Advertisement

ಅಗಣಿತ ದೃಷ್ಟಿಗೆ  ವರ್ಣರೂಪ

01:53 PM Sep 08, 2017 | |

ನಗರದ ವೇಗದ ಬೆಳವಣಿಗೆಯ ಹಿಂದೆ ತಣ್ತೀ, ಸಿದ್ಧಾಂತರಹಿತ ಬಾನಿಗೇರುವ ಚಿತ್ತಗಳ ಅತೀವ ಅಭಿಲಾಷೆ, ಐಷಾರಾಮಿ ಬದುಕು, ಸಿರಿತನದ ಝಲಕು ಕಲಸು ಮೇಲೋಗರವಾಗಿ ಕಾಂಕ್ರೀಟು ಕಾಡು ಫ‌ಲವತ್ತಾಗುತ್ತದೆ. ನಗರದ ಸಾಮಾಜಿಕ ಬದುಕು ಸಿರಿತನದ ಕೊಡು -ಕೊಳ್ಳುವಿಕೆಗೆ ಮಾತ್ರ ಸೀಮಿತವಾಗಿ ಮಾನವೀಯತೆಯ ಸಂಬಂಧಗಳು ದೂರ ವಾಗುತ್ತಲೇ ಇರುತ್ತವೆ. ವೇದಿಕೆಯಲ್ಲಿ ಅಭಿನಯಕ್ಕೆ ಅಣಿಯಾದ ಮುಖವಾಡಗಳಿಗಿಂತ ಸಮಾಜದಲ್ಲಿ ಅಗೋಚರವಾಗಿ ತಮ್ಮ ಬದುಕಿನ ಸಂಪೂರ್ಣ ಮುಖವಾಡಗಳನ್ನು ಧರಿಸಿಕೊಳ್ಳುವ ಪರಿಸ್ಥಿತಿ ಎಂತಹದು ಎಂಬ ಪರಿಕಲ್ಪನೆಯಲ್ಲಿ ಕಲಾವಿದ ಕುಪ್ಪಣ್ಣ ಕಂಡಗಲ್‌ ಅವರು ನಗರದ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ರಹಸ್ಯ ರೂಪ ಎಂಬ ಚಿತ್ರ ಕಲಾಪ್ರದರ್ಶನವನ್ನು ಮಾಡಿದ್ದಾರೆ. ಮುಖಗಳ ಭಾವಗಳ ನವುರು ಛಾಯೆಗಳು, ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶಗಳು ನಿರ್ಮಾಣವಾಗುವ ಸಹಜ ಸಂಕೀರ್ಣತೆಗಳ ನಾಗರಿಕ ಬದುಕಿನ ಸಂತಸದೊಳಗಿನ ಸಂಕಟಗಳು, ಉನ್ನತ ಸಿದ್ಧಾಂತಗಳಿಂದ ಆರೋಹಣವಾಗಬೇಕಾಗಿದ್ದ ನಿಲುವುಗಳ ಅವರೋಹಣ, ಸುಖೀ ಪಥದಲ್ಲಿ ಅನುಭವಿಸಬೇಕಾದ ಕಾಯಗಳು ರೋದಿಸುವಂತಹ ದುಗುಡ ಚಿಂತನೆಗಳು, ನಾರಿಯ ಕೋಮಲ ಹೂವೆಂಬ ಹೃದಯವನ್ನು ಹಿಂಡುವ ಬೆಂಕಿಯಂಥ ಕಾಠಿನ್ಯ, ಸಾಂಪ್ರದಾಯಿಕ ಆಚಾರ, ವಿಚಾರ ಗಳನ್ನು ಸಾಂದರ್ಭಿಕವಾಗಿ ಸಾದರ ಪಡಿಸುವ ಪ್ರಕಾರಗಳನ್ನು ಕುಪ್ಪಣ್ಣನವರು ವಸ್ತು ವಿಚಾರ ಕ್ಕನುಗುಣವಾಗಿ ಚಿತ್ರಿಸಿರುವರು. ಕಡು ಬಣ್ಣಗಳನ್ನು ಹೆಚ್ಚು ಬಳಸದೇ ತಿಳಿ ಬಣ್ಣಗಳಲ್ಲೇ ವಸ್ತುಗಳ ಕಲಾತ್ಮಕ ಒಳಹೂರಣಗಳನ್ನು ಕೃತಿಗಳಲ್ಲಿ ದೃಢಪಡಿಸಿದ್ದಾರೆ. ಸಾಮಾಜಿಕ ಚಿಂತನೆ ಗಳಲ್ಲೂ ಹೆಚ್ಚು ಗೊಂದಲಕ್ಕೊಳಪಡದ ಹಾಗೂ ಅಧ್ಯಯನಕ್ಕೆ ಆಧಾರವಾಗುವಂತಹ ವಿಚಾರಗಳನ್ನು ತರ್ಕಿಸುವಂತಹ ಸಾಮರ್ಥ್ಯ ದಲ್ಲಿ ಬಣ್ಣಗಳಿಗೊಂದು ಒಪ್ಪ ಓರಣ ನೀಡಬಲ್ಲರು. ಕಲಾಕೃತಿಗಳನ್ನು ವೀಕ್ಷಕರು ಮೆಚ್ಚುವಂತಿದ್ದರೆ ಮೊದಲಿಗೆ ಕೃತಿ ಕರ್ತನಿಗೆ ಅದು ಇಷ್ಟವಾಗಬೇಕು ಮತ್ತು ಕಲಾವಿದ ಬಿಂಬಿಸಿದ ಕಲಾಕೃತಿ ಯನ್ನು ವೀಕ್ಷಕರು ಗ್ರಹಿಸಿಕೊಳ್ಳಲು ಯಾವುದೇ ಗೊಂದಲ ಗಳಿರಬಾರದು ಮತ್ತು ಆ ಗೊಂದಲದಿಂದ ಕಲಾವಿದ ಮತ್ತು ಕಲಾಭಿಮಾನಿಯ ನಡುವೆ ದೂರತೀರವಾಗಬಾರದೆನ್ನುವ ಇವರ ಅಭಿಪ್ರಾಯ ಈಗಿನ ಕಲಾಕ್ಷೇತ್ರಕ್ಕೆ ಅನ್ವಯವಾಗುವಂಥದ್ದೇ. ಪರಿಕಲ್ಪನೆಗಳು ಒಂದಕ್ಕೊಂದು ಪೋಣಿಸುವ‌ಂತಿದ್ದು ಹಿಂದಿನ ವಸ್ತುಸ್ಥಿತಿ ಮುಂದಿನ ಪ್ರಗತಿಗೆ ಪೂರಕವಾಗುವ ಕಲಾಧೋರಣೆಗಳು ವಿಕಸನವಾದರೆ ಕೃತಿ ಖರೀದಿಸುವವರಿಗೆ ಏಕತಾನತೆಯಿಂದ ಹೊರಬರುವ ಹಾಗೂ ಕಲಾವಿದ ಮತ್ತು ಕಲಾಪೋಷಕರ ಒಡನಾಟ ಹತ್ತಿರವಾಗಬಹುದು ಎಂಬ ಧ್ಯೇಯದಲ್ಲಿ ಇವರು ಕಲಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ನಾಗರಿಕತೆಯ ತೊಟ್ಟಿಲಲ್ಲಿ ಆಧುನಿಕತೆಯ ಜೋಗುಳ ನಾದವನ್ನು ಹೊಮ್ಮಿಸಿದರೂ ಅಗೋಚರ ಆಕ್ರಂದ‌ನವು ಮರೆಯಾಗಿಯೇ ಉಳಿಯಬಲ್ಲದು, ಆ ರೋದನವು ಭವಿಷ್ಯದಲ್ಲಿ ದುರಂತವಾಗ ಲಿರುವುದಂತೂ ಕಟು ಸತ್ಯ.

Advertisement

ದಿನೇಶ್‌ ಹೊಳ್ಳ
 

Advertisement

Udayavani is now on Telegram. Click here to join our channel and stay updated with the latest news.

Next