ಕಲಬುರಗಿ: ದೇಶದ ಐಕ್ಯತೆ-ಸಮಗ್ರತೆಯೊಂದಿಗೆ ಎಲ್ಲರನ್ನು ಕರೆದುಕೊಂಡು ಹೋಗುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ
ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಕಾಂಗ್ರೆಸ್ ಎಂದರೆ ಸಂಯುಕ್ತ ಎನ್ನುವುದಾಗಿದೆ. ಸಂಯುಕ್ತ ಎಂದರೆ ಒಗ್ಗೂಡುವುದು ಹಾಗೂ ಎಲ್ಲರನ್ನು ಕರೆದುಕೊಂಡು ಹೋಗುವುದಾಗಿದೆ ಎಂದರು.
1885ರಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿದ್ದು, ಮಹಾತ್ಮಾಗಾಂಧಿ, ಪಂಡಿತ ಜವಾಹರಲಾಲ ನೆಹರು, ಲಾಲ ಬಹಾದ್ದೂರ ಶಾಸ್ತ್ರೀ, ಇಂದಿರಾಗಾಂಧಿ, ರಾಜೀವಗಾಂಧಿ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಹಾಗೂ ದೇಶದ ಒಳಿತಿಗೆ ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ ಎಂದು ಸ್ಮರಿಸಿಕೊಂಡರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ದೇಶಕ್ಕೆ ಕಾಂಗ್ರೆಸ್ ಕೊಡುಗೆ ಕುರಿತಾಗಿ ಎಷ್ಟು ಹೇಳಿದರೂ ಕಡಿಮೆ. ಕಾಂಗ್ರೆಸ್ ಎಲ್ಲರನ್ನು ಸಮನಾಗಿ ಕಾಣುವ ಪಕ್ಷವಾಗಿದೆ ಎಂದು ಹೇಳಿದರು.
ಪಕ್ಷದ ಹಿರಿಯರಾದ ಬಾಬುರಾವ್ ಜಹಾಗೀರದಾರ್, ಸಿದ್ರಾಮಪ್ಪ ವಳಕೇರಿ, ರುಕ್ಮಣ್ಣ ಸಗರಕರ್, ಚಂದ್ರಶೇಖರ ಸುಲ್ತಾನಪುರಕರ್, ಸೀತಾರಾಮ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಮಹಾಪೌರ ಶರಣು ಮೋದಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಮುಖಂಡರಾದ ಕೃಷ್ಣಾಜೀ ಕುಲಕರ್ಣಿ, ಮಲ್ಲಿನಾಥ ಸೊಂತ, ಝರಣಪ್ಪ ಚಿಂಚೋಳಿ, ಭೀಮರಾವ ತೇಗಲತಿಪ್ಪಿ, ದೇವಿಂದ್ರಪ್ಪ ಮರತೂರ, ಚಂದ್ರಿಕಾ ಪರಮೇಶ್ವರ, ಪ್ರಭಾವತಿ ಪಾಟೀಲ, ವಾಣಿಶ್ರೀ ಸಗರಕರ್, ರೇಣುಕಾ ಚವ್ಹಾಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಝಳಕಿ, ಹಣಮಂತರಾವ ಜವಳಿ ಮುಂತಾದವರಿದ್ದರು.