Advertisement

ವೀರಶೈವ ಒಳಪಂಗಡಗಳು ಒಗ್ಗೂಡಲಿ

10:05 AM Jul 16, 2018 | |

ರಾಯಚೂರು: ಅಲ್ಪಸಂಖ್ಯಾತ ಸ್ಥಾನಮಾನದಿಂದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಬದಲಿಗೆ ವೀರಶೈವ ಒಳಪಂಗಡಗಳೆಲ್ಲ ಒಗ್ಗೂಡಿ ಶೇ.12ರಿಂದ 15ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಎಂದು ಕಾಶಿ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಇಂಥ ಬೇಡಿಕೆಯನ್ನು ಸಲ್ಲಿಸಲಾಗಿದೆ. ವೀರಶೈವ ಒಳಪಂಗಡಗಳಿಗೆ ವಿಶೇಷ ಪ್ರಾತಿನಿಧ್ಯದಡಿ ಶಿಕ್ಷಣ, ಉದ್ಯೋಗ ಸೇರಿ ವಿವಿಧ ಕಾರಣಕ್ಕೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಿ ಎಂದು ಒತ್ತಾಯಿಸಬೇಕಿದೆ. 

ಪ್ರತ್ಯೇಕವಾದಿಗಳಿಗೆ ಈಗಾಗಲೇ ಈ ವಿಚಾರ ಮನವರಿಕೆ ಆಗಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಆ.10ರಂದು ವೀರಶೈವರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಲ್ಲಿ ತಜ್ಞರ ಜತೆ ಚರ್ಚಿಸಲಾಗುವುದು. ಆಯಾ ರಾಜ್ಯ ಸರ್ಕಾರಗಳಿಗೂ ತಾಕೀತು ಮಾಡಬೇಕಿದೆ. ಲೋಕಸಭೆ ಚುನಾವಣೆ ವೇಳೆಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮುಗಿದ ಅಧ್ಯಾಯ. ಧರ್ಮ ಒಡೆಯಲು ಹೋದವರಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ. ಇನ್ನು ಮುಂದೆಯಾದರೂ ಸರ್ಕಾರಗಳು ಧರ್ಮ ಒಡೆಯುವ ದುಷ್ಕೃತ್ಯಕ್ಕೆ ಕೈ ಹಾಕದಿರಲಿ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೆಲಸ ಮಾಡಿತ್ತು
ಎಂಬುದು ಜಗಜ್ಜಾಹೀರಾಗಿದೆ. ಖುದ್ದು ಬಸವಣ್ಣನವರೇ ಲಿಂಗಾಯತ ಪದವನ್ನು ಬಳಸಿಲ್ಲ.

ಅವರ ವಿಚಾರಗಳನ್ನು ಸರ್ಕಾರವೇ ಮುದ್ರಣ ಮಾಡಿದೆ. ಐದು ಪೀಠಗಳ ಜಗದ್ಗುರುಗಳು ಒಂದೇ ವೇದಿಕೆಯಡಿ ಸೇರಬೇಕು ಎಂಬುದು ಭಕ್ತರ ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ನಾಲ್ವರು ಒಗ್ಗೂಡಿದ್ದು, ಕೇದಾರ ಸ್ವಾಮೀಜಿಗಳು ಮಾತ್ರ ಸೇರಿಲ್ಲ. ಶೀಘ್ರದಲ್ಲೇ ಅದು ಆಗುವ ವಿಶ್ವಾಸವಿದೆ ಎಂದರು.

Advertisement

ಮನೋವಿಕಾಸಕ್ಕೆ ಸಿದ್ಧಾಂತ ಶಿಖಾಮಣಿ ಸೂಕ್ತ ಗ್ರಂಥ: ಕಾಶಿ ಶ್ರೀ 
ರಾಯಚೂರು:
28 ಶಿವಾಗಮಗಳನ್ನು, ವೇದ, ಶೈವ ಪುರಾಣ ಆಧರಿಸಿ ರಚನೆಯಾಗಿರುವ ಸಿದ್ಧಾಂತ ಶಿಖಾಮಣಿ ಮನೋವಿಕಾಸಕ್ಕೆ ಬೇಕಿರುವ ಶ್ರೇಷ್ಠ ದಾರ್ಶನಿಕ ಗ್ರಂಥವಾಗಿದೆ ಎಂದು ವಾರಣಾಸಿಯ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಾಚಾರ್ಯ ಮಹಾ ಭಗವತ್ಪಾದರು ಅಭಿಪ್ರಾಯಪಟ್ಟರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಸ್ತ್ಯ ರೇಣುಕರ ಸಂವಾದ ರೂಪದಲ್ಲಿ ಗ್ರಂಥ ರಚನೆಯಾಗಿದೆ. 101 ಸ್ಥಲಗಳಿದ್ದು, ಪ್ರತಿಯೊಂದು ಮೆಟ್ಟಿಲಿನಲ್ಲೂ ಧರ್ಮದ ಮೌಲ್ಯಗಳನ್ನು ಸಾರಲಾಗಿದೆ. ಗ್ರಂಥ ಅಧ್ಯಯನದಿಂದ ಜೀವನ ಸಾರ್ಥಕತೆ ಸಿಗಲಿದೆ ಎಂದರು.

ವೀರಶೈವ ಸನಾತನ ಧರ್ಮವಾಗಿದೆ. ಶಿವನನ್ನು ಪ್ರತಿಪಾದಿಸುವ ವೀರಶೈವ ಧರ್ಮ ಶಿವನಷ್ಟೇ ಪ್ರಾಚೀನವಾಗಿದೆ. ಪಂಚಾಚಾರ್ಯರು ದೇಶದಲ್ಲಿ ಐದು ಪೀಠ ಸ್ಥಾಪಿಸಿ ಅದರಡಿ ಸಹಸ್ರಾರು ಮಠಗಳನ್ನು ಸ್ಥಾಪಿಸಿ ಧರ್ಮ ರಕ್ಷಣೆ ಕಾರ್ಯ ಮಾಡಿದ್ದಾರೆ. ಇಂದು ಪ್ರತಿಯೊಬ್ಬರು ಧರ್ಮಗಳನ್ನು ಅರಿತು ಬಾಳಬೇಕಿದೆ ಎಂದರು.
 
ಇಂದು ಶಿವಯೋಗಿ ಮಂದಿರದ ಮೇಲೂ ಆರೋಪ ಕೇಳಿ ಬರುತ್ತಿವೆ. ಆದರೆ, ವೀರಶೈವ ಪೀಠಗಳು ಎಂದಿಗೂ ಧರ್ಮಭೇದ ಎಣಿಸಿಲ್ಲ. ಎಲ್ಲ ವರ್ಗದವರನ್ನು ಸಮನಾಗಿ ಕಾಣುವ ಕೇಂದ್ರಗಳಾಗಿವೆ. ಕಾಶಿ ಪೀಠದಲ್ಲಿನ ಗುರುಕುಲದಲ್ಲಿ ಎಲ್ಲ ಜಾತಿಗಳಿಗೂ ಸಮಾನ ಶಿಕ್ಷಣ ನೀಡಲಾಗುತ್ತಿದೆ. ಶಿವಯೋಗ ಮಂದಿರದಲ್ಲೂ ಎಲ್ಲ ಪಂಥದವರಿಗೆ ಶಿಕ್ಷಣ ನೀಡಲಾಗಿದೆ. ವೃಥಾ ಆರೋಪಗಳಿಂದ ಧಾರ್ಮಿಕ ಕೇಂದ್ರಗಳಿಗಿರುವ ಮಹತ್ವ ಕುಗ್ಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನಗರದಲ್ಲಿ ಏಳು ದಿನಗಳ ಕಾಲ ಸಿದ್ಧಾಂತ ಶಿಖಾಮಣಿ ಪ್ರವಚನ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ತಿಳಿಸಿದರು. ಬಿಚ್ಚಾಲಿ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ನೀಲೊಗಲ್‌ ಬೃಹನ್ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next