Advertisement

ಬೆಳಗಾವಿ ತಂಟೆಗೆ ಬಂದರೆ ಬಿಡದಿರಿ ಕಾಸರಗೋಡು ಅವಗಣಿಸದಿರಿ

12:15 AM Jan 07, 2023 | Team Udayavani |

ಹಾವೇರಿ: ನೆರೆಹೊರೆಯ ಗೆಳೆಯರೇ ಆಕ್ರಮಿಸಿದರೆ ಹೊತ್ತಿಕೊಳ್ಳುವುದು ನಮ್ಮ ಅಭಿಮಾನದ ಬೆಂಕಿಕಿಡಿ! ಅಮ್ಮನ ಸೆರೆಗಿಗೆ ಸಿಡಿದರೆ ಕಿಡಿ ಸಹಿಸೆವು ನಾವು ಸಿಡಿ-ಮಿಡಿ ಇದು ಅಮ್ಮನ ಅಣತಿ ನಲ್ನುಡಿ ತಂಟೆಗೆ ಬಂದರೆ ಹೋರಾಟ ದಂಡಿಅತಿಕ್ರಮಿಸಬೇಡಿ, ಇಡದಿರಿ ಮುಂದಕ್ಕೆ ಒಂದೂ ಅಡಿ!

Advertisement

ಇದು ಸರ್ವಜ್ಞ, ಸಂತ ಶಿಶುನಾಳ ಷರೀಫ‌ ಮತ್ತು ಕನಕದಾಸರ ನೆಲ ಹಾವೇರಿಯಲ್ಲಿ ನಿಂತು ಗಡಿಯಲ್ಲಿ ಕೆಣಕುತ್ತಿರುವವರಿಗೆ ಕಾವ್ಯದ ಮೂಲಕವೇ ಎದಿರೇಟು ಕೊಟ್ಟ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ದೊಡ್ಡರಂಗೇಗೌಡ ಅವರ ಬೆಂಕಿ ಕಿಡಿಗಳು.

ಶುಕ್ರವಾರ ಆರಂಭವಾದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ನಾಡಿನ ಗಡಿ ತಂಟೆಗೆ ಬರುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ದೊಡ್ಡರಂಗೇಗೌಡರು, ಕನ್ನಡ ನಾಡು-ನುಡಿಗೆ ಅನ್ಯಾಯವಾಗಲು ನಾವು ಬಿಡುವು

ದಿಲ್ಲ ಎಂದರು.  ಮಹಾರಾಷ್ಟ್ರ ರಾಜ ಕಾರಣಿಗಳ ಇತ್ತೀಚಿನ ವರ್ತನೆ ವಿರುದ್ಧ ಗುಡುಗಿದ ಅವರು, ಕಾಸರಗೋಡು ಗಡಿ ಭಾಗದಲ್ಲಿ ಮಲಯಾಳೀಕರಣದ ದಾಳಿ ನಡೆಯುತ್ತಿದ್ದು, ಈ ಬಗ್ಗೆಯೂ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಎಚ್ಚರಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸಕ್ತದಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಅವರು, ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕು ಎಂಬ ಕಿವಿಮಾತು ಹೇಳಿದರು. ಕನ್ನಡ ನಾಡು-ನುಡಿ, ಜಲ, ಭಾಷೆ, ಉದ್ಯೋಗ, ಕನ್ನಡ ರಾಯಭಾರತ್ವ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಕನ್ನಡಕ್ಕೆ ಶಾಸನಾತ್ಮಕ ಮಾನ್ಯತೆ, ಕನ್ನಡ ಶಾಸ್ತ್ರೀಯ ಭಾಷೆ ವಿಚಾರದಲ್ಲಿ ಸರಕಾರದ ಜಡತ್ವ ಸೇರಿದಂತೆ ಕನ್ನಡ ಭಾಷೆಯ ಸಂಕಷ್ಟಗಳು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದರು. ಗಡಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಸಾರಿದರು.

Advertisement

ದೊಡ್ಡರಂಗೇಗೌಡರ ಕನ್ನಡ ಕಿಡಿ
1.
ಮುಚ್ಚಿದ ಶಾಲೆ ವಾಪಸ್‌ ತೆರೆಯಿರಿ
2.ಉದ್ಯೋಗ ಅರಸಿ ಬಂದವರು ಕನ್ನಡ ಕಲಿಯಲಿ
3.ಅಧಿಕಾರಿಗಳ ಟಿಪ್ಪಣಿಯೂ ಕನ್ನಡದಲ್ಲೇ ಇರಲಿ
4.5ನೇ ತರಗತಿವರೆಗೆ ಕನ್ನಡವೇ ಕಡ್ಡಾಯವಾಗಲಿ
5.ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ ರಚಿಸಿ
6.ಕನ್ನಡದಲ್ಲಿ ಸೇವೆ ನೀಡದ ಬ್ಯಾಂಕು, ಕಂಪೆನಿಗಳ ಸೇವೆ ಧಿಕ್ಕರಿಸಿ
7.ಕನ್ನಡದಲ್ಲಿ ವೃತ್ತಿಪರ, ಉನ್ನತ ಶಿಕ್ಷಣ ಕಲಿಯುವವರಿಗೆ ಪ್ರೋತ್ಸಾಹ ಕೊಡಿ
8.ಮಲಯಾಳೀಕರಣ ತಡೆಯಲು ಆದ್ಯತೆ ಕೊಡಿ

ಮಲಯಾಳೀಕರಣ ದಾಳಿ ತಡೆಯಿರಿ
ಕಾಸರಗೋಡಿನಲ್ಲಿ ಮಲಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದ ವಿಪರ್ಯಾಸದ ಪರಿಸ್ಥಿತಿ ಇದೆ. ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸು ಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನು ಮೈಸೂರಿನೊಂದಿಗೆ ಸೇರಿಸುವ ವೇಳೆ ಕಾಸರಗೋಡು ಪ್ರದೇಶವನ್ನು ಕೈಬಿಡಲಾಯಿತು. ಆ ಕಾರಣ ಉದ್ಭವವಾದ ಸಮಸ್ಯೆ ಇದು. ಕಾಸರಗೋಡಿನ ಕನ್ನಡಿಗರು ಎಂದಿದ್ದರೂ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತದೆ ಎಂಬ ಆಶಾವಾದದಲ್ಲಿದ್ದಾರೆ. ಆ ಕಡೆಗೆ ಮುಖ್ಯಮಂತ್ರಿ ಆದ್ಯ ಗಮನ ನೀಡಬೇಕು ಎಂದು ದೊಡ್ಡರಂಗೇಗೌಡ ಆಗ್ರಹಿಸಿದರು.

ನಮ್ಮದನ್ನು ಬಿಟ್ಟುಕೊಡೆವು
ಎದುರಿಸುವ ಕೆಚ್ಚಾನೆಚ್ಚಾ, ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿ ಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ನಾವು ಈಗ ಕರ್ನಾಟಕ- ಮಹಾ ರಾಷ್ಟ್ರ ಗಳ ಗಡಿ ಸಮಸ್ಯೆಯ ಬೆಳ ಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಇದು ನಮ್ಮ ಇಚ್ಛೆ, ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮ ದಲ್ಲದ ನೆಲವನ್ನು ನಾವು ಅಪೇಕ್ಷಿಸು ವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಪ್ರತಿ ನಿತ್ಯದ ಮಾತು ಎಂದು ದೊಡ್ಡರಂಗೇಗೌಡ ಅವರು ಖಡಕ್ಕಾಗಿ ನುಡಿದರು.

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next