ಬಾಗಲಕೋಟೆ: ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬಂತಹ ಪರಿಸ್ಥಿತಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ವಿಷಯದಲ್ಲಾಗಿದೆ.
ಹೌದು, ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳ ಬಳಿಕ ಕಾಲೇಜು ಆರಂಭಿಸಲಾಗಿದೆ. ಅದರಲ್ಲೂ ಪದವಿ ಕಾಲೇಜುಗಳ ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಮೊದಲ ಅವಕಾಶ ನೀಡಿದ್ದು,ಹಲವು ಮಾರ್ಗಸೂಚಿ ಪಾಲನೆಯೊಂದಿಗೆ ಕಾಲೇಜು ಆರಂಭಿಸಲಾಗಿದೆ. ಆರೋಗ್ಯ ಇಲಾಖೆಯ ಬೇಜವಾಬ್ದಾರಿ ಹಾಗೂ ನಿರ್ಲಕ್ಷéದಿಂದ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಮನಸ್ಸಿದ್ದರೂ ಹೋಗದಂತಹ ಪರಿಸ್ಥಿತಿ ಉಂಟಾಗಿದೆ.
45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 18 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿ ಒಟ್ಟು 63 ಡಿಗ್ರಿ ಕಾಲೇಜುಗಳಿವೆ. ಅದರಲ್ಲಿ ಬಿಎಸ್ಸಿ, ಬಿಕಾಂ, ಬಿಎ, ಪಿಜಿ ಸಹಿತ ಅಂತಿಮ ವರ್ಷದ ವಿದ್ಯಾರ್ಥಿಗಳಸಂಖ್ಯೆ 13,500ರಿಂದ 14 ಸಾವಿರದಷ್ಟಿದೆ. ಡಿಗ್ರಿಕಾಲೇಜಿನ ಅಷ್ಟೂ ಸೆಮಿಸ್ಟರಿ ವಿದ್ಯಾರ್ಥಿಗಳು ಸೇರಿದರೆ ಬರೋಬ್ಬರಿ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯವಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ, ಒಂದು ಎಂಜಿನಿಯರಿಂಗ್ ಕಾಲೇಜ್, ಒಂದು ವೈದ್ಯಕೀಯ ಕಾಲೇಜು, ಇನ್ನೊಂದು ದಂತ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ನರ್ಸಿಂಗ್, ಐಟಿಐ, ಡಿಪ್ಲೋಮಾ ಕಾಲೇಜುಗಳೂ ಇವೆ. ಈ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು,ಪ್ರಾಧ್ಯಾಪಕರು, ಸಿಬ್ಬಂದಿ ಸೇರಿದಂತೆ ಸುಮಾರು 65 ಸಾವಿರ ಜನರಿದ್ದಾರೆ.
ಆರೋಗ್ಯ ಇಲಾಖೆಯ ನಿರ್ಲಕ್ಷ್ಯ: ನ. 17ರಿಂದ ಕಾಲೇಜು ಆರಂಭಿಸುವ ಮುನ್ನವೇ ನ.13ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಆಯುಕ್ತರು, ರಾಜ್ಯದ ಎಲ್ಲ ಡಿಎಚ್‌ಒಗಳಿಗೆ ಆದೇಶ ಹೊರಡಿಸಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕೋವಿಡ್-19 ತಪಾಸಣೆಗೆ ಮೊದಲ ಆದ್ಯತೆನೀಡುವಂತೆ ಹೇಳಿದ್ದಾರೆ. ಆದರೆ, ಈ ಆದೇಶ ಜಿಲ್ಲೆಯಲ್ಲಿ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ. ಜತೆಗೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ತಪಾಸಣೆ ಪ್ರತ್ಯೇಕವಾಗಿ ಮಾಡುತ್ತಿಲ್ಲ. ಜಿಲ್ಲೆಯ ಸಾಮಾನ್ಯ ಜನರ ತಪಾಸಣೆ ಜತೆಗೆ ಕೋವಿಡ್‌ತಪಾಸಣೆ ನಡೆಸುತ್ತಿದ್ದು, 4ರಿಂದ 5 ದಿನವಾದರೂತಪಾಸಣೆಯ ವರದಿ ಬರುತ್ತಿಲ್ಲ. ಹೀಗಾಗಿ ಗಂಟಲು ದ್ರವ ಮಾದರಿ ತಪಾಸಣೆಗೆ ಕೊಟ್ಟ ವಿದ್ಯಾರ್ಥಿಗಳು,ವರದಿ ಬಾರದೇ ಕಾಲೇಜಿಗೆ ಹೋಗುವಂತಿಲ್ಲ. ಹೀಗಾಗಿ ನ. 17ಕ್ಕೆ ಜಿಲ್ಲೆಯ ಕಾಲೇಜುಗಳು ಆರಂಭಗೊಂಡರೂ ಈ ವರೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ.
ಸಿಬ್ಬಂದಿ ಕೊರತೆಯ ನೆಪ: ಸರ್ಕಾರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಸರಿಸುಮಾರು 1 ಸಾವಿರದಿಂದ 2500 ವರೆಗೂ ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳೆಲ್ಲ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್-19 ತಪಾಸಣೆ ಮಾಡಿಕೊಳ್ಳುವ ಬದಲು, ಆಯಾ ಕಾಲೇಜಿನಲ್ಲಿ ಕೋವಿಡ್-19 ತಪಾಸಣೆ ಕ್ಯಾಂಪ್ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳ ತಪಾಸಣೆ ಬೇಗ ಪೂರ್ಣಗೊಳ್ಳುತ್ತದೆ. ಈ ಕುರಿತುಕೂಡಲೇ ವ್ಯವಸ್ಥೆ ಮಾಡಿ ಎಂದು ಆರೋಗ್ಯ ಇಲಾಖೆಗೆ ಹಲವು ಕಾಲೇಜುಗಳ ಪ್ರಾಚಾರ್ಯರು ಮನವಿ ಮಾಡಿದ್ದಾರೆ. ಇದಕ್ಕೆ ನಮ್ಮಲ್ಲಿ ಸಿಬ್ಬಂದಿಕೊರತೆ ಇದೆ. ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಎಂಬ ಉಡಾಫೆಯ ಉತ್ತರ ಇಲಾಖೆಯಿಂದ ಬಂದಿದೆ ಎನ್ನಲಾಗಿದೆ.
ನಮ್ಮ ಕಾಲೇಜಿನಲ್ಲಿ ಅಂತಿಮ ವರ್ಷದ 385 ವಿದ್ಯಾರ್ಥಿಗಳಿದ್ದು, ಅಷ್ಟೂ ಸೆಮಿಸ್ಟರಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1200 ಸಂಖ್ಯೆ ಇದೆ. ಕೋವಿಡ್-19 ತಪಾಸಣೆ ವರದಿ ವಿಳಂಬವಾಗುತ್ತಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ತಪಾಸಣೆ ಮಾಡಿಕೊಳ್ಳಲು ಆಗಿಲ್ಲ. ಹೀಗಾಗಿ ಕಾಲೇಜುಗಳಲ್ಲೇ ಅಗತ್ಯ ಮಾರ್ಗಸೂಚಿ ಅನ್ವಯ ತಪಾಸಣೆ ಶಿಬಿರ ನಡೆಸಲು ಡಿಎಚ್‌ಒ ಅವರಿಗೆ ಮನವಿ ಮಾಡಿದ್ದೇವೆ.
– ಡಾ|ಅರುಣಕುಮಾರ ಗಾಳಿ, ಪದವಿ ಕಾಲೇಜುಗಳ ಜಿಲ್ಲಾ ನೋಡಲ್ ಅಧಿಕಾರಿ
ಜಿಲ್ಲೆಯ ಆಯಾ ಕಾಲೇಜು ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಅವರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಇಲ್ಲವೇ ಕಾಲೇಜುಗಳಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದ್ದಲ್ಲಿ ಆಯಾ ಕಾಲೇಜಿಗೆ ಸಿಬ್ಬಂದಿ ಕಳುಹಿಸುವ ವ್ಯವಸ್ಥೆಯೂ ಮಾಡುತ್ತೇವೆ.
–ಡಾ|ಅನಂತ ದೇಸಾಯಿ, ಡಿಎಚ್‌ಒ
–ಶ್ರೀಶೈಲ ಕೆ. ಬಿರಾದಾರ