Advertisement

ಬಣ್ಣಗಳಲ್ಲಿ ಒಡಮೂಡಿದ ಹೆಣ್ಣಿನ ಅಂತರಂಗ

06:36 AM Jan 24, 2019 | |

ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹೆಣ್ಣಿನ ಆಂತರ್ಯದ ನೂರಾರು ಭಾವಗಳು ಬಣ್ಣ ತುಂಬಿಕೊಂಡು ಕುಳಿತಿವೆ.ಕಲಾವಿದೆ ಲತಾಕೃತಿ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ಹೆಣ್ಣೊಬ್ಬಳ ಅಂತರಂಗ ಮಾತನಾಡುತ್ತಿದೆ. ಸಂತೋಷ, ದುಃಖ, ಕಾತರ, ಕಳವಳ, ನಿರೀಕ್ಷೆ, ಹುಸಿಕೋಪ ಹೀಗೆ ಆಕೆ ಆಂತರ್ಯದಲ್ಲಿ ಹುದುಗಿರುವ ಭಾವಗಳನ್ನು ಕಲಾವಿದೆ ಬಣ್ಣಗಳಲ್ಲಿ ಸೆರೆ ಹಿಡಿದಿದ್ದಾರೆ. ಜ.27ರವರೆಗೂ ಪ್ರದರ್ಶನ ನಡೆಯಲಿದೆ.

Advertisement

ನವಿರಾದ ಪ್ರೇಮ ಭಾವವೂ ಇರುತ್ತದೆ. ಜತೆಗೆ ಒಂಟಿಯಾಗಿ ಬದುಕನ್ನು ಎದುರಿಸುವ ಛಲವೂ ಅವಳಲ್ಲಿರುತ್ತದೆ ಎಂಬುದನ್ನು ಸಾರುವ ಹಲವು ಚಿತ್ರಗಳು ಇಲ್ಲಿವೆ. ಪ್ರದರ್ಶನದಲ್ಲಿ ಎದುರಾಗುವ ಮೊದಲ ಚಿತ್ರವೇ ನೋಡುಗರ ಚಿತ್ತ ಸೆರೆ ಹಿಡಿಯಲಿದೆ. ಆಗಸದ ಬಿಳಿ ಮೋಡಗಳ ಕೆಳಗೆ ಹಸಿರು ಘಟ್ಟಗಳ ನಡುವೆ ಅರಳಿನಿಂತ ನೂರಾರು ಸುಮಗಳ ಚಿತ್ರ ಒಮ್ಮೆ ಸ್ವಿಜರ್ಲೆಂಡ್‌ ನೆನಪಿಸಲಿದೆ. ಕೆಂಪು, ಅರಿಶಿಣ, ತಿಳಿನೀಲಿ, ನೆರಳೆ ಬಣ್ಣದಲ್ಲಿ ಮೂಡಿದ ಸಣ್ಣ ಸಣ್ಣ ಪುಷ್ಪಗಳು ಇಡೀ ಚಿತ್ರದ ಆರ್ಕಷಣೆಯಾಗಿವೆ.

ಶಾಂತವಾಗಿರುವ ಕೊಳದ ನೀರಿನಂತೆ ಆಕೆಯ ಮನಸ್ಸು ಕೂಡ ಪ್ರಶಾಂತ ಸ್ಥಿತಿಯಲ್ಲಿದೆ. ಪ್ರಪಂಚದ ನೆಮ್ಮದಿ ಇವಳಲ್ಲಿಯೇ ಇದೆ ಎನ್ನುವಂತೆ ಕಾಣುವುದು ಕೆಂಪು ಹಸಿರು ರಂಗಿನಲ್ಲಿ ಮೂಡಿದ ಅವಳ ಮುಖ. ಯಾವುದೇ ದುಃಖ ದುಮ್ಮಾನವಿಲ್ಲದೆ ಎಲ್ಲ ಭಾವವನ್ನು ಬಿಟ್ಟ ಸನ್ಯಾಸಿನಿಯಂತೆ ತೋರುತ್ತದೆ ಆ ಚಿತ್ರ. ಇನ್ನೊಂದು ಚಿತ್ರದಲ್ಲಿ ಎಲ್ಲವನ್ನೂ ಎದುರಿಸಿ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಂಡವಳ ಕಥೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಹೆಣ್ಣೊಬ್ಬಳು ಎಷ್ಟರ ಮಟ್ಟಿಗೆ ಪ್ರಬಲ ವ್ಯಕ್ತಿಯಾರಬಹುದು ಎಂದು ಸಾರುವ ಚಿತ್ರ ನೋಡುವ ನಮ್ಮಲ್ಲಿಯೂ ಗಟ್ಟಿತನ ಮೂಡಿಸುತ್ತದೆ.

ತಿಳಿನೀರ ಕೊಳದ ಮುಂದೆ ಅಪ್ಸರೆಯೇ ಕುಳಿತಂತೆ ಕಾಣುವ ಚಿತ್ರ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಬಿಳಿ ಬಣ್ಣದ ಉಡುಗೆ ತೊಟ್ಟು ಹಸಿರು ಬಣ್ಣದ ಸರ ಧರಿಸಿರುವ ಹೆಣ್ಣು, ಮರದಲ್ಲಿ ಮೈನಾ ಹಕ್ಕಿ ಕುಳಿತಿರುವಂತೆ ಮೂಡಿದ ಕಲಾಕೃತಿ ಒಮ್ಮೆಲೇ ನಮ್ಮಲ್ಲಿ ನೂರಾರು ಸಂತೋಷದ ಭಾವಗಳನ್ನು ಉಕ್ಕಿಸುತ್ತದೆ. ಈ ಚಿತ್ರದಲ್ಲಿ ಕಾಣುವ ವಿಶೇಷ ನೋಟಕ್ಕೆ ನೋಡುಗರು ಮಾರು ಹೋಗಲೇಬೇಕು.

ಶಾಂತ ಸ್ವರೂಪಿಣಿ, ಆನಂದಭೂಷಿಣಿ ಹಾಗೂ ಪ್ರಬಲ ಮಹಿಳೆಯನ್ನು ಕಂಡ ನಂತರ ಎದುರಿಗೆ ಕಾಣುವವಳು ಮದುಮಗಳು. ಮದುವೆ ಎಂಬ ಬದುಕಿನ ಬಹುಮುಖ್ಯ ನಿರ್ಧಾರದ ಹಂತದಲ್ಲಿ ಆಕೆಯಲ್ಲಾಗುವ ತಳಮಳವನ್ನು ಕಲಾವಿದೆ ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಮುತ್ತಿನ ಹರಳುಗಳಲ್ಲಿ ಮಾಡಿದ ಬೈತಲೆ ಬೊಟ್ಟು ಧರಿಸಿ, ಕೆಂಪನೆಯ ಮಧುಬಾನಿ ಉಡುಗೆ ತೊಟ್ಟು, ಕೈಯಲ್ಲಿ ಅವನಿಗಾಗಿಯೇ ಅರಳಿನಿಂತ ಕುಸುಮಗಳನ್ನು ಹಿಡಿದ ಅವಳ ಅಂತರ್ಯದಲ್ಲಿ ಏನಿದೆ ಎಂಬುದೇ ಎದುರಿನ ವ್ಯಕ್ತಿಯಲ್ಲಿ ಪ್ರಶ್ನೆ ಹುಟ್ಟಿಸುವ ರೀತಿಯಲ್ಲಿ ಮೂಡಿದ ವಧುವಿನ ಕಲಾಕೃತಿ ಅಪೂರ್ವವಾಗಿದೆ.

Advertisement

ಪ್ರೇಮಿ, ಅಕ್ಕ, ತಂಗಿ, ಪಾಶ್ಚಿಮಾತ್ಯ ದೇಶದ ಕುವರಿ, ಭಾರತೀಯ ನಾರಿ, ಬೆಳಂದಿಗಳ ಬಾಲೆ, ಕೋಮಲೆ-ಸುಕೋಮಲೆ, ಮೃದಲೆ, ಶಾಂತೆ ಹೀಗೆ ಹೆಣ್ಣಿನ ಎಲ್ಲ ಭಾವಗಳು ಕೆಂಪು ವರ್ಣದಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಈ ಕಲಾಕೃತಿಗಳ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುವುದು ಹೆಣ್ಣು ಮಕ್ಕಳ ಹಣೆಯಲ್ಲಿರುವ ಕೆಂಪು ಬಣ್ಣದ ಕುಂಕುಮದ ಬೊಟ್ಟು. ಹೆಣ್ಣೊಬ್ಬಳ್ಳ ಅಂತರಂಗವನ್ನು ಕುಂಚದಲ್ಲಿ ಕಟ್ಟಿಕೊಡುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಾರೆ. ಲತಾಕೃತಿಯ ಅವರ ನಾಲ್ಕೈದು ವರ್ಷಗಳ ತಪ್ಪಸ್ಸು ಚಿತ್ರಗಳಲ್ಲಿ ಸಾರ್ಥಕತೆ ಪಡೆದಿವೆ.

ಕಲಾ ಪ್ರಪಂಚದಲ್ಲಿ ಪ್ರಯೋಗಶೀಲತೆ ಮತ್ತು ಸೃಜನಶೀಲತೆ ನಿರಂತರವಾಗಿದ್ದರೆ ಬೆಳೆಯಲು ಸಾಧ್ಯ. ಅದು ಲತಾಕೃತಿ ಅವರ ಕಲಾಕೃತಿಗಳಲ್ಲಿ ಕಾಣುತ್ತಿದೆ. ಇಲ್ಲಿರುವ ಚಿತ್ರಗಳಲ್ಲಿ ನೈಜತೆ ಹಾಗೂ ಸಮಲಾಲೀನ ಎರಡು ಮಾಧ್ಯಮಗಳು ಸರಿಯಾಗಿ ಬೆರೆತಿವೆ. ಇದು ಪ್ರದರ್ಶನದ ವಿಶೇಷ.
-ಜೆ.ಎಂ.ಎಸ್‌.ಮಣಿ, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next