Advertisement
ಒಂದು ಕಡೆ “ಪೈಲ್ವಾನ್’, ಮತ್ತೂಂದು ಕಡೆ “ಕಿಸ್’, ಇನ್ನೊಂದು ಕಡೆ “ಗೀತಾ’… ಅದನ್ನು ದಾಟಿದರೆ ಸಿಗುವ “ಭರಾಟೆ’, ಪರಭಾಷೆಯ “ಸಾಹೋ’, “ಸೈರಾ ನರಸಿಂಹರೆಡ್ಡಿ’,
-ಸೆಪ್ಟೆಂಬರ್ ಮೊದಲ ವಾರದಿಂದಲೇ ಅಭಿಮಾನಿಗಳನ್ನು ಖುಷಿಯಾಗಿಡುವ ಸಿನಿಮಾಗಳಿವು. ಒಂದೇ ಮಾತಲ್ಲಿ ಹೇಳಬೇಕಾದರೆ ಸೆಪ್ಟೆಂಬರ್ ಎರಡನೇ ವಾರದಿಂದಲೇ ಚಿತ್ರರಂಗ ಮತ್ತಷ್ಟು ಕಲರ್‌ಫುಲ್ ಆಗಲಿದೆ ಎಂದರೆ ತಪ್ಪಲ್ಲ. ಸಿನಿಮಾ ಮಂದಿಗೆ ಸೆಪ್ಟೆಂಬರ್ ತಿಂಗಳು ತುಂಬಾ ವಿಶೇಷವೆಂದರೆ ತಪ್ಪಲ್ಲ. ಒಂದು ಕಡೆ ಸುದೀಪ್ ನಟನೆಯ “ಪೈಲ್ವಾನ್’ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾದರೆ, ಮತ್ತೂಂದು ಕಡೆ ಒಂದು ಜೋಡಿ ದೊಡ್ಡ ಕನಸುಗಳೊಂದಿಗೆ “ಕಿಸ್’ ಮೂಲಕ ಅಂಬೆಗಾಲಿಡುತ್ತಾ ಎಂಟ್ರಿಕೊಡುತ್ತಿದೆ. ಇದರ ಜೊತೆಗೆ “ಗೀತಾ’ ಎಂಬ ಸಿನಿಮಾ ಮೂಲಕ ಗಣೇಶ್ ಹೊಸ ಪ್ರಯತ್ನದೊಂದಿಗೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಆಗಸ್ಟ್ ತಿಂಗಳನ್ನು “ಕುರುಕ್ಷೇತ್ರ’ ಹೇಗೆ ಸದಾ ಸುದ್ದಿಯಲ್ಲಿರುವಂತೆ ಹಾಗೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತೋ ಸೆಪ್ಟೆಂಬರ್ ತಿಂಗಳು ಮತ್ತೂಂದಿಷ್ಟು ಸಿನಿಮಾಗಳು ಪ್ರೇಕ್ಷಕರನ್ನು ಮತ್ತಷ್ಟು ಬಿಝಿಯಾಗಿಸಲಿವೆ. ಸುದೀಪ್ ಅಭಿನಯದ ಬಹುನಿರೀಕ್ಷಿತ “ಪೈಲ್ವಾನ್’ ಚಿತ್ರ ಸೆಪ್ಟೆಂಬರ್ 12ಕ್ಕೆ ಬಿಡುಗಡೆಯಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಕಾಣುವ ಮೂಲಕ ಎಲ್ಲಾ ಭಾಷೆಯ ಸಿನಿಪ್ರಿಯರನ್ನು ರಂಜಿಸಲಿದೆ. ಔಟ್ ಅಂಡ್ ಔಟ್ ಮಾಸ್-ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಎಂಟ್ರಿಕೊಡಲಿದೆ. ಸುದೀಪ್ ಅವರ ಮೊದಲ ಅಧಿಕೃತ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ.
Related Articles
Advertisement
ಇದು ಕೇವಲ ಕನ್ನಡ ಸಿನಿಮಾಗಳ ವಿಷಯವಾದರೆ, ಒಟ್ಟಾರೆಯಾಗಿ ಎಲ್ಲಾ ಭಾಷೆಯ ಸಿನಿಮಾಗಳನ್ನು ಇಷ್ಟಪಡುವ ಮಂದಿಗೆ ಆಗಸ್ಟ್ ಕೊನೆಯ ವಾರದಿಂದಲೇ ಹಬ್ಬ ಎನ್ನಬಹುದು.
‘ಬಾಹುಬಲಿ’ ನಂತರ ಪ್ರಭಾಸ್ ನಟಿಸಿರುವ ‘ಸಾಹೋ’ ಚಿತ್ರ ಆಗಸ್ಟ್ ಕೊನೆಗೆ ಬಿಡುಗಡೆಯಾಗುತ್ತಿದೆ. ಅದರ ಬೆನ್ನಿಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ‘ಪೈಲ್ವಾನ್’. ಇನ್ನು, ಅಕ್ಟೋಬರ್ ಆರಂಭದಲ್ಲಿ ಅಂದರೆ ಅಕ್ಟೋಬರ್ 02ರಂದು ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಬಿಡುಗಡೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಕನ್ನಡದಲ್ಲೂ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಅದೇ ದಿನ ಬಾಲಿವುಡ್ ಸ್ಟಾರ್‌ನಟನೊಬ್ಬನ ಚಿತ್ರ ಕೂಡಾ ಬಿಡುಗಡೆಯಾಗುತ್ತಿದೆ. ಅದು ಹೃತಿಕ್ ರೋಶನ್ ಅವರ ‘ವಾರ್’. ಈಗಾಗಲೇ ಹೃತಿಕ್ ಅಭಿನಯ ‘ಸೂಪರ್ 30’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡಿದ ಬೆನ್ನಲ್ಲೇ ‘ವಾರ್’ ಬಿಡುಗಡೆಯಾಗುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ. ಇವತ್ತು ಪ್ರೇಕ್ಷಕ ಕೇವಲ ಒಂದೇ ಭಾಷೆಯ ಸಿನಿಮಾಕ್ಕೆ ಅಂಟಿಕೊಂಡಿಲ್ಲ. ಕಲೆ ಭಾಷೆಯ ಗಡಿದಾಟಿದೆ. ಕಲೆಗೆ ಭಾಷೆಯ ಹಂಗಿಲ್ಲ ಎಂಬುದನ್ನು ಅನೇಕ ಸಿನಿಮಾಗಳು, ಕಲಾವಿದರು ತೋರಿಸಿಕೊಟ್ಟಿದ್ದಾರೆ ಕೂಡಾ. ಅದೇ ಕಾರಣದಿಂದಲೇ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಹೆಚ್ಚುತ್ತಿದೆ. ಆ ನಿಟ್ಟಿನಲ್ಲಿ ಆಗಸ್ಟ್ ಕೊನೆಯ ವಾರದಿಂದ ಅಕ್ಟೋಬರ್‌ವರೆಗೆ ಬೇರೆ ಬೇರೆ ಸಿನಿಮಾಗಳು ಎಲ್ಲಾ ಭಾಷೆಯ ಪ್ರೇಕ್ಷಕರಿಗೆ ಮನರಂಜನೆ ನೀಡಲಿವೆ.
ರವಿಪ್ರಕಾಶ್ ರೈ