ಸಿನಿಮಾ ಮಂದಿಯ ಮೊಗದಲ್ಲಿ ಭರವಸೆ ಎದ್ದು ಕಾಣುತ್ತಿದೆ. ಈ ಹಿಂದಿನ ಆರು ತಿಂಗಳ “ಸೋಲಿನ’ ಕತ್ತಲು ಮಾಯವಾಗಿ “ಗೆಲುವು’ ಎಂಬ ಬೆಳಕು ಬಾಗಿಲು ತೆರೆಯಲಿದೆ ಎಂಬ ನಂಬಿಕೆಯೊಂದಿಗೆ ಎದುರು ನೋಡುತಿದೆ. ಜುಲೈ ಮೂರನೇ ವಾರದಿಂದಲೇ ಒಂದಷ್ಟು ನಿರೀಕ್ಷಿತ ಸಿನಿಮಾಗಳ ಬಿಡುಗಡೆ ಆರಂಭವಾದರೆ ಅಕ್ಟೋಬರ್‌ವರೆಗೂ ಈ ಸಿನಿಮಾಗಳ ಜಾತ್ರೆ ಮುಂದುವರೆಯಲಿದೆ. ಈ ಮೂಲಕ ಸ್ಯಾಂಡಲ್‌ವುಡ್ ಘಮ ಪಸರಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.
ಬಿಡುಗಡೆ ಸಿದ್ಧವಾಗಿರುವ ಸಿನಿಮಾಗಳತ್ತ ದೃಷ್ಟಿ ನೆಟ್ಟರೆ ಅಲ್ಲೊಂದಿಷ್ಟು ಭಿನ್ನ-ವಿಭಿನ್ನ ಸಿನಿಮಾಗಳು ಕಾಣಸಿಗುತ್ತವೆ. ಮುಖ್ಯವಾಗಿ ಈ ತಿಂಗಳಾಂತ್ಯಕ್ಕೆ (ಜು.28)ಕ್ಕೆ ತೆರೆಕಾಣಲಿರುವ “ಕೌಸಲ್ಯ ಸುಪ್ರಜಾ ರಾಮ’ ಚಿತ್ರರಂಗಕ್ಕೆ ದೊಡ್ಡ ಗೆಲುವು ತಂದು ಕೊಡುವ ನಿರೀಕ್ಷೆ ಸಿನಿಮಾ ಮಂದಿಯದ್ದು. ಅದಕ್ಕಿಂತ ಒಂದು ವಾರ ಮುಂಚೆ ತೆರೆಕಾಣಲಿರುವ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, “ಅಂಬುಜ’ ಚಿತ್ರಗಳ ಮೇಲೂ ಚಿತ್ರರಂಗ ಒಂದು ಕಣ್ಣಿಟ್ಟಿದೆ. ಇದು ಜುಲೈ ಕಥೆಯಾದರೆ ಆಗಸ್ಟ್‌ನಲ್ಲಿ “ಟೋಬಿ’ ಹವಾ ಜೋರಾಗಿರಲಿದೆ.
ರಾಜ್ ಬಿ ಶೆಟ್ಟಿ ನಾಯಕರಾಗಿರುವ “ಟೋಬಿ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಆಗಸ್ಟ್ ಮೊದಲ ವಾರದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಕನ್ನಡ ಚಿತ್ರರಂಗಕ್ಕೆ ಈ ಚಿತ್ರವೂ ಬೂಸ್ಟರ್ ಡೋಸ್ ಆಗಲಿದೆ ಎಂಬ ನಂಬಿಕೆ ಸಿನಿಮಾ ಮಂದಿಯದ್ದು.
ಇನ್ನು, ನಿರೀಕ್ಷಿತ ಸಿನಿಮಾಗಳ ಮೆರವಣಿಗೆ ಕೇವಲ ಆಗಸ್ಟ್‌ಗೆ ಕೊನೆಯಾಗುವುದಿಲ್ಲ. ಸೆಪ್ಟೆಂಬರ್ ಮೊದಲ ವಾರ ರಕ್ಷಿತ್ ನಟನೆ ನಿರ್ಮಾಣದ “ಸಪ್ತಸಾಗರದಾಚೆ ಎಲ್ಲೋ- ಸೈಡ್ ಎ’ ಬಿಡುಗಡೆಯಾಗಲಿದೆ. ಇದರ ಜೊತೆಗೆ ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರ ಕೂಡಾ ಉಪ್ಪಿ ಬರ್ತ್‌ಡೇಗೆ ರಿಲೀಸ್ ಆಗುವುದಾಗಿ ಘೋಷಿಸಿಕೊಂಡಿದೆ. ಅಲ್ಲಿಗೆ ಸೆಪ್ಟೆಂಬರ್ ಕಲರ್‌ಫುಲ್ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು, ಅಕ್ಟೋಬರ್ ನಲ್ಲಿ ಯಾವ ಸಿನಿಮಾ ಎಂಬ ಪ್ರಶ್ನೆಗೆ ಉತ್ತರ “ಸಪ್ತಸಾಗರದಾಚೆ ಎಲ್ಲೋ- ಸೈಡ್ ಬಿ. ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರಾಚೆ ಎಲ್ಲೋ’ ಎರಡು ಭಾಗಗಳಲ್ಲಿ ಬಿಡುಗಡೆ ಯಾಗಲಿದ್ದು, ಮೊದಲ ಭಾಗ ಸೆಪ್ಟೆಂಬರ್‌ನಲ್ಲಿ ಬಂದರೆ, ಎರಡನೇ ಭಾಗ ಅಕ್ಟೋಬರ್ 20ಕ್ಕೆ ಬಿಡುಗಡೆಯಾಗಲಿದೆ. ಇದರ ಜೊತೆಗೆ ಅಕ್ಟೋಬರ್ ಹೊತ್ತಿಗೆ ಇನ್ನೊಂದಿಷ್ಟು ಚಿತ್ರಗಳು ರಿಲೀಸ್ ಡೇಟ್ ಘೋಷಣೆ ಮಾಡುವ ಮೂಲಕ ನಿರೀಕ್ಷೆ ಹೆಚ್ಚಾಗಲಿದೆ.
ರವಿಪ್ರಕಾಶ್ ರೈ