Advertisement

ಚಿಣ್ಣರ ಬಾಳಲ್ಲಿ ಮೂಡಿದ ‘ಕಾಮನಬಿಲ್ಲು’

02:49 PM May 03, 2019 | Suhan S |

ಹಾನಗಲ್ಲ: ಬೇಸಿಗೆಯ ಜತೆಗೆ ಮಕ್ಕಳಿಗೆ ರಜೆ. ಇದು ಅಜ್ಜ ಅಜ್ಜಿ ಬಂಧು ಬಳಗದವರ ಊರು ಕೇರಿಗೆ ಹೋಗಿ ಮಕ್ಕಳು ಸಂಭ್ರಮಿಸುವ ಕಾಲ. ಆದರೆ ನಾಗರಿಕ ಸಂಸ್ಕೃತಿಯ ಹೆಸರಲ್ಲಿ ರಜೆಗಳು ಇನ್ನೊಂದು ವರ್ಗಕೋಣೆಯಾಗಿ ಮಕ್ಕಳನ್ನು ಮುದ್ದೆ ಮಾಡುವ ಶಿಬಿರಗಳಿಗೆ ಭಿನ್ನವಾಗಿ ಆಟದೊಂದಿಗಿನ ಪಾಠ, ನಾಟಕ, ನೃತ್ಯದೊಂದಿಗೆ ನಲಿಯುವ ಶಿಬಿರವಾಗಿ ಹಾನಗಲ್ಲಿನಲ್ಲಿ ಕಾಮನ ಬಿಲ್ಲು ಮೂಡಿದೆ.

Advertisement

ಹೊಸದಾಗಿ ರೂಪ ಪಡೆದ ಹಾನಗಲ್ಲಿನ ರಂಗ ಸಂಗಮ ಕಲಾ ಸಂಘದ ಹೊಸ ಪ್ರಯತ್ನ 50 ಮಕ್ಕಳನ್ನು ಮುದವಾಗಿ ಮೊಬೈಲ್, ಆರೋಗ್ಯ ಹಾಳು ಮಾಡುವ ಕುರುಕಲು ತಿಂಡಿಗಳಿಂದ ದೂರವಿಟ್ಟು ಹೊಸ ಚೈತನ್ಯ ನೀಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ.

ಇಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯ ಬಯಲಿಗೆ ಜನಪದ ರೂಪ ನೀಡಿ ಮಕ್ಕಳು ಶಿಬಿರಕ್ಕೆ ಬರುವಾಗಲೇ ಹೊಸದೊಂದು ಜಗತ್ತಿಗೆ ಪ್ರವೇಶಿಸಿದಂತಾಗುತ್ತದೆ. ಶಾಲೆ ಪಠ್ಯ, ಪಾಠ, ಪುಸ್ತಕದ ಹೊರೆಯ ನೆನಪೇ ಇಲ್ಲದೆ ಹಾಯಾಗಿ ಆಡಿ ನಲಿದು ಖುಷಿ ನೀಡುವ ಈ ಶಿಬಿರ ಮಕ್ಕಳ ಪಾಲಿನ ಸ್ವರ್ಗ ಎನ್ನಬೇಕು. ಬೆಳಗಿನ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 8 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ನಡೆಯುತ್ತಿರುವ ಈ ಶಿಬಿರ ಮೇ 1ರಿಂದ ಆರಂಭಗೊಂಡಿದ್ದು, ಮೇ 15 ಕ್ಕೆ ಸಮಾರೋಪಗೊಳ್ಳುತ್ತದೆ.

ಇಲ್ಲಿ ಮಕ್ಕಳನ್ನು ತೊಡಗಿಸುವ ಜನಪದ ಆಟಗಳು, ನೃತ್ಯ, ಚಿತ್ರಕಲೆ, ಪೇಪರ್‌ ಕಟಿಂಗ್‌, ಮಣ್ಣಿನ ಮಾದರಿ ಸಿದ್ಧಪಡಿಸುವುದು. ಆರೋಗ್ಯ, ಪರಿಸರ ಜ್ಞಾನಕ್ಕೂ ಒತ್ತು ನೀಡಿರುವುದು ಈ ಶಿಬಿರದ ವಿಶೇಷವೆನ್ನಬೇಕು. ಎಲ್ಲದಕ್ಕೂ ಮೊದಲು ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕ್ರಮ, ಹಾಡು, ಏಕ ಪಾತ್ರಾಭಿನಯ, ಮಿಮಿಕ್ರಿ, ಜ್ಞಾನ ಭಂಡಾರ ಹೀಗೆ ಎಲ್ಲವನ್ನೂ ಅಳೆದು ತೂಗಿ ಅವರ ಪ್ರತಿಭೆಗನುಗುಣವಾಗಿ ಹೊಸ ಚೈತನ್ಯ ನೀಡುವ ಕೆಲಸ ಇಲ್ಲ ನಡೆಯುತ್ತಿದೆ. ಬಹುಮುಖ್ಯ ಸಂಗತಿ ಎಂದರೆ ನಾಟಕ. ಮಕ್ಕಳಿಗೆ ನಾಟಕದ ಅಭಿರುಚಿ ಮೂಡಿಸಿ ಈ ಮಕ್ಕಳಿಂದಲೇ ಸಮಾರೋಪದ ದಿನ ಒಂದು ನಾಟಕ ಪ್ರದರ್ಶನದ ಸಿದ್ಧತೆಯೂ ನಡೆದಿದೆ.

ರಜಾ ಶಿಬಿರಗಳೆಂದರೆ ಮತ್ತದೆ ಪಠ್ಯದಲ್ಲಿ ಹೂತು, ಪುಸ್ತಕಗಳನ್ನು ಶಾಲಾ ಮುನ್ನಾ ದಿನಗಳಲ್ಲಿಯೇ ಗೋಕು ಹೊಡೆಯುವ, ಅದನ್ನೆ ತಲೆತುಂಬಿ ತುಂಬುವ ಕಾರ್ಯದಿಂದ ಹೊರಬಂದು ಮಕ್ಕಳಿಗೆ ಮುಕ್ತ ಅವಕಾಶ ನೀಡಿ, ಅವರ ಆತ್ಮಬಲ, ಕೆಲಸದ ಶ್ರದ್ಧೆ, ಉತ್ತಮ ಗುರಿ, ಸಾಧಿಸುವ ಮಾರ್ಗ, ಮಕ್ಕಳಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಈ ಶಿಬಿರ ನಿಜಕ್ಕೂ ಇಂದು, ನಾಳಿನ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

Advertisement

ಹಾನಗಲ್ಲಿನ ರಂಗ ಸಂಗಮ ಕಲಾ ಸಂಘದ ಈ ಹೊಸ ಪ್ರಯತ್ನಕ್ಕೆ ಅಧ್ಯಕ್ಷ ಜಗದೀಶ ಕಟ್ಟಿಮನಿ, ಕಾರ್ಯದರ್ಶಿ ಹರ್ಷವರ್ಧನ ಕೆ.ಬಿ, ದೇವಿಪ್ರಸಾದ ಯರತೋಟ, ವಿಷ್ಣು ಮಾಳಗಿಮನಿ ಕಂಕಣಬದ್ಧರಾಗಿ ನಿಂತು ಶಿಬಿರದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಶೇಷಗಿರಿಯ ಪ್ರಸಿದ್ಧ ರಂಗ ತಂಡ ಶೇಷಗಿರಿ ಕಲಾ ತಂಡ ಎಲ್ಲ ಬೆಂಬಲ ಮಾರ್ಗದರ್ಶನ ನೀಡಿದೆ. ಆರೋಗ್ಯವಂತ ಮನಸ್ಸು, ಮನಸ್ಸಿನ ಪರಿಸರ ನಿರ್ಮಾಣಗೊಳಿಸುವ ಇಂಥ ಶಿಬಿರಕ್ಕೆ ನಮ್ಮದೂ ಒಂದು ಬೆಂಬಲ ಎಂಬಂತೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.

ಕರ್ನಾಟಕ ಸರಕಾರದ ಇಂಧನ ಇಲಾಖೆ ಉಪಕಾರ್ಯದರ್ಶಿ ವಿಶ್ವನಾಥ ಹಿರೇಮಠ ಶಿಬಿರಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಇಂಥ ಶಿಬಿರಗಳ ಅಗತ್ಯ ಈಗ ಹೆಚ್ಚಾಗಿದೆ. ಮಕ್ಕಳನ್ನು ಮೊಬೈಲ್ನಂತಹ ಚಟುವಟಿಕೆಗಳಿಂದ ದೂರವಿಟ್ಟು ಒಳ್ಳೆಯ ಹವ್ಯಾಸ ಬೆಳೆಸಲು ಮುಂದಾಗಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next