆ ಬೆಳೆಯುತ್ತಿದ್ದಾರೆ. ಇದನ್ನು ನೀವೂ ಟ್ರೈ ಮಾಡಬಹುದು.
ಬಾಳೆ ಕೃಷಿಗೆ ಹೊಸ ತಳಿಯೊಂದು ಸೇರ್ಪಡೆಯಾಗುತ್ತಿದೆ. ಇದು ಭಾರತಕ್ಕೆ ಇಸ್ರೇಲ್ ದೇಶದಿಂದ ಬಂದಿದೆ. ಕಡಿಮೆ ನೀರು ಬಳೆಸಿ ಹೆಚ್ಚು ಬೆಳೆಯುವ ಆ ದೇಶದ ಕೌಶಲಕ್ಕೆ ಹೊಂದಿಕೊಂಡಿದ್ದ ಈ ತಳಿಗೆ ಅಲ್ಲಿ ಇರಿಸಿದ ಹೆಸರು ವಿಲಿಯಮ್ಸ್ ಬಾಳೆ. ಇಸ್ರೇಲ್ ಯಾತ್ರೆ ಮಾಡಿದವರ ಮೂಲಕ ಇದರ ಚಿಕ್ಕ ಗಿಡಗಳನ್ನು ತರಿಸಿದವರು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬೈಕುಡೆ ಶ್ಯಾಮಸುಂದರ ಭಟ್ಟರು. ಕಸಿ ಕಲೆಯಲ್ಲಿ ನಿಪುಣರಾದ ಅವರಿಗೆ, ಅಪಾರ ಸಸ್ಯ ಜಾnನವೂ ಇದೆ. ಹೀಗೆ ತಂದ ಗಿಡಗಳನ್ನು ಕೆಲವರಿಗೆ ಹಂಚಿದ್ದಾರೆ. ಆ ಪೈಕಿ ಅವರದೇ ಗ್ರಾಮದ ಪೆರ್ನಡ್ಕದ ಮಾರ್ಷಲ್ ವೇಗಸ್ ಅವರು ನೆಟ್ಟು ಬೆಳೆಸಿದ ಗಿಡ ಆರೇ ತಿಂಗಳಿಗೆ ಗೊನೆ ಹಾಕಿ ಒಂಭತ್ತನೆ ತಿಂಗಳಲ್ಲಿ ಕಟಾವಿಗೆ ಸಿದ್ಧವಾಗಿದೆ.
ವಿಲಿಯಮ್ಸ್ ತಳಿ ಸದ್ಯಕ್ಕೆ ಕರಾವಳಿಯ ಯಾವುದೇ ಮಣ್ಣಿಗೆ ಹೊಂದಿಕೊಳ್ಳುತ್ತದೆ. ಇಲ್ಲಿರುವ ಮಳೆ, ಬಿಸಿಲು ಅದರ ವ್ಯವಸಾಯಕ್ಕೆ ಅನುಕೂಲವಾಗಿದೆ ಎಂಬುದು ಸಾಬೀತಾಗಿದೆ. ಕಾಯಿಗಳು ಗಾತ್ರ ಮತ್ತು ಆಕೃತಿಯಲ್ಲಿ ಕ್ಯಾವೆಂಡಿಶ್ ತಳಿಯ ಹಾಗೆ ಇದ್ದರೂ ಹಣ್ಣು ಅದಕ್ಕಿಂತ ಭಿನ್ನವಾಗಿ ಹೆಚ್ಚು ಸಿಹಿ ಮತ್ತು ಸ್ವಾದಿಷ್ಟವಾಗಿದೆ.
ಹಣ್ಣಾಗುವಾಗಲೇ ಚಿಪ್ಪಿನಿಂದ ಕದಲಿ ಉದುರುವುದಿಲ್ಲ. ಒಂದು ಗೊನೆಯಲ್ಲಿ ಎಂಟು ಚಿಪ್ಪುಗಳು ಬಂದಿದ್ದು 52 ಕಿ.ಲೋ ತೂಕವೂ ಇದೆಯೆಂಬುದು ಅಚ್ಚರಿಯ ವಿಷಯ. ಸುಮಾರು ನಾಲ್ಕು ಅಡಿ ಎತ್ತರವಾಗಿಯೂ ಇದೆ.
ಮಾರ್ಷಲ್ ಅವರು ಈ ಬಾಳೆಗೆ ಪ್ರತೀ ತಿಂಗಳೂ ಸೆಗಣಿ ಗೊಬ್ಬರ ಮತ್ತು ಸುಡುಮಣ್ಣು ಹೊರತು ಯಾವುದೇ ರಾಸಾಯನಿಕ ಗೊಬ್ಬರ ನೀಡಿಲ್ಲ. ಆದರೂ ಅದು ಎಲೆಗಳನ್ನು ಬಿಡುವ ವೇಗ ತ್ವರಿತವಾಗಿದೆ. ಕ್ಯಾವೆಂಡಿಶ್ ತಳಿಗಿಂತ ಎಷ್ಟೋ ಎತ್ತರವಾಗಿರುವ ಬಾಳೆ, ಯಾವುದೇ ರೀತಿಯ ಗಾಳಿಯ ಹೊಡೆತವನ್ನೂ ಸಹಿಸಿಕೊಳ್ಳುವಷ್ಟು ದೃಢವಾಗಿದೆ. ಬೇರು ಮತ್ತು ಸುಳಿಯನ್ನು ಕಾಡುವ ರೋಗ ಹಾಗೂ ಕೀಟಗಳಿಂದ ಮುಕ್ತವಾಗಿದೆ. ಮುಂದಿನ ಕಂದು ಈಗಾಗಲೇ ಬೆಳೆಯುತ್ತಿದ್ದು ಎರಡನೆಯ ಗೊನೆ ಹಾಕಲು ಬೇಕಾಗುವ ಕಾಲಾವಧಿ ಇನ್ನೂ ಕಡಿಮೆ ಎನ್ನುತ್ತಾರೆ ಕಸಿ ಪರಿಣತ ಶ್ಯಾಮಸುಂದರ ಭಟ್ಟರು. ಕ್ರಮಬದ್ಧವಾಗಿ ವ್ಯವಸಾಯ ಮಾಡುವುದರಿಂದ ಆರೇ ತಿಂಗಳಲ್ಲಿ ಗೊನೆ ಹಾಕುವ ಈ ತಳಿ, ರೈತನಿಗೆ ಶೀಘ್ರ ಪ್ರತಿಫಲ ಕೊಡುವ ಕಾಮಧೇನುವಾಗಬಹುದು ಎಂಬ ನಿರೀಕ್ಷೆ ಮಾರ್ಷಲ್ ಅವರದು.
– ಪ.ರಾಮಕೃಷ್ಣ ಶಾಸ್ತ್ರಿ