Advertisement

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

08:19 PM Oct 27, 2021 | Shreeram Nayak |

ವಿಜಯಪುರ: ಇನ್ನೂ ಆರು ದಿನ ತಡೆಯಿರಿ, ನ. 2ರಂದು ಉಪಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಆಗ ಯಾರು ಫಸ್ಟ್‌, ಯಾರು ಸೆಕೆಂಡ್‌, ಯಾರು ಲಾಸ್ಟ್‌, ಯಾರ ಠೇವಣಿ ಜಪ್ತಿ ಆಗುತ್ತದೆ ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದರು.

Advertisement

ನಗರದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ನಡೆಯುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರಿಂದ ತೆರವಾದ ಕ್ಷೇತ್ರಗಳಿಗೆ. ಸಿಂದಗಿ ಜೆಡಿಎಸ್‌ ಶಾಸಕರಿದ್ದ ಕ್ಷೇತ್ರ, ಹಾನಗಲ್‌ ಬಿಜೆಪಿ ಶಾಸಕರಿದ್ದ ಕ್ಷೇತ್ರ. ಈ ಎರಡೂ ಕ್ಷೇತ್ರಗಳು ನಮ್ಮ ವಿರೋಧ ಪಕ್ಷಗಳ ಶಾಸಕರಿದ್ದ ಕ್ಷೇತ್ರಗಳು. ಎರಡೂ ಕಡೆ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ತನ್ನ ಸಾಮರ್ಥ್ಯ ತೋರಲಿದೆ. ಈ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. 2023ರಲ್ಲಿ ಕಾಂಗ್ರೆಸ್‌ ಮತ್ತೆ 150 ಸ್ಥಾನ ಗೆಲ್ಲುವುದರೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದರು.

ಬಿಜೆಪಿ ಆಡಳಿತದಿಂದ ದೇಶ ಹಾಗೂ ರಾಜ್ಯದ ಜನರು ರೋಸಿ ಹೋಗಿದ್ದಾರೆ. ನಿತ್ಯವೂ ಏರುತ್ತಿರುವ ಇಂಧನ ಬೆಲೆ ಜತೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಪರಿಣಾಮ ಜನರು ಈ ಉಪಚುನಾವಣೆಯಲ್ಲಿ ಅದಕ್ಕೆ ತಕ್ಕ ಉತ್ತರವನ್ನೂ ಕೊಡಲಿದ್ದಾರೆ ಎಂದರು.

ಸಿಂದಗಿ ಚುನಾವಣೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಎಲ್ಲರೂ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ. ಹೊರಗಿನಿಂದ ಬಂದ ಶಾಸಕರೂ ಸಹಿತ ಒಂದೊಂದು ಬೂತ್‌ ಮಟ್ಟದಲ್ಲಿ ಕೆಲಸ ಮಾಡಿ ಮತಯಾಚನೆ ಮಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಜನರು ಕಾಂಗ್ರೆಸ್‌ ಪಕ್ಷದತ್ತ ಒಲವು ತೋರಿರುವುದು ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.

ಇದನ್ನೂ ಓದಿ:ಕನ್ನಡಕ್ಕಾಗಿ ಲಾಠಿ ಏಟು ತಿಂದು 15 ದಿನ ಆಸ್ಪತ್ರೆಯಲ್ಲಿದ್ದೆ: ಸಚಿವ ಆರ್.ಅಶೋಕ್

Advertisement

ಸಿಂದಗಿ ಕಾಂಗ್ರೆಸ್‌ದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಾಜಿ ಶಾಸಕ ಶರಣಪ್ಪ ಸುಣಗಾರ ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದರು. ಇದೀಗ ನಮ್ಮೊಂದಿಗೇ ಇದ್ದು ಅಶೋಕ ಮನಗೂಳಿ ಗೆಲುವಿಗಾಗಿ ಮತಯಾಚನೆ ಮಾಡಿದ್ದಾರೆ.

ಹೀಗಾಗಿ ಮೆಲ್ನೋಟ ಒಳನೋಟ ಅಂತಾ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಳ ಮಟ್ಟದ ಕಾರ್ಯಕರ್ತರಿಂದ ಹಿಡಿದು ದೊಡ್ಡ ಮಟ್ಟದ ನಾಯಕರವರೆಗೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಎಂದರು.

ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಈಗ ಪ್ರತಿಕ್ರಿಯಿಸುವುದಿಲ್ಲ. ಚುನಾವಣೆ ಮುಗಿದ ಮೇಲೆ ಮಾತನಾಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next