ಅದು ಕರಾವಳಿಯ ಸುಂದರ ಪರಿಸರ. ಅಲ್ಲಿ ನಾಡು-ನುಡಿ-ಸಂಸ್ಕೃತಿಯ ಕಡೆಗೆ ಒಲವಿಟ್ಟುಕೊಂಡು ಇಂಜಿನಿಯರಿಂಗ್ ಓದುತ್ತಿರುವ ಹುಡುಗನ ಹೆಸರು ರಕ್ಷಿತ್ ಶೆಟ್ಟಿ. ಓದಿನಲ್ಲಿ ಮುಂದಿರುವ ಈ ಹುಡುಗನನ್ನು ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ವಿದೇಶಕ್ಕೆ ಕಳುಹಿಸಬೇಕು ಅನ್ನೋದು ಹೆತ್ತವರ ಕನಸು. ಆದರೆ, ಅವನಿಗೋ ತನ್ನ ಸ್ವಂತ ಊರಿನಲ್ಲೇ ಏನಾದರೂ ಸಾಧನೆ ಮಾಡಬೇಕು ಅನ್ನೋದು ದೊಡ್ಡ ಆಸೆ.
ತನ್ನ ಜೊತೆ ಓದಿದವರೆಲ್ಲರೂ ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಒಳ್ಳೆಯ ಕಂಪೆನಿಗಳಲ್ಲಿ ಜಾಬ್ ಗಿಟ್ಟಿಸಿಕೊಂಡು, ಲೈಫ್ನಲ್ಲಿ ಸೆಟಲ್ ಆಗುತ್ತಿದ್ದರೆ, ಈ ಹುಡುಗ ಮಾತ್ರ ಇಂಜಿನಿಯರಿಂಗ್ ಮುಗಿಸಿದ್ದರೂ, ಮನೆಯವರು, ಊರಿನವರ ಕಣ್ಣಿಗೆ ಬಾರದ ವೇಸ್ಟ್ ಬಾಡಿ ಥರ ಕಾಣುತ್ತಿರುತ್ತಾನೆ. ಒಮ್ಮೆ ಇಂಥ ಹುಡುಗನ ಕಣ್ಣಿಗೆ ಬೀಳುವ ಕಲರ್ ಕಲರ್ “ಲುಂಗಿ’ ಕೊನೆಗೆ ಈ ಹುಡುಗ ಲೈಫ್ ಅನ್ನೆ ಕಲರ್‌ಫುಲ್ ಆಗಿ ಮಾಡುತ್ತದೆ.
ಇದು ಈ ವಾರ ತೆರೆಗೆ ಬಂದಿರುವ “ಲುಂಗಿ’ ಚಿತ್ರದ ಕಥಾಹಂದರ. ಅದು ಹೇಗೆ, “ಲುಂಗಿ’ ಗೂ ಹುಡುಗನ ಲೈಫಿಗೂ ಎತ್ತಿಂದೆತ್ತಣ ಸಂಬಂಧ ಅನ್ನೋ ಕುತೂಹಲವಿದ್ದರೆ, “ಲುಂಗಿ’ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.ತೆರೆಮುಂದೆ, ತೆರೆಹಿಂದೆ ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರದ ಕಥೆಯಲ್ಲಿ ತೀರಾ ಹೊಸತನ ನಿರೀಕ್ಷಿಸುವಂತಿಲ್ಲ. ಆದರೆ ಚಿತ್ರಕಥೆ ಮತ್ತು ನಿರೂಪಣೆ ಪ್ರೇಕ್ಷಕರಿಗೆ ಎಲ್ಲೂ ಬೋರ್ ಹೊಡೆಸದಂತೆ ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.
ಚಿತ್ರದ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ಸ್. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, “ಲುಂಗಿ’ ಇನ್ನಷ್ಟು ಕಲರ್‌ಫುಲ್ ಆಗಿ ಕಾಣುತ್ತಿತ್ತು. ಚಿತ್ರದ ತಾಂತ್ರಿಕ ಕೆಲಸಗಳಿಗೆ ಕೊಟ್ಟಷ್ಟೇ ಮಹತ್ವವನ್ನು, ಚಿತ್ರತಂಡ ಕೆಲ ಕುಸುರಿ ಕೆಲಸಗಳಿಗೆ ಕೊಟ್ಟಂತೆ ಕಾಣುತಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ಚಿತ್ರದ ನಾಯಕ ಪ್ರಣವ್ ಹೆಗ್ಡೆ, ನಾಯಕಿಯರಾದ ಅಹಲ್ಯಾ ಸುರೇಶ್, ರಾಧಿಕಾ ರಾವ್ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಉಳಿದಂತೆ ಇತರ ಕಲಾವಿದರು ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಚಿತ್ರದ ಇತರೆ ತಾಂತ್ರಿಕ ಕೆಲಸಗಳು ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆ ಚಿತ್ರದ ಅಲ್ಲಲ್ಲಿ ಕಾಣುವ ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, ಕೊಟ್ಟ ಕಾಸಿಗೆ ಮೋಸವಿಲ್ಲದೆ “ಲುಂಗಿ’ ಒಂದಷ್ಟು ಮನರಂಜನೆಯಂತೂ ನೀಡುತ್ತದೆ. ವಾರಾಂತ್ಯದಲ್ಲಿ ಬಿಡುವಿದ್ದರೆ, “ಲುಂಗಿ’ ಎಂಬ ಹೊಸ ಪ್ರತಿಭೆಗಳ ಚೊಚ್ಚಲ ಪ್ರಯತ್ನವನ್ನು ಒಮ್ಮೆ ನೋಡಿಬರಬಹುದು.
ಚಿತ್ರ: ಲುಂಗಿ
ನಿರ್ಮಾಣ: ಮುಖೇಶ್ ಹೆಗ್ಡೆ
ನಿರ್ದೇಶನ: ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ
ತಾರಾಗಣ: ಪ್ರಣವ್ ಹೆಗ್ಡೆ, ಅಹಲ್ಯಾ ಸುರೇಶ್, ರಾಧಿಕಾ ರಾವ್, ಮನೋಹರ್, ದೀಪಕ್ ರೈ, ರೂಪ, ಜಯಶೀಲ, ಪ್ರಕಾಶ್, ಸಂದೀಪ್ ಶೆಟ್ಟಿ, ಜಯರಾಂ ಆಚಾರ್ಯ ಮತ್ತಿತರರು.
* ಜಿ.ಎಸ್. ಕಾರ್ತಿಕ ಸುಧನ್