Advertisement

ಚೀನ ಉತ್ಪನ್ನಗಳಿಗೆ ಕಲರ್‌ ಕೋಡ್‌ ಶಾಕ್‌!

02:37 AM Jun 25, 2020 | Hari Prasad |

ಹೊಸದಿಲ್ಲಿ: ಚೀನೀ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ, ಡ್ರ್ಯಾಗನ್‌ಗೆ ‘ಬಣ್ಣದ ಚಾಟಿ’ ಬೀಸಿದೆ.

Advertisement

ದೇಶೀ ಮತ್ತು ವಿದೇಶಿ ಉತ್ಪನ್ನಗಳನ್ನು ಪ್ರತ್ಯೇಕಿಸಲು ಉತ್ಪನ್ನಗಳ ಮೇಲೆ ಬಣ್ಣದ ಸಂಕೇತಗಳನ್ನು (ಕಲರ್‌ ಕೋಡ್‌) ನಮೂದಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಹಕನಿಗೆ ಚೀನೀ ವಸ್ತುಗಳನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭವಾಗಲಿದೆ.

ಕೇಂದ್ರವು ಸರಕಾರಿ ಇ- ಮಾರುಕಟ್ಟೆ ತಾಣದಲ್ಲಿ (ಜಿಇಎಂ) ಮಾರಾಟಗೊಳ್ಳುವ ಉತ್ಪನ್ನಗಳ ಮೂಲ ದೇಶಗಳನ್ನು ಸೂಚಿಸುವುದು ಕಡ್ಡಾಯ ಎಂದು ಆದೇಶಿಸಿದ ಬೆನ್ನಲ್ಲೇ ಕಲರ್‌ ಕೋಡ್‌ ಜಾರಿಗೆ ಮುಂದಾಗಿದೆ. ಕೇವಲ ಜಿಇಎಂ ಮಾತ್ರವಲ್ಲದೆ, ಫ್ಲಿಪ್‌ಕಾರ್ಟ್‌- ಅಮೆಜಾನ್‌, ಪೇಟಿ ಎಂನಂಥ ಖಾಸಗಿ ಇ- ಕಾಮರ್ಸ್‌ ವೇದಿಕೆಗಳಿಗೂ ಇದನ್ನು ಅಳವಡಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಅಭಿವೃದ್ಧಿ ಇಲಾಖೆ (ಡಿಪಿಐಐಟಿ) ಪರಿಶೀಲಿಸುತ್ತಿದೆ.

ಭಾರತಕ್ಕೆ ಕೇಸರಿ
ಈಗ ಮಾರುಕಟ್ಟೆಯ ಉತ್ಪನ್ನಗಳಲ್ಲಿ ಸಸ್ಯಾಹಾರಕ್ಕೆ ಹಸುರು, ಮಾಂಸಾಹಾರದ ಉತ್ಪನ್ನಗಳ ಮೇಲೆ ಕೆಂಪು ಬಣ್ಣದ ಚುಕ್ಕಿ ನಮೂದಿಸಿರುವುದನ್ನು ನೋಡಿರುತ್ತೀರಿ. ಹಾಗೆಯೇ ವಿದೇಶಗಳ ಉತ್ಪನ್ನಕ್ಕೂ ಒಂದೊಂದು ಬಣ್ಣ ನಮೂದಿ ಸಲು ನಿರ್ಧರಿಸಲಾಗುತ್ತಿದೆ. ಭಾರತದ ಉತ್ಪನ್ನಗಳ ಮೇಲೆ ಕೇಸರಿ ಅಥವಾ ಕಿತ್ತಳೆ ಬಣ್ಣ ನಮೂದಿ ಸಲು ಸರಕಾರ ಚಿಂತಿಸಿದೆ.

ಚೀನೀ ವಸ್ತುಗಳಿಗೆ ಕಡಿವಾಣ
ಪ್ರಸ್ತುತ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಪೇಟಿ ಎಂನಲ್ಲಿ ಶೇ. 70ರಷ್ಟು ಚೀನದ ವಸ್ತುಗಳದೇ ಪಾರಮ್ಯ. ಈಗಾಗಲೇ ಜಿಇಎಂನಲ್ಲಿ ಶೇ. 50ರಷ್ಟು ದೇಶೀ ಉತ್ಪನ್ನಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸರಕಾರ ಖಡಕ್ಕಾಗಿ ನಿರ್ದೇಶಿಸಿದೆ.

Advertisement

ಯಾಕೆ ಈ ಬೆಳವಣಿಗೆ?
ಸ್ವದೇಶಿ ಉತ್ಪನ್ನ ಪ್ರೋತ್ಸಾಹಿಸಲು ಕೇಂದ್ರ ಸರಕಾರ ಈ ತೀರ್ಮಾನಕ್ಕೆ ಬಂದಿದೆ. ಆತ್ಮ ನಿರ್ಭರ ಭಾರತ ಘೋಷಣೆ ಅನಂತರ ಸರಕಾರಿ ಇ- ಮಾರುಕಟ್ಟೆ ತಾಣದಲ್ಲಿ ಮಾತ್ರವೇ ದೇಶಿ – ವಿದೇಶಿ ವಸ್ತುಗಳ ವರ್ಗೀಕರಣಕ್ಕೆ ನೀತಿ ರೂಪಿಸಲಾಗಿತ್ತು. ಚೀನ ದುಷ್ಕೃತ್ಯದ ಬಳಿಕ ಅದರ ಉತ್ಪನ್ನಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಇನ್ನು ಚೀನ ಆಟ ನಡೆಯದು!
ಚೀನವು ಭಾರತದೊಂದಿಗಿನ ವ್ಯವಹಾರದಲ್ಲಿ 2018-19ರಲ್ಲಿ 70.32 ಬಿಲಿಯನ್‌ ಡಾಲರ್‌ ರಫ್ತು ಆದಾಯ ಕಂಡುಕೊಂಡಿದೆ. 2019ರ ಎಪ್ರಿಲ್‌ನಿಂದ 2020ರ ಫೆಬ್ರವರಿ ನಡುವೆ 62.38 ಬಿಲಿಯನ್‌ ಡಾಲರ್‌ ಗಿಟ್ಟಿಸಿಕೊಂಡಿದೆ. ಈಗಾಗಲೇ ಚೀನ ವಸ್ತುಗಳ ಮೇಲೆ ಜನರು ಬಹಿಷ್ಕಾರ ಹೇರುತ್ತಿದ್ದಾರೆ. ಕಲರ್‌ ಕೋಡ್‌ ಜಾರಿಯಾದರೆ ಈ ಬಹಿಷ್ಕಾರಕ್ಕೆ ಇನ್ನಷ್ಟು ಬಲ ಸಿಗಲಿದೆ.

ಉತ್ಪನ್ನದಲ್ಲಿ ದೇಶದ ಹೆಸರಿರಲಿ
ದೇಶದ ದೈತ್ಯ ಅಂತರ್ಜಾಲಾಧಾರಿತ ಮಾರಾಟ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಪೇಟಿಎಂ ಸಂಸ್ಥೆಗಳು ಮಾರಾಟ ಮಾಡುವ ವಸ್ತುಗಳ ಮೇಲೆ ದೇಶದ ಹೆಸರು ನಮೂದಿಸಬೇಕಾಗುತ್ತದೆ. ಈ ಸಂಬಂಧ ಜಿಇಎಂ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಆತ್ಮ ನಿರ್ಭರ ಭಾರತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ದೇಶದ ಹೆಸರು ಇಲ್ಲದೇ ಇರುವ ವಸ್ತುಗಳೇನಾದರೂ ಕಂಡರೆ ಅವುಗಳನ್ನು ಜಿಇಎಂನಿಂದ ತೆಗೆಯುವುದಾಗಿ ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next