Advertisement

ಓಡೋಡಿ ಬಂದುಬಿಡು ಅಕಾಲಿಕ ಮಳೆಯಂತೆ..

06:00 AM May 22, 2018 | |

ಫ‌ುಟ್‌ಪಾತ್‌ ಪಕ್ಕದಲ್ಲಿ ನಾವಿಬ್ಬರೂ ಒಂದೇ ಪ್ಲೇಟಿನಲ್ಲಿ ಪಾನಿಪುರಿಯನ್ನು ಹಂಚಿ ತಿಂದದ್ದು. ಬದುಕನ್ನೂ ಹೀಗೇ ನಿನ್ನೊಟ್ಟಿಗೆ ಹಂಚಿಕೊಳ್ಳೋ ಅದಮ್ಯ ಬಯಕೆ ಹೆಡೆ ಎತ್ತಿತ್ತು ಆಗ. ನೀನು ಕಾಲೇಜಿಗೆ ತಡವಾಗಿ ಬಂದಾಗ ಅದೆಂಥದೋ ಸಂಕಟ. 

Advertisement

ಕಾಡುವ ಹುಡುಗಿಯೇ…
“ಐ ಲವ್‌ ಯು’ ಅಂತ ನಾಲ್ಕು ವರ್ಷಗಳ ಮೊದಲೇ ಎದೆಯಲ್ಲಿರುವ ಗುಟ್ಟುಗಳನ್ನೆಲ್ಲಾ ಗುಂಡಿಗೆ ಗಟ್ಟಿಮಾಡಿಕೊಂಡು ಹೇಳಿಬಿಡಬೇಕಿತ್ತು.   ತಪ್ಪುಮಾಡಿಬಿಟ್ಟೆ ! ಈಗ ನೋಡು, ಅರೆಘಳಿಗೆಯೂ ಬಿಡದೇ ಎದೆಯ ಕದ ತಟ್ಟುವ ನಿನ್ನ ಕನವರಿಕೆಗಳಿಗೆ ಕಡಿವಾಣದ ಬೀಗ ಜಡಿಯಲಾಗದೆ ತೊಳಲಾಡುತ್ತಿದ್ದೇನೆ. ಎಲ್ಲವನ್ನೂ ಹೇಳಿಬಿಟ್ಟಿದ್ದರೆ,  ಹೀಗೆ ಪಶ್ಚಾತ್ತಾಪದ ಕುದಿಯಿಂದ ನರಳುವಂಥ ಯಾತನಾಘಳಿಗೆ ಬರುತ್ತಿರಲಿಲ್ಲ. ಕೆನ್ನೆ ಬಯಲೀಗ ಶಾಶ್ವತ ನೀರಾವರಿ ಜಾಗದಂತಾಗಿದೆ. ನಿಜ ಹೇಳ್ತೀನಿ; ಅವತ್ತಿನ ನಿನ್ನ ಸಾಹಚರ್ಯದ ದಿನಗಳೆಲ್ಲಾ ಅಮೃತಘಳಿಗೆಗಳೇ. ಆ ಮುತ್ತಿನಂಥ ದಿನಗಳಿಗೆಲ್ಲಿ ಆಪತ್ತು ಬಂದೀತೋ ಎಂದು ಎದೆಮಾತನ್ನೆಲ್ಲಾ ಅದುಮಿಕೊಂಡುಬಿಟ್ಟೆ. ಪ್ರೀತಿಯ ಚಕಾರ ಎತ್ತಿ ನಮ್ಮ ಸ್ನೇಹದ ಸಾಂಗತ್ಯಕ್ಕೆಲ್ಲಿ ಕೊಳ್ಳಿ ಇಟ್ಟುಬಿಡುತ್ತೇನೋ ಎಂದು ಭಯಂಕರ ದಿಗಿಲಾಗಿದ್ದೆ. 

ಈಗ ಇಲ್ಲಿ ಉಳಿದ ಮಾತುಗಳ ಭಾರಕ್ಕೆ ಬದುಕೇ ಅಸಹನೀಯ. ಹೆಚ್ಚಾ ಕಡಿಮೆ ಬದುಕಲ್ಲೆಲ್ಲಾ ಗಾಢ ಕತ್ತಲು. ನೆನಪಿದ್ಯಾ? ಫ‌ುಟ್‌ಪಾತ್‌ ಪಕ್ಕದಲ್ಲಿ ನಾವಿಬ್ಬರೂ ಒಂದೇ ಪ್ಲೇಟಿನಲ್ಲಿ ಪಾನಿಪುರಿಯನ್ನು ಹಂಚಿ ತಿಂದದ್ದು. ಬದುಕನ್ನೂ ಹೀಗೇ ನಿನ್ನೊಟ್ಟಿಗೆ ಹಂಚಿಕೊಳ್ಳೋ ಅದಮ್ಯ ಬಯಕೆ ಹೆಡೆ ಎತ್ತಿತ್ತು ಆಗ. ನೀನು ಕಾಲೇಜಿಗೆ ತಡವಾಗಿ ಬಂದಾಗ ಅದೆಂಥದೋ ಗೋಜಲು ಸಂಕಟ. ಸೆಕೆಂಡ್‌ ಫ್ಲೋರ್‌ ಲೈಬ್ರರಿಯಲ್ಲಿ ಮಧ್ಯಾಹ್ನದ ಮೇಲೆ ನಾವಿಬ್ಬರೂ ಎದುರುಬದುರಾಗಿ ಕೂತಿರುತ್ತಿದ್ದಾಗ ತುಟಿ ಪಿಟಿಕ್ಕೆನ್ನದ ಮೌನ. ನಾನಂತೂ ಶ್ರದ್ಧೆಯಿಂದ ಓದುತ್ತಿದ್ದದ್ದೇನೋ ನೂರರಷ್ಟು ಸತ್ಯ. ಆದರೆ ಪುಸ್ತಕವನ್ನಲ್ಲ! ಲೈಬ್ರರಿ ಮೇಡಮ್ಮನನ್ನೂ ಒಳಗೊಂಡಂತೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದ ಕಣ್ಣಿಗೂ ಮಣ್ಣೆರಚಿ ನಿನ್ನ ಕಣ್ಣುಗಳನ್ನೋದಿದ ಮೊದಲ ಪ್ರೇಮಪ್ರಕರಣ ಅದು. ಆಗ ನಮ್ಮಮ್ಮನ ಸೊಸೆಯಾಗುತ್ತೀಯೆಂದು ಆಸೆಯ ಸಸಿಗಳನ್ನು ಮೊದಲ ಬಾರಿಗೆ ಮನದಲ್ಲೇ ನೆಟ್ಟಿ ನೀರೆರೆದಿದ್ದೆ!

ಅವತ್ತು ಸಂಜೆಮಳೆ. ಒಂದೇ ಬಣ್ಣದ (ಬಣ್ಣಬಣ್ಣದ ಕನಸುಗಳೂ ಕೂಡ)ಕೊಡೆಯ ಅಡಿಯಲ್ಲಿ ಭುಜಕ್ಕೆ ಭುಜಗಳು ಮುತ್ತಿಟ್ಟುಕೊಂಡಿದ್ದು.. ನೀನು “ಡಿಸ್ಟೆನ್ಸ್ ಮೇಂಟೇನ್‌’ ಮಾಡಲಾಗದೆ ತೀರಾ ಪಕ್ಕದಲ್ಲೇ ಅಂಟಿಕೊಂಡಿದ್ದೆ. ಸಿಹಿ ಅನಾಹುತದ ಸುನಾಮಿಯೇಳುವ ಅಬ್ಬರವಿತ್ತು. ನೀನು ಗಾಬರಿ ಬಿದ್ದ ಮೊಲದ ಮರಿಯಂತಾಗಿದ್ದೆ.ಪಕ್ಕದಲ್ಲಿ ನಿನ್ನ ಸಂತೈಸುವ ಪ್ರೇಮಸಂತನಂತೆ ತೋಳಿನಾಸರೆ, ಆ ಉಕ್ಕುವ ನಿನ್ನ ಏದುಸಿರ ರಭಸಕ್ಕೆ ನನ್ನ ಹೃದಯದ ಬಲೂನು ಎಲ್ಲಿ “ಢಂ’ ಅಂದುಬಿಡುತ್ತೋ ಅನ್ನೋ ತಳಮಳ. ನನ್ನ ಹೃದಯದ ಸದ್ದು ನಿನ್ನ ಕಿವಿಗೂ ಸ್ಪಷ್ಟವಾಗಿ ಕೇಳುತ್ತಿತ್ತು. ಗಲ್ಲದ ಇಳಿಜಾರಿನಲ್ಲಿ ದುಂಡನೆಯ ಹನಿಗಳ ಮುತ್ತು ಒಂದೊಂದಾಗಿ ನನ್ನ ಕೈ ಮೇಲೆ ಉದುರುತ್ತಿತ್ತು. ಆಹಾ, ತಣ್ಣನೆ ಗಾಳಿ ತೀಡಿ ತೀಡಿ ಅದೆಂತದೋ ಸಾಂಗತ್ಯದ ಭಾವನೆಗಳನ್ನೆಲ್ಲಾ ಬಡಿದೆಬ್ಬಿಸಿತ್ತು. ಕಮ್ಮನೆಯ ಕೋಲಾಹಲ. ಉಹುಂ; ಅಪ್ಪಿತಪ್ಪಿಯೂ ಅಲ್ಲಿ ನನ್ನ ಹೃದಯ ಜಾರಲೇ ಇಲ್ಲ. ನೀನೂ ತುಟಿ ಬಿಚ್ಚಲಿಲ್ಲ. 

ಕಾಲೇಜು ಮುಗಿಯುತ್ತಿದ್ದಂತೆಯೇ ಇದನ್ನೆಲ್ಲ ಹೇಳುವ ಹಪಾಹಪಿ ನನ್ನದಾಗಿತ್ತು. ಆದರೆ ನಿಮ್ಮಪ್ಪನಿಗೆ ದೂರದ ಊರಿನಲ್ಲೆಲ್ಲೋ ನೌಕರಿ ಅಂತ ಮನೆ ಖಾಲಿ ಮಾಡಿದ್ದು, ನಿನ್ನ ಫ್ರೆಂಡ್‌ ಹೇಳಿದ್ಮೇಲೆ ಗೊತ್ತಾಯ್ತು. ಫೋನ್‌ ಸ್ವಿಚ್‌ ಆಫ್ ಆಗಿತ್ತು. ಪತ್ತೇನೇ ಇಲ್ಲ. ಫೇಸುºಕ್ಕಲ್ಲೂ ಭೂತಕನ್ನಡಿ ಹಾಕಿ ಹುಡುಕ್ಕಿ¨ªಾಯ್ತು. ಎಲ್ಲಿದ್ಯಾ, ಹೇಗಿದ್ಯಾ ಗೊತ್ತಿಲ್ಲ. ನಾನು ನೆನಪಾಗ್ತಿàನಾ ಹೇಳು ಪಾಪು?

Advertisement

ಕೇಳು; ಕ್ಷಣಕ್ಷಣವನ್ನೂ ಶತಮಾನಗಳಂತೆ ಅಖಂಡ ಮೂರು ಮುಕ್ಕಾಲು ವರ್ಷಗಳ ಹಗಲನ್ನೂ, ಅಷ್ಟೇ ನಿದ್ರೆ ಮುನಿಸಿಕೊಂಡ ರಾತ್ರಿಗಳ ಗಾಢ ಭೀಕರತೆಯನ್ನು ಅನುಭವಿಸಿ ಈಗ ಜರ್ಜರಿತವಾಗಿದ್ದೇನೆ. ನೀ ಜೊತೆಗಿಲ್ಲದಿದ್ದರೆ, ಜಗದ  ಸಂಕಟಗಳನ್ನೆಲ್ಲಾ ಅಚ್ಚುಕಟ್ಟಾಗಿ ನನ್ನ ಮೇಲೆ ಸುರಿದಂತೆ ನಿತ್ರಾಣ. ಒಬ್ಬೊಬ್ಬನೇ ಮಾತಾಡಿಕೊಳ್ಳುತ್ತೇನೆ. ನನಗೆ ನಾನೇ ಬೈದುಕೊಳ್ಳುತ್ತೇನೆ. ಅಪರಾತ್ರಿಯಲ್ಲಿ ಏಕಾಂಗಿ ಚುಕ್ಕಿ ನೋಡುತ್ತಾ ಕೂತಾಗ ನನ್ನ ಜೋಡಿಕಂಗಳಲ್ಲಿ ಧಿಮಿಧಿಮಿ ಜಲಪಾತ. ನಂಬು; ನಿನ್ನ ಈ ಸುದೀರ್ಘ‌ ಗೈರಿನ ಮೌನದ ಚಾಟಿ ಏಟುಗಳು ನನ್ನನ್ನು ಇನ್ನಿಲ್ಲದಂತೆ ಬೆಂಡೆತ್ತಿವೆ. ಯಾತನೆಯ ರುಚಿ ತುಂಬಾ ಭೀಕರವಾದುದು.ಆ ನಿನ್ನ ತಟಸ್ಥ ನಿಲುವು ಚೂಪುಗತ್ತಿಯಂತೆ ಝಳಪಿಸುತ್ತಾ ಹೃದಯ ತಿವಿದಂತೆ ಅನ್ನಿಸಿ ತಡೆಯಲಾರದ ಸಂಕಟ. ಈ ಒಬ್ಬಂಟಿಗನ ಒದ್ದಾಟಗಳಿಗೆ ಕಡಿವಾಣದ ಯಾವ ಕಾಲುದಾರಿಯೂ ಕಾಣುತ್ತಿಲ್ಲ. ಬಂದುಬಿಡು ಅಕಾಲಿಕ ಮಳೆಯಂತೆ.

ನನ್ನ ಉಚಾÌಸ ನಿಶ್ವಾಸದ ರೂವಾರಿ ನೀನಲ್ಲದೇ ಮತ್ಯಾರು? ನನ್ನ ದೇಹದ ಪ್ರತೀ ಜೀವಕೋಶಗಳ ಚಿತ್ತವೂ ನಿನ್ನನ್ನೇ ಹಂಬಲಿಸುತ್ತಿದೆ. ಆಂತರ್ಯದ “ಅಲಾರಂ’ ನಿನ್ನ ಹೆಸರೇ ಜಪಿಸುತ್ತಿದೆ. ಈ ಹೃದ್ಗಾಯದ ನೋವಿಗೆ ಒಲವ ಮುಲಾಮು ಸವರಲು ಹಿಂತಿರುಗಿ ಬರುತ್ತೀಯೆಂಬ ಅದಮ್ಯ ಭರವಸೆಯಲ್ಲಿ ಕಾದಿರುವೆ….

ಇಂತಿ 
ಕಡು ವಿರಹಿ
ಹೃದಯರವಿ

Advertisement

Udayavani is now on Telegram. Click here to join our channel and stay updated with the latest news.

Next