ಕೆಲಸ ಕೆಲಸ ಅಂತ ಬೆಂಗಳೂರಿನಂಥ ನಗರಗಳ ಪಂಜರಗಳಲ್ಲಿ ಸಿಲುಕಿರುವ ಮಗನನ್ನು ಇಲ್ಲೊಬ್ಬಳು ತಾಯಿ ಪತ್ರದ ಮೂಲಕ ಊರಿಗೆ ಕರೆಯುತ್ತಿದ್ದಾಳೆ. ಅದಕ್ಕೂ ನೆಪ, ಈ ಮತದಾನವೆಂಬ ಹಬ್ಬ…
ಹೇಗಿದ್ದೀಯಾ ಮಗನೇ?
ನಿನ್ನನ್ನು ನೋಡಿ 6 ತಿಂಗಳಾದವು. ಯುಗಾದಿಗೆ ಬರುತ್ತೀ ಅಂದುಕೊಂಡಿದ್ದೆ. ಕಡೇ ಘಳಿಗೆಯಲ್ಲಿ ಅದೇನೋ ತುರ್ತು ಕೆಲಸ ಬಂತೆಂದು ಬರಲಾಗುತ್ತಿಲ್ಲವೆಂದು ತಿಳಿಸಿದೆ. “ಫೈನಾನ್ಷಿಯಲ್ ಇಯರ್ ಎಂಡ್, ಹೆವೀ ಕೆಲಸ’ ಅಂತೆಲ್ಲ ಹೇಳಿ ತಪ್ಪಿಸಿಕೊಂಡೆ. ನಾನೂ ಅದನ್ನು ಕೇಳಿ, ಸುಮ್ಮನಿದ್ದೆ. ಮೊನ್ನೆ ರಾಮನವಮಿಗೂ ನಿನ್ನನ್ನು ನೆನೆಸಿಕೊಂಡೆ ಕಣೋ. ಕೊನೆಗೆ, ನಿನ್ನ ಪಾಲಿನ ಕೋಸಂಬರಿಯನ್ನು, ನಿನ್ನ ತಂಗಿಗೆ ಕೊಟ್ಟು ಸಮಾಧಾನ ಪಟ್ಟೆ.
ಪ್ರತಿ ಹಬ್ಬಗಳನ್ನೂ ಹೀಗೇ “ಕೆಲ್ಸ ಕೆಲ್ಸ’ ಎನ್ನುತ್ತಾ ತಪ್ಪಿಸಿಕೊಳ್ಳುತ್ತೀ. ಯಾವ ಹಬ್ಬವನ್ನಾದರೂ ತಪ್ಪಿಸಿಕೋ. ನನಗೆ ಬೇಜಾರಿಲ್ಲ. ಮತದಾನದ ಹಬ್ಬವನ್ನು ಮಾತ್ರ ತಪ್ಪಿಸಿಕೊಳ್ಬೇಡ ಮಗನೇ. ಕಡೇಪಕ್ಷ ವೋಟ್ ಹಾಕುವುದಕ್ಕಾದರೂ ಮನೆಗೆ ಬಾರೋ. ನೀನೇನೋ ಆ ಬೆಂಗಳೂರಿನಲ್ಲಿ ಹೋಗಿ ಕೂರುತ್ತೀಯ. ಇಲ್ಲಿ ನಾವು ಓಡಾಡುವ ದಾರಿ ನೋಡಿದೆಯಾ? ನಮ್ಮ ಜತೆ ನಿನ್ನ ಮತವೂ ಸೂಕ್ತ ಅಭ್ಯರ್ಥಿಗೆ ಬಿದ್ದರೆ, ಆ ರಸ್ತೆ ಸರಿ ಆಗುವುದೆಂಬ ಭರವಸೆ ನನಗೆ.
ಹಾಗೆ ಬರುವಾಗ ನೀನೊಬ್ಬನೇ ಬರಬೇಡ. ಬೆಂಗಳೂರಿನಲ್ಲಿ ಸೆಟ್ಲ ಆಗಿರುವ ನಮ್ಮೂರಿನ ಗ್ಯಾಂಗ್ ಇದೆಯಲ್ಲ… ಅದೇ ನಿನ್ನ ಗೆಳೆಯರು ಅವರನ್ನೂ ಜತೆಗೆ ಕರಕೊಂಡು ಬಾ. ನಿನ್ನ ಮುದ್ದು ಬೆರಳಲ್ಲಿ ಶಾಯಿ ನೋಡುವ ಆಸೆ ನನ್ನದು. ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು, ನೀನೂ ಸಿದ್ಧನಿದ್ದೀ ಎಂದು ಭಾವಿಸುವೆ.
ನಿನ್ನ ದಾರಿ ಕಾಯುತ್ತಿರುವ
ಅಮ್ಮ