ಕಿರುತೆರೆ ಪ್ರಿಯರಿಗೆ ಇದು ಸಿಹಿ ಸುದ್ದಿ. ಕಲರ್ ಸೂಪರ್ ವಾಹಿನಿಯಲ್ಲಿ ಹೊಸ ಬಗೆಯ ಮನರಂಜನಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದು, ಈ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಮತ್ತಷ್ಟು ಹತ್ತಿರ ಸೆಳೆಯಲು ಮುಂದಾಗಿದೆ. “ಜೂನ್ ತಿಂಗಳು ಸೂಪರ್ ತಿಂಗಳು’ ಎಂಬ ಅಭಿಯಾನದಡಿ ಎಂಟು ಹೊಸ ಕಾರ್ಯಕ್ರಮಗಳನ್ನು ಆರಂಭಿಸಲು ಕಲರ್ ಸೂಪರ್ ವಾಹಿನಿ ಮುಂದಾಗಿದೆ.
ಈ ಎಂಟು ವಿಭಿನ್ನ ಕಾರ್ಯಕ್ರಮಗಳ ಮೂಲಕ ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಂ, ಸಿಹಿಕಹಿ ಚಂದ್ರು ಕೂಡಾ ಮತ್ತೆ ಕಿರುತೆರೆಗೆ ವಾಪಾಸ್ ಆಗುತ್ತಿದ್ದಾರೆ. ಈ ಎಂಟು ಕಾರ್ಯಕ್ರಮಗಳು ಬೇರೆ ಬೇರೆ ವಿಭಾಗಳಿಗೆ ಸೇರಿದ್ದು ಈ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಲು ವಾಹಿನಿ ಮುಂದಾಗಿದೆ. ಧಾರಾವಾಹಿ, ಕಾಮಿಡಿ ಶೋ, ಸಂಗೀತ .. ಹೀಗೆ ವಿವಿಧ ವಿಭಾಗಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
“ಜೂನ್ ತಿಂಗಳು ಸೂಪರ್ ತಿಂಗಳು’ನಡಿ ಆರಂಭವಾಗುತ್ತಿರುವ ಕಾರ್ಯಕ್ರಮಗಳೆಂದರೆ, “ಇವಳೇ ವೀಣಾಪಾಣಿ’, “ಮನೆಯೇ ಮಂತ್ರಾಲಯ’, “ಮಜಾ ಭಾರತ’, “ರಾಜ ರಾಣಿ’, “ಮಾಂಗಲ್ಯಂ ತಂತುನಾನೇನ’, “ಕನ್ನಡ ಕೋಗಿಲೆ’, “ಮಗಳು ಜಾನಕಿ’, ಹಾಗೂ “ಪಾ ಪ ಪಾಂಡು’ ಕಾರ್ಯಕ್ರಮಗಳು ಆರಂಭವಾಗಲಿವೆ. “ವೀಣಾಪಾಣಿ’ ಒಂದು ಭಕ್ತಿಪ್ರಧಾನ ಧಾರಾವಾಹಿ. ಶಾರದಾಂಬೆಯ ಭಕ್ತೆಯ ಬದುಕಿನ ಕಥೆಯನ್ನು ಇಲ್ಲಿ ಹೇಳಲು ಹೊರಟಿದೆ ತಂಡ.
“ಮನೆಯೇ ಮಂತ್ರಾಲಯ’ ಒಂದು ಕೌಟುಂಬಿಕ ಧಾರಾವಾಹಿ. ಅಪ್ಪ-ಅಮ್ಮನ ಆರೈಕೆಯಲ್ಲಿ ಬೆಳೆದ ಹುಡುಗಿಯೊಬ್ಬಳು 32 ಜನರಿರುವ ಕೂಡು ಕುಟುಂಬಕ್ಕೆ ಹೋದಾಗ ಅಲ್ಲಿ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದು ಈ ಧಾರಾವಾಹಿಯ ತಿರುಳು. ಈಗಾಗಲೇ ಪ್ರಸಾರವಾಗಿರುವ “ಮಜಾ ಭಾರತ’ ಕಾಮಿಡಿ ಶೋ ಮತ್ತೆ ಆರಂಭವಾಗಲಿದ್ದು, ಈ ಶೋನ ಜಡ್ಜ್ಗಳಾಗಿ ರಚಿತಾ ರಾಮ್, ಗುರುಕಿರಣ್ ಭಾಗಾವಹಿಸುತ್ತಿದ್ದಾರೆ.
ಉಳಿದಂತೆ “ಬಿಗ್‌ಬಾಸ್’ ದಿವಾಕರ್ ಕೂಡಾ “ಮಜಾ ಭಾರತ’ ತಂಡದಲ್ಲಿದ್ದಾರೆ. ಇನ್ನು, “ರಾಜ ರಾಣಿ’ ಹುಡುಗಿಯೊಬ್ಬಳ ಮೇಲೆ ನಡೆಯುವ ಕಥೆಯನ್ನು ಹೊಂದಿದೆ. ಎಡವಟ್ಟು ಮಾಡಿಕೊಳ್ಳುವ ಚುಕ್ಕಿ ಎಂಬ ಹುಡುಗಿಯ ಸುತ್ತ ಈ ಕಥೆ ಸಾಗಲಿದೆ. “ಮಾಂಗಲ್ಯಂ ತಂತುನಾನೇ’ ಧಾರಾವಾಹಿ ಶ್ರಾವಣಿ ಎಂಬ ಹುಡುಗಿಯ ಬದುಕಿನ ಕಥೆ. ಎಲ್ಲಾ ವಿಷಯದಲ್ಲೂ ಅದೃಷ್ಟವಂತೆಯಾಗಿರುವ ಶ್ರಾವಣಿಗೆ, ಮದುವೆ ವಿಚಾರದಲ್ಲಿ ಮಾತ್ರ ಅದೃಷ್ಟ ಕೈಕೊಡುತ್ತಿರುತ್ತದೆ.
ಅದಕ್ಕೆ ಕಾರಣವೇನು, ಮುಂದೇನಾಗುತ್ತದೆ ಎಂಬುದು ಕಥಾನಕ. ಉಳಿದಂತೆ “ಕನ್ನಡ ಕೋಗಿಲೆ’ ಎಂಬ ಸಂಗೀತ ಕಾರ್ಯಕ್ರಮವೂ ಆರಂಭವಾಗಲಿದ್ದು, ಇಲ್ಲಿ ಸಾಧುಕೋಕಿಲ, ಅರ್ಚನಾ ಉಡುಪ ಹಾಗೂ ಚಂದನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. “ಮಾಯಾಮೃಗ’, “ಮನ್ವಂತರ’, “ಮುಕ್ತ’, “ಮುಕ್ತ ಮುಕ್ತ’ದಂತಹ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು ನೀಡಿರುವ ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು, ಮತ್ತೆ ಕಿರುತೆರೆಗೆ ಮರಳಿದ್ದು, “ಮಗಳು ಜಾನಕಿ’ ಎಂಬ ಧಾರಾವಾಹಿ ಮಾಡುತ್ತಿದ್ದಾರೆ.
ಇದು ಅಪ್ಪ-ಮಗಳ ಬಾಂಧವ್ಯದ ಕಥೆಯನ್ನು ಹೊಂದಿದೆ. ಇಂದಿನ ಪ್ರೇಕ್ಷಕರ ವೇಗದ ಜೊತೆಗೆ ಟಿ.ಎನ್.ಸೀತಾರಾಂ ಅವರ ಶೈಲಿಯಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ “ಪಾ ಪ ಪಾಂಡು’ ಧಾರಾವಾಹಿ ಮತ್ತೆ ಆರಂಭವಾಗುತ್ತಿದ್ದು, ಈ ಮೂಲಕ ಸಿಹಿಕಹಿ ಚಂದ್ರು ಮತ್ತೆ ವಾಪಾಸ್ ಆಗುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಶಾಲಿನಿ, ಚಿದಾನಂದ್ ಜೊತೆ ಹೊಸ ಕಲಾವಿದರು ನಟಿಸುತ್ತಿದ್ದಾರೆ.