Advertisement

ನೋಡ ಬನ್ನಿ ಚಂಪಾ ಷಷ್ಠೀ

10:07 AM Dec 09, 2021 | Team Udayavani |

ಸುತ್ತಲೂ ಜಗಮಗಿಸುತ್ತಿರುವ ದೀಪಗಳು, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಜನರ ಗುಂಪು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿರುವ ಅಂಗಡಿ ಮುಂಗಟ್ಟುಗಳು ಇದಿಷ್ಟು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬಳಿ ಕಂಡು‌ಬಂದ ದೃಶ್ಯ.

Advertisement

ನಾಗ‌ ಶ್ರೇಷ್ಠ ಕ್ಷೇತ್ರ ಎಂದು ಪ್ರಸಿದ್ಧಿಯಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠೀ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿವೆ. ಕಾರ್ತಿಕ ಲಕ್ಷ ದೀಪೋತ್ಸವದಲ್ಲಿ ವಿಶೇಷ ಉತ್ಸವಗಳೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತದೆ. ರಾಮ ಲಕ್ಷ್ಮಣ ಎಂಬ ಎರಡು ಬೃಹತ್ ಒಲೆಗಳಲ್ಲಿ ಅಗ್ನಿ ಪ್ರಜ್ವಲಿಸುವ ಮೂಲಕ ದೇವಳದಲ್ಲಿ ಅನ್ನಪೂರ್ಣೇಶ್ವರಿಯನ್ನು ಆಹ್ವಾನಿಸಿ, ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ಮಡೆಯುವಂತೆ ಪ್ರಾರ್ಥಿಸಲಾಗುತ್ತದೆ.

ಮಾರ್ಗಶಿರ ಮಾಸದ ಚತುರ್ಥಿಯಂದು ಎಂದಿನಂತೆ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಸಂಧ್ಯಾ ಕಾಲಕ್ಕೆ ಪಲ್ಲಕ್ಕಿ ಹಾಗೂ ಬಂಡಿ ಉತ್ಸವಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಳದ ಆನೆಯೊಂದಿಗೆ ಪ್ರಾರಂಭವಾಗಿ ಛತ್ರ, ಚಾಮರ, ವಾದ್ಯ, ಗೀತಗಳೊಂದಿಗೆ ಉತ್ಸವ ದೇವಾಲಯದ ಹೊರ ಪ್ರಾಕಾರದಲ್ಲಿ ಜರುಗುತ್ತದೆ. ಈ ವೇಳೆ ಸಂಗೀತ ಗಾಯನ, ವಾದ್ಯಗಳ ಸೇವೆ ಸಲ್ಲಿಸುವ ಹರಕೆ ಹೊತ್ತ ಭಕ್ತರಿಗೆ ಅವಕಾಶವನ್ನು ನೀಡಲಾಗುತ್ತದೆ. ಈ ಉತ್ಸವಗಳನ್ನು ಚಂಪಾ ಷಷ್ಠೀ ಸಮಯದಲ್ಲಿ ಮಾತ್ರ ಮಾಡುವುದು ವಿಶೇಷ.

ಚಂಪಾ ಷಷ್ಠೀ ರಥೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದು ಮಡೆ ಮಡೆ ಸ್ನಾನ. ಶ್ರೀ ಕ್ಷೇತ್ರದ ಪುಣ್ಯ ನದಿ ಕುಮಾರಧಾರದಿಂದ ಸನ್ನಿಧಾನದವರೆಗೆ‌ ಸುಮಾರು ೫ ಕಿ.ಮೀ ಉರುಳು ಸೇವೆ ಮಾಡುವ ಮೂಲಕ  ಭಕ್ತಾದಿಗಳು ಹರಕೆ ಸಲ್ಲಿಸುವುದು ವಾಡಿಕೆ. ರಸ್ತೆಯಲ್ಲಿ ಈ ಭಕ್ತಾದಿಗಳಿಗೆಂದೇ ವಿಶೇಷವಾಗಿ ಉರುಳು ಸೇವೆ ಪಥವನ್ನು ನಿರ್ಮಾಣ ಮಾಡಲಾಗುತ್ತದೆ. ಕಲ್ಲು, ಮಣ್ಣಿನ ನಡುವೆ ಜಾಗಟೆ, ಶಂಖ, ವಿಷ಼ಲ್ ಮುಂತಾದವುಗಳ ಜೊತೆ, ಸುಬ್ರಹ್ಮಣ್ಯ ದೇವರ ನಾಮ ಸ್ಮರಣೆ ಮಾಡುತ್ತಾ ಭಕ್ತಾದಿಗಳು ಉರುಳು ಸೇವೆ ಮಾಡುತ್ತಾರೆ.

Advertisement

ದೇವಾಲಯಗಳಲ್ಲಿನ ಉತ್ಸವಗಳು ಜನರ ಭಕ್ತಿ ಭಾವಗಳ ಸಂಕೇತ ಮಾತ್ರವಲ್ಲ. ಅದು ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ದೇಹ ದಂಡನೆಗೆ ಸೇವೆಗಳ‌ ಹೆಸರು, ಆರೋಗ್ಯ ವರ್ಧನೆಗಾಗಿ ವ್ರತ, ಕಥೆ, ಅನುಷ್ಠಾನಗಳನ್ನು ಆಚರಿಸುವ ಕ್ರಮ ಬೆಳೆದು ಬಂದಿದೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಶತಮಾನಗಳ ಇತಿಹಾಸವುಳ್ಳ ಚಂಪಾ ಷಷ್ಠೀ ಬ್ರಹ್ಮ ರಥೋತ್ಸವ ಪ್ರಾರಂಭವಾಗಿದೆ.

-ಶ್ರೀರಕ್ಷಾ ಶಂಕರ್, ಎಸ್.ಡಿ.ಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next