ದಿನಗಟ್ಟಲೆ ಮಾತನಾಡಿದರೂ ಈ ಪತ್ರ ಬೇರೆ ಓದಬೇಕಾ? ಎಂದು ಬೇಸರಿಸಬೇಡ. ಸೂರ್ಯನ ಸ್ಥಾನವನ್ನು ಚಂದ್ರ ಆಕ್ರಮಿಸಿ ಅದಲು ಬದಲಾದರೂ ಮುಗಿಯದ ನಮ್ಮ ಮಾತಿನ ಸರಣಿಯಲ್ಲಿ ಅದೆಷ್ಟೇ ಕನಸು, ಮೆಚ್ಚುಗೆ ಸೂಸಿದರೂ ಪತ್ರ ನೀಡುವ ಆತ್ಮೀಯತೆ, ಸುಮಧುರ ಭಾವ, ತನ್ಮಯತೆಯನ್ನು ಮತಾವ ಪರಿಕರವೂ ನೀಡದು.
Advertisement
ನೀನೊಬ್ಬ ಸರಳ, ಸಹಜ, ಸುಂದರ ಹುಡುಗ ಕಣೋ. ಬೇಡದೆ ವರ ಕೊಡದ ದೇವರಿಲ್ಲ. ಅಳದೆ ಹಾಲುಣಿಸುವ ತಾಯಿಯಿಲ್ಲವೆನ್ನುತ್ತಾರೆ. ಆದರೆ, ಏನೊಂದೂ ಕೇಳದೆ ಅಷ್ಟೊಂದು ಸುಪ್ರೀತಿಯನ್ನು ನೀಡುವ ನಿನ್ನ ಮನದ ಚೆಲುವು ಅವ್ಯಕ್ತ ಕಣೋ. ನಿನ್ನದು ವೃತ್ತಿಪರ ಕಾಳಜಿ ಬಿಡು. ನಾನು ಸದಾ ಖುಷಿಯಿಂದಿರಬೇಕು, ಕಂಬನಿ ಮಿಡಿಯಬಾರದೆಂದು ಹಂಬಲಿಸುವೆಯಲ್ಲ; ಅದಕ್ಕಾಗಿ ಎಂಥ ರಿ… ತೆಗೆದುಕೊಳ್ಳಲೂ ಹೊರಡುವೆಯಲ್ಲ? ಆ ನಿನ್ನ ಗುಣಕ್ಕೆ ನಾನು ಸೋತು ಹೋದೆ. ಆ ನಿನ್ನ ಮುಗ್ಧ ಒಲವಿಗೆ ಮರುಳಾಗಿ ಹೋದೆ. ಮನದ ಹೂ ಪಕಳೆಗೆ ಪ್ರೀತಿಯ ಸುವಾಸನೆ ಸುತ್ತಿದವ ನೀನು. ಸಿಂಗಾರದ ಕನಸಿಗೆ ರಂಗವಲ್ಲಿ ತುಂಬಿ ಬದುಕಿಗೆ ಸಂತಸ ತಂದ ಕಿನ್ನರ ನೀನು. ಹೆಣ್ಣಿನ ಅಂತರಂಗದ ನೋವ ಭೇದಿಸಿ ಸಾಂತ್ವನ, ನಲಿವಿನ ಸ್ವರ್ಗ ಸೂಸುವ ಪ್ರೇಮಮೂರ್ತಿ ನೀನು. ನಿನಗೆ ನಾನೇ ಜಗತ್ತು, ನನಗೆ ನಿನ್ನ ಆಸರೆಯೇ ಸಂಪತ್ತು. ಆದರೆ, ಈ ಜಗತ್ತಿನಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಸಂಪತ್ತು ಅವಶ್ಯಕ. ಜೊತೆಗೆ ಪರಿಶ್ರಮ, ದೃಢ ಸಂಕಲ್ಪ ನಮ್ಮಿಬ್ಬರಲ್ಲೂ ಅಚ್ಚಳಿಯದೆ ಇರಬೇಕಾದುದು ಅಗತ್ಯ. ಅದು ಕೊನೆವರೆಗೂ ನಮ್ಮದಾಗಿರಲಿ. ಇಷ್ಟಾಗಿಬಿಟ್ಟರೆ, ಸುಖದ ದಾಂಪತ್ಯ ಜೀವನ ನಮ್ಮದಾಗುತ್ತದೆ. ಅಂದು ಬರುವೆ ಓಡೋಡಿ ಎಲ್ಲ ಬಂಧನಗಳ ಮೀರಿ. ಅಲ್ಲಿವರೆಗೂ ತಾಳ್ಮೆಯಿಂದಿರೂ ಚಿನ್ನಾ.
ಪಲ್ಲವಿ ಎಡೆಯೂರು