Advertisement

ಬಣ್ಣದೋಕುಳಿ ಸಂಭ್ರಮ

12:25 PM Mar 03, 2018 | |

ಬೀದರ: ರಸ್ತೆ- ಮನೆ ಅಂಗಳದಲ್ಲೆಲ್ಲ ಚೆಲ್ಲಿದ ಬಣ್ಣದೋಕುಳಿ.. ಮುಗಿಲು ಮುಟ್ಟಿದ ಕೇಕೆ, ಸಿಳ್ಳೆಗಳ ಸದ್ದು.. ಸಿನಿಮಾ ಗೀತೆಗಳ ಉನ್ಮಾದದಲ್ಲಿ ಹೆಜ್ಜೆ ಹಾಕಿದ ಯುವಕರ ದಂಡು.. ತುಂತುರು ಮಳೆ ಹನಿ ನಡುವೆ ಬಣ್ಣಗಳಲ್ಲಿ ಮಿಂದೆದ್ದ ಜನತೆ…! ಇದು ಶುಕ್ರವಾರ ನಗರದಲ್ಲಿ ಬಣ್ಣದ ಹಬ್ಬ ಹೋಳಿ ಆಚರಣೆ ಸಂದರ್ಭ ಕಂಡುಬಂದ ದೃಶ್ಯಗಳು. ಸ್ನೇಹ, ಕೋಮು ಸೌಹಾರ್ದತೆಯ ಸಂಕೇತವಾಗಿರುವ ಹೋಳಿ ಹಬ್ಬವನ್ನು ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

Advertisement

ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಯುವಕರ ಗುಂಪು ಬಣ್ಣ ಎರಚಾಟದೊಂದಿಗೆ ಕುಣಿದು ಕುಪ್ಪಳಿಸಿದರು. ಬೃಹತ್‌ ಧ್ವನಿ ವರ್ಧಕದ ಮೂಲಕ ಮೂಡಿಬಂದ ಗೀತೆಗಳಿಗೆ ಹೆಜ್ಜೆ ಹಾಕುತ್ತ, ಪರಸ್ಪರ ಶುಭಾಷಯ ಹೇಳುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಬೈಕ್‌ಗಳಲ್ಲಿ ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿ ಸಂಭ್ರಮಿಸಿದರು. ಮಕ್ಕಳು ಪಿಚಕಾರಿ ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರಿನ ಬಾಣ ಬಿಟ್ಟು ಖುಷಿ ಪಟ್ಟರೆ, ಮಹಿಳೆಯರು ಮತ್ತು ಯುವತಿಯರು ಸಹ ಬಣ್ಣದ ನೀರಿನಲ್ಲಿ ಮಿಂದೆದ್ದರು.

ಮಡಿಕೆ ಒಡೆಯಲು ಸಾಹಸ: ನಗರದಲ್ಲಿ ಹೋಳಿ ಹಬ್ಬದಂದು ಯುವಕರು ಪರಸ್ಪರ ಬಣ್ಣವನ್ನಷ್ಟೇ ಎರಚಲಿಲ್ಲ. ಬದಲಿಗೆ ಮೊಟ್ಟೆಗಳನ್ನೂ ಪರಸ್ಪರ ತಲೆಗೆ ಹೊಡೆದು ಸಂಭ್ರಮಿಸಿದರು. ಪ್ರಮುಖ ರಸ್ತೆಗಳಲ್ಲಿ ಟ್ಯಾಂಕರ್‌ನಲ್ಲಿ ಬಣ್ಣವನ್ನಿರಿಸಿಕೊಂಡು ಎಲ್ಲೆಡೆ ಸಂಚರಿಸಿದ ಯುವಕರು ದಾರಿಹೋಕರಿಗೆ ಬಣ್ಣ ಎರಚಿ ಸಂತಸಪಟ್ಟರು. ಹೋಳಿ ಆಚರಣೆ ಸಮಿತಿಯಿಂದ ನಗರದ ಮಡಿವಾಳ ವೃತ್ತ, ಕ್ರಾಂತಿ ಗಣೇಶ, ಗಣೇಶ ಮೈದಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಬಣ್ಣ ತುಂಬಿದ ಮಡಿಕೆ ಒಡೆಯುವ ಪ್ರದರ್ಶನಗಳೂ ನಡೆದವು.

ನಾಮುಂದು- ತಾಮುಂದೆ ಎನ್ನುತ್ತ ಯುವಕರ ದಂಡು ಹರಸಾಹಸ ಪಡುತ್ತಿದ್ದದ್ದು ಮನಮೋಹಕವಾಗಿತ್ತು. ಮಡಿಕೆ ಒಡೆಯದಂತೆ ಯುವಕರ ಮೇಲೆ ಟ್ಯಾಂಕರ್‌ ಮೂಲಕ ನೀರು ಸುರಿದು ಕೇಕೇ ಹಾಕಿದರು.

ಪ್ರತಿ ವರ್ಷ ನಗರದ ಜಿಲ್ಲಾಧಿಕಾರಿ ಅವರ ನಿವಾಸದಲ್ಲಿ ಅಧಿಕಾರಿಗಳು ಮತ್ತು ಗಣ್ಯರಿಂದ ಹೋಳಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಈ ವರ್ಷ ಆ ಸಂಭ್ರಮ ಇರಲಿಲ್ಲ. ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಸೇರಿದಂತೆ ಇತರ ಅಧಿಕಾರಿಗಳು ಕರ್ತವ್ಯದಲ್ಲಿದ್ದರಿಂದ ಹಬ್ಬದಿಂದ ದೂರ ಉಳಿಯಬೇಕಾಯಿತು. ಸಂಸದ ಭಗವಂತ ಖೂಬಾ ಅವರ ನಿವಾಸದಲ್ಲಿ ಹಬ್ಬ ಆಚರಿಸಲಾಯಿತು.

Advertisement

ರಾತ್ರಿ ಕಾಮ ದಹನ: ಗುರುವಾರ ರಾತ್ರಿ ವಿವಿಧ ಭಾಗಗಳಲ್ಲಿ ಮಡಿಕೆಯಿಂದ ಮಾಡಿದ ಮನ್ಮಥ (ಕಾಮಣ್ಣ) ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು, ದೊಡ್ಡ ಕಟ್ಟಿಗೆ ರಾಶಿ ಮೇಲೆ ಇಟ್ಟು ಸುಡಲಾಯಿತು. ಬೊಬ್ಬೆಗಳ ನಡುವೆ ಆಶ್ಲೀಲ ಬೈಗುಳ ಎಲ್ಲೆಡೆ ಪ್ರತಿಧ್ವನಿಸಿದವು. 

ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು. ಕಾಮನ ದಹನದ ಜತೆಗೆ ರಾತ್ರಿಯಿಡಿ ಕೋಲಾಟ ಆಡಿ ಸಂಭ್ರಮಿಸಿದರು. ನಡು- ನಡುವೆ ಹಾಸ್ಯ ಭರಿತ ಸಣ್ಣ ರೂಪಕಗಳನ್ನು ಪ್ರದರ್ಶಿಸಿದರು. ನಗರದ ಸೇರಿದಂತೆ ಜಿಲ್ಲಾದ್ಯಂತ ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು

ಭಾಲ್ಕಿ: ಪಟ್ಟಣದಾದ್ಯಂತ ಗುರುವಾರ ರಾತ್ರಿ ಹೋಳಿ ಹುಣ್ಣಿಮೆ ನಿಮಿತ್ತ ಕಾಮದಹನ ಮಾಡಿ ನಾಗರಿಕರು ಬೊಬ್ಬೆ ಹೊಡೆದು ಸಂಭ್ರಮಿಸಿದರು. ತಾರಕಾಸುರ ರಾಕ್ಷಸನ ಉಪಟಳನ ತಾಳದೆ, ಶಿವನನ್ನು ಧ್ಯಾನದಿಂದ ಎಬ್ಬಿಸಲು ದೇವತೆಗಳು ಹೂಡಿದ ತಂತ್ರದಿಂದ, ಮನ್ಮಥನು ಧ್ಯಾನದಲ್ಲಿ ಕುಳಿತ ಶಿವನಿಗೆ ಹೂಬಾಣ ಬಿಟ್ಟಾಗ ಶಿವನು ಕ್ರೋಧಗೊಂಡು, ತನ್ನ ತ್ರಿನೇತ್ರದ ಬೆಂಕಿಯಿಂದ ಮನ್ಮಥನನ್ನು ಸುಟ್ಟ ದಿನವನ್ನೇ ಕಾಮದಹನವನ್ನಾಗಿ ಆಚರಿಸುವ ಪ್ರತೀತಿಯಿದೆ. 

ಕಾಮದಹನದ ನಂತರ ಎಲ್ಲರೂ ಒಂದಿಲ್ಲ ಒಂದು ರೀತಿಯಿಂದ ಬೈದುಕೊಂಡು ಬೊಬ್ಬೆ ಹೊಡೆದು ಸಂಭ್ರಮಿಸುವುದು ಸಂತಸವನ್ನುಂಟು ಮಾಡುತ್ತದೆ. ಅದಾದ ನಂತರ ಕಾಮದಹನದ ಬೆಂಕಿಯಲ್ಲಿ ಕಡಲೆ, ಕೊಬ್ಬರಿಗಳನ್ನು ಸುಟ್ಟು ತಿನ್ನುವುದು ವಾಡಿಕೆ. ಕಾಮದಹನದ ಬೆಂಕಿಯಲ್ಲಿ ಕಡಲೆ ಮತ್ತು ಕೊಬ್ಬರಿ ಸುಟ್ಟು ತಿಂದರೆ ಹಲ್ಲುಗಳು ಗಟ್ಟಿಯಾಗಿರುತ್ತವೆ ಎನ್ನುವ ಪ್ರತೀತಿ ಇದೆ. ಒಟ್ಟಾರೆ ತಾಲೂಕಿನಾದ್ಯಂತ ಭಾತೃತ್ವ ಭಾವದಿಂದ ಕಾಮದಹನ ಹಬ್ಬ ಆಚರಿಸಿ ಸಂಭ್ರಮಿಸಿದ್ದು ಕಂಡು ಬಂದಿತು.

ಬಸವಕಲ್ಯಾಣ: ಎಲ್ಲಿ ನೋಡಿದಲ್ಲಿ ಯುವಕರ ಗುಂಪು, ರಸ್ತೆಯಲ್ಲಿ ಬಣ್ಣ-ಬಣ್ಣ, ಸಂಗೀತಕ್ಕೆ ಮೈ ಮರೆತು ಕುಣಿದು ಸಂಭ್ರಮಿಸಿದ ಯುವಕರು. ಇದು ಹೋಳಿ ಹಬ್ಬದ ನಿಮಿತ್ತ ಶುಕ್ರವಾರ ರಂಗಿನಾಟ ಸಂದರ್ಭದಲ್ಲಿ ನಗರದ ಎಲ್ಲೆಡೆ ಕಂಡು ದೃಶ್ಯ. 

ಹೋಳಿ ಹಬ್ಬ ನಿಮಿತ್ತ ಗುರುವಾರ ತಡ ರಾತ್ರಿ ವರೆಗೆ ಕಾಮ ದಹನ ನಡೆದರೆ, ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ರಂಗಿನಾಟ ನಡೆಯಿತು. ನಗರದ ಮುಖ್ಯ ರಸ್ತೆ ಸೇರಿದಂತೆ ಬಡಾವಣೆಗಳಲ್ಲೂ ಹಲವೆಡೆ ಯುವಕರ ಗುಂಪು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ, ಕೆಲವಡೆ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಓಕುಳಿಗೆ ರಂಗು ತಂದರು.

ಮುಖ್ಯ ರಸ್ತೆಯ ಗಾಂಧಿ ವೃತ್ತ, ಪಟೇಲ್‌ ಚೌಕ್‌, ಸದಾನಂದ ಸ್ವಾಮಿ ಮಠದ ಆವರಣ, ಭವಾನಿ ಮಂದಿರದ ಎದುರು, ಬನಶಂಕರಿ ಗಲ್ಲಿ ಕ್ರಾಸ್‌, ಲಕ್ಷ್ಮೀ ಕ್ರಾಸ್‌ ಬಳಿಯಂತೂ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಕರು ರಂಗಿನಾಟದಲ್ಲಿ ತೊಡಗಿ, ಬಣ್ಣದಲ್ಲಿ ಮಿಂದೆದ್ದರು. ಇಲ್ಲಿ ರಸ್ತೆಯೆಲ್ಲ ರಂಗು-ರಂಗಾಗಿತ್ತು. ಕಾಳಿಗಲ್ಲಿ, ಗೋಸಾಯಿ ಗಲ್ಲಿ, ದೇಶಪಾಂಡೆ ಗಲ್ಲಿ, ರಾಜಪೂತ ಗಲ್ಲಿ, ವಿಠuಲ ಮಂದಿರ ಗಲ್ಲಿ,
ಹಿರೇಮಠ ಕಾಲೋನಿ, ಬಿರಾದಾರ ಕಾಲೋನಿ, ಸರ್ವೋದಯ ಕಾಲೋನಿ ಸೇರಿದಂತೆ ನಗರದಲ್ಲಿ ಎಲ್ಲಡೆ ರಂಗೀನಾಟದ ಸಂಭ್ರಮ ಕಂಡು ಬಂತು.

ಲಕ್ಷ್ಮೀ ಕ್ರಾಸ್‌, ಪಟೇಲ ಚೌಕ್‌ ಸೇರಿದಂತೆ ಕೆಲ ಒಣಿಗಳಲ್ಲಿ ಯುವಕರು ಒಬ್ಬರ ಮೇಲೆ-ಒಬ್ಬರು ನಿಂತು ಮೊಸರಿನ ಗಡಿಗೆ ಒಡೆಯುವ ದೃಶ್ಯ ಗಮನ ಸೆಳೆಯಿತು. ತಾಲೂಕಿನಾದ್ಯಂತ ಬಹುತೇಕ ಎಲ್ಲ ಗ್ರಾಮಗಳಲ್ಲೂ ಗುರುವಾರ ಕಾಮದಹನ ನಡೆದರೆ, ಶುಕ್ರವಾರ ರಂಗಿನಾಟ ನಡೆಯಿತು.

ಕಾಮ ದಹನ ಹಾಗೂ ರಂಗಿನಾಟ ನಿಮಿತ್ತ ನಗರದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ
ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎಸ್ಪಿ ಡಿ.ದೇವರಾಜ, ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಮುಂತಾದ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್ ಕೈಗೊಂಡಿದ್ದರು.

‌ಗರದ ಜೆಪಿ ಕಾಲೋನಿ, ಆದರ್ಶ ಕಾಲೋನಿ, ಗುಂಪಾ, ಶಿವನಗರದ ಸೇರಿದಂತೆ ವಿವಿಧೆಡೆ ಮಹಿಳೆಯರು, ಮಕ್ಕಳು ಹೋಳಿ ಹಬ್ಬಕ್ಕೆ ವಿಶೇಷ ಮೆರಗು ತಂದರು. ಪರಸ್ಪರ ಬಣ್ಣ ಎರಚಿ ಶುಭ ಕೋರಿದ್ದಲ್ಲದೇ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಧ್ಯಾಹ್ನದ ವರೆಗೆ ರಂಗಿನಾಟದ ಸಂತಸ ಇತ್ತು. 

Advertisement

Udayavani is now on Telegram. Click here to join our channel and stay updated with the latest news.

Next