Advertisement

ಸವಲತ್ತುಗಳಿಗೆ ಸಂಘಟಿತರಾಗಿ ಹೋರಾಡಿ

12:19 PM Jul 28, 2018 | Team Udayavani |

ಮೈಸೂರು: ತುಳಿತಕ್ಕೆ ಒಳಗಾದ ಸಮಾಜಗಳು ಸಂಘಟಿತರಾಗಬೇಕು. ಸಂಘಟಿತರಾದಾಗ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಎಲ್‌.ನಾಗೇಂದ್ರ ಹೇಳಿದರು.

Advertisement

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನೂ ನಿಮ್ಮ ವೃತ್ತಿಗೆ ಬಳಸಿಕೊಳ್ಳಬೇಡಿ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. 

ಕಾಯಕ ಬಸವಣ್ಣನ ಮಂತ್ರದಂಡ: ಮುಡುಕನಪುರ ಹಲವಾರು ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಕಾಯಕ ಸಮಾಜ ಕಟ್ಟಲು ಬೆನ್ನೆಲುಬಾಗಿ ನಿಂತಿದ್ದು ಹಡಪದ ಅಪ್ಪಣ್ಣ. ಬಸವಣ್ಣ ಸೃಷ್ಟಿಸಿದ ಕಾಯಕ ಸಮಾಜದಲ್ಲಿ ಮೇಲು-ಕೀಳು ಎಂಬುದಿರಲಿಲ್ಲ.

ಕಾಯಕವೇ ಬಸವಣ್ಣನ ಮಂತ್ರದಂಡವಾಗಿತ್ತು. ಆದರೆ, ಕೆಲವು ಕೋಡಂಗಿಗಳು ಮೇಲು-ಕೀಳು ಎಂಬುದನ್ನು ಹುಟ್ಟು ಹಾಕಿದ್ದಾರೆ. ಈ ಸಮಾಜದಲ್ಲಿ 23 ಉಪ ಪಂಗಡಗಳಿದ್ದರೂ ಅವು ಸಂಖ್ಯೆಯಲ್ಲಿರಲಿ, ಅಭಿಪ್ರಾಯ ಬೇಧಗಳಿರಬಾರದು. ಹಡಪದ ಅಪ್ಪಣ್ಣ ವಚನಗಳ ಕಿರು ಹೊತ್ತಿಗೆ ಮುದ್ರಿಸಿ ಮನೆ ಮನೆಗೆ ತಲುಪಿಸಿ, ಸಂಘಟಿತರಾಗಿ ನಿಮ್ಮ ಸಾಮರ್ಥ್ಯ ತೋರಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್‌ ಬಿ.ಭಾಗ್ಯವತಿ, ಉಪ ಮೇಯರ್‌ ಇಂದಿರಾ ಮಹೇಶ್‌, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಮೊದಲಾದವರು ಹಾಜರಿದ್ದರು.

Advertisement

ಜನಪ್ರತಿನಿಧಿಗಳು ಬಾರದ್ದಕ್ಕೆ ಆಕ್ರೋಶ
ಮೈಸೂರು:
ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧ ಸಮುದಾಯದ ಯುವಜನತೆ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು. ಶಿಷ್ಠಾಚಾರದಂತೆ ಜಿಲ್ಲೆಯ ಇಬ್ಬರು ಸಚಿವರು, ಶಾಸಕರು, ಸಂಸದರು, ಜಿಪಂ, ತಾಪಂ ಅಧ್ಯಕ್ಷರು-ಉಪಾಧ್ಯಕ್ಷರನ್ನು ಒಳಗೊಂಡಂತೆ 24 ಜನ ಚುನಾಯಿತ ಪ್ರತಿನಿಧಿಗಳ ಹೆಸರುಳ್ಳ ಆಹ್ವಾನ ಪತ್ರಿಕೆ ಮುದ್ರಿಸಿ ವಿತರಿಸಲಾಗಿತ್ತು.

ಆದರೂ, ಕನಿಷ್ಠ ಮೆರವಣಿಗೆಗೆ ಚಾಲನೆ ನೀಡಲೂ ಯಾವುದೇ ಚುನಾಯಿತ ಪ್ರತಿನಿಧಿಗಳು ಬರಲಿಲ್ಲ. ಮಧ್ಯಾಹ್ನ 12.30ಕ್ಕೆ ಕಲಾಮಂದಿರ ಆರಂಭವಾದರೂ ಮೇಯರ್‌, ಉಪ ಮೇಯರ್‌ ಬಿಟ್ಟು ಮತ್ಯಾವ ಚುನಾಯಿತ ಪ್ರತಿನಿಧಿಗಳೂ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಸಮಾಜದ ಯುವಕರು ಸಭಾಂಗಣದಿಂದ ಹೊರಬಂದು ಕಲಾಮಂದಿರದ ಮೆಟ್ಟಿಲು ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next