ಮಹಿಳೆಯರಿಗಿಂದು ಚೆಂದದ ಉಡುಗೆಗಳಿಗೇನೂ ಕೊರತೆ ಇಲ್ಲ. ನವನವೀನ ಬಟ್ಟೆಗಳು ಇಂದು ಜನರ ಮನಸೆಳೆಯುತ್ತಿವೆ. ಅದೇ ರೀತಿ ಲೇಯರ್ ಕುರ್ತಿಗಳಿಗೂ ಬೇಡಿಕೆ ಹೆಚ್ಚಿದ್ದು ವಿವಿಧ ಮಾದರಿಯ ದಿರಿಸನ್ನು ಕೊಂಡುಕೊಳ್ಳುತ್ತಿದ್ದಾರೆ.
ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು ಇಷ್ಟವಿರುತ್ತದೆ. ಒಂದು ಲೇಯರ್‌ನಲ್ಲಿ ತಿಳಿ ಬಣ್ಣ ಇನ್ನೊಂದರಲ್ಲಿ ಗಾಢವಾದ ಬಣ್ಣ ಈ ಲೇಯರ್ಡ್ ಕುರ್ತಿಗಳಲ್ಲಿದ್ದು, ಇವುಗಳು ಖಾದಿ, ಹತ್ತಿ, ಉಣ್ಣೆ, ಶಿಫಾನ್, ಸ್ಯಾಟಿನ್ ಮಂತಾದ ಆಯ್ಕೆಗಳಲ್ಲಿ ಮಾರುಕಟ್ಟೆ ಯಲ್ಲಿ ಲಭ್ಯವಿದೆ. ಇದು ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತದೆ. ಅದಲ್ಲದೆ ಇವುಗಳನ್ನು ಮದುವೆ ಸಮಾರಂಭಗಳಿಗೂ ತೊಡಬಹುದು ಜತೆಗೆ ಆಫೀಸ್, ಪಾರ್ಟಿಗಳಿಗೂ ಸೂಕ್ತವಾಗಿದೆ.
ಇದು ಎಲ್ಲಾ ಕಾಲಗಳಿಗೂ ಸೂಕ್ತವಾಗುವಂತೆ ಸ್ಲೀವ್‌ಲೆಸ್, ಬೇಕಾದಲ್ಲಿ ಉದ್ದ ತೋಳು, ಬೆಲ್ ಬಾಟಮ್ ತೋಳು, ಮುಕ್ಕಾಲು ತೋಳು, ಫುಶ್ ಅಪ್ ತೋಳು, ಹಾಫ್ಸ್ಲೀವ್ ತೋಳು, ಬಟನ್‌ಗಳಿರುವ ತೋಳು ಹೀಗೆ ಹಲವು ವಿಧದ ತೋಳುಗಳು ಲಭ್ಯವಿದೆ. ಇವುಗಳಿಗೆ ವಿಶೇಷವಾಗಿ ಕಾಲರ್ ಲಭ್ಯವಿದ್ದು, ಚೂಡಿದಾರ್ ಟಾಪ್‌ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಕ್ಯಾಶುಲ್ ಉಡುಗೆ ಆಗಿರಲಿ, ಸಾಂಪ್ರದಾಯಿಕವಾಗಿರಲು ಎಲ್ಲ ತರಹದ ಬಟ್ಟೆಗಳಿಗೂ ಕೂಡ ಸೈ ಎನಿಸುಕೊಳ್ಳುತ್ತದೆ ಈ ಡಬಲ್ ಲೇಯರ್ ಕುರ್ತಿ.
ಕಲರ್ ಆಯ್ಕೆಯಲ್ಲಿಇರಲಿ ಜಾಗ್ರತೆ
ಕೆಲವೊಮ್ಮೆ ಇಂತಹ ಲೇಯರ್ ಕುರ್ತಿಗಳನ್ನು ತೆಗೆದುಕೊಳ್ಳುವಾಗ ನಾವು ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತೇವೆ ಅದಕ್ಕಾಗಿ ಮೊದಲು ಯಾವ ಬಣ್ಣ ನಮಗೆ ಹೊಂದಿಕೆಯಾಗುತ್ತದೆ ಎಂದು ತಿಳಿದು ಅನಂತರ ಆಯ್ದುಕೊಳ್ಳಬೇಕು. ಕೆಲವರಿಗೆ ತಿಳಿ ಬಣ್ಣದ ಬಟ್ಟೆಗಳು ಒಪ್ಪಿಗೆಯಾದರೆ, ಇನ್ನು ಕೆಲವರಿಗೆ ಗಾಢ ಬಣ್ಣ ಹೊಂದಿಕೆಯಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆಯ್ದುಕೊಳ್ಳುವಾಗ ಸ್ವಲ್ಪ ಗಮನವಿರಲಿ. ಕೆಲವು ಕಡಿಮೆ ದರದಲ್ಲಿ ಸಿಗುವ ಲೇಯರ್ ಕುರ್ತಿಗಳು ಕಲರ್ ಹೋಗುವ ಸಂಭವಿರುತ್ತದೆ ಆದ್ದರಿಂದ ಬಟ್ಟೆಯನ್ನು ಆಯ್ದುಕೊಳ್ಳುವಾಗ ಬಟ್ಟೆಯ ಕ್ವಾಲಿಟಿ ನೋಡಿ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನೋಡಿ ಖರೀದಿಸಿ.