Advertisement

ರ್ಯಾಗಿಂಗ್‌ ಪಿಡುಗು: 7 ತಿಂಗಳುಗಳಲ್ಲಿ 40 ಮಂದಿ ವಿದ್ಯಾರ್ಥಿಗಳ ಬಂಧನ

09:32 PM Jul 27, 2021 | Team Udayavani |

ಮಹಾನಗರ: ಉತ್ತಮ ಶಿಕ್ಷಣ ವ್ಯವಸ್ಥೆಗೆ ಹೆಸರಾದ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರ್ಯಾಗಿಂಗ್‌ ಪಿಡುಗು ಹೆಚ್ಚುತ್ತಿದೆ.

Advertisement

2021ರಲ್ಲಿ ಕಳೆದ 7 ತಿಂಗಳುಗಳ ಅವಧಿಯಲ್ಲಿ ಮಂಗಳೂರಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್‌ ಪ್ರಕರಣಗಳು ವರದಿ ಯಾಗಿದ್ದು, 40 ಮಂದಿ ವಿದ್ಯಾರ್ಥಿಗಳ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೇಸು ದಾಖಲಾಗಿದ್ದು, ಬಂಧಿತರಾಗಿದ್ದಾರೆ.

ವಿವಿಧ ಪ್ರಕರಣಗಳು:

ಜನವರಿಯಲ್ಲಿ ಮಂಗಳೂರು ಹೊರ ವಲಯದ ಫಾರ್ಮಸಿ ಕಾಲೇಜಿನಲ್ಲಿ ರ್ಯಾಗಿಂಗ್‌ ನಡೆದಿದ್ದು, 9 ಮಂದಿ ವಿದ್ಯಾರ್ಥಿ ಗಳನ್ನು ದಸ್ತಗಿರಿ ಮಾಡಲಾಗಿತ್ತು.

ಫೆಬ್ರವರಿಯಲ್ಲಿ ನಾಟೆಕಲ್‌ನ ಕಾಲೇಜೊಂದರ ಮೊದಲ ವರ್ಷದ ಫಿಸಿ ಯೋಥೆರಪಿ ವಿದ್ಯಾರ್ಥಿಗಳಿಗೆ ಅದೇ ಕಾಲೇ ಜಿನ ವಿದ್ಯಾರ್ಥಿಗಳು ರ್ಯಾಗಿಂಗ್‌ ಮಾಡಿದ ಆರೋಪದ ಮೇಲೆ 11 ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

Advertisement

ಮಾರ್ಚ್‌ನಲ್ಲಿ ಮಂಗಳೂರು ಹೊರ ವಲಯ ಮುಕ್ಕದ ಒಂದು ಎಂಜಿನಿ ಯರಿಂಗ್‌, ನಗರದ ಖಾಸಗಿ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ರ್ಯಾಗಿಂಗ್‌ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ಬಂಧಿತರಾಗಿದ್ದರು.

ಎಪ್ರಿಲ್‌ನಲ್ಲಿ ಕೊಣಾಜೆಯ ಮಂಗಳೂರು ವಿ.ವಿ. ಹಾಸ್ಟೆಲ್‌ನಲ್ಲಿ ರ್ಯಾಗಿಂಗ್‌ ನಡೆದ ಬಗ್ಗೆ ಆರೋಪವೊಂದು ಕೇಳಿ ಬಂದಿದ್ದು, ಈ ವಿಷಯದಲ್ಲಿ ವಿ.ವಿ. ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿತ್ತು.

ಜುಲೈ 16ರಂದು ನಗರದ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಯನ್ನು ರ್ಯಾಗಿಂಗ್‌ ಮಾಡಿದ ಆರೋಪದಲ್ಲಿ ಪೊಲೀಸರು ಅದೇ ಕಾಲೇಜಿನ 6ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

ಕೇರಳದ ವಿದ್ಯಾರ್ಥಿಗಳೇ ಅಧಿಕ:

ರ್ಯಾಗಿಂಗ್‌ ನಡೆಸುವವರಲ್ಲಿ ಮತ್ತು ರ್ಯಾಗಿಂಗ್‌ಗೆ ಒಳಗಾಗುವವರಲ್ಲಿ ಕೇರಳ ಮೂಲದ  ವಿದ್ಯಾರ್ಥಿಗಳೇ ಅಧಿಕ. 7 ತಿಂಗಳು ಗಳಲ್ಲಿ ವರದಿಯಾದ ರ್ಯಾಗಿಂಗ್‌ ಪ್ರಕರಣ ಗಳಲ್ಲಿ ಬಂಧಿತರಾದ ಆರೋಪಿಗಳಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳು ಕೇರಳ ಮೂಲ ದವರು.  ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ರ್ಯಾಗಿಂಗ್‌ ಪ್ರಕರಣಗಳು ನಡೆದಾಗ ಮಂಗ ಳೂರು ಪೊಲೀಸ್‌ ಆಯುಕ್ತರು ಈ ಪಿಡುಗು ಮರುಕಳಿಸಿದರೆ ಕಠಿನ ಕ್ರಮ ಕೈಗೊಳ್ಳುವ ಖಡಕ್‌ ಸೂಚನೆಯನ್ನು ನೀಡಿದ್ದರು. ಆದರೆ ಮಾರ್ಚ್‌ನಲ್ಲಿ ಪುನಃ ರ್ಯಾಗಿಂಗ್‌ ಪ್ರಕರಣ ಗಳು ವರದಿಯಾಗಿತ್ತು. ಕೊರೊನಾ ಲಾಕ್‌ಡೌನ್‌ ಸಂದರ್ಭ ಹಾಸ್ಟೆಲ್‌, ಪಿ.ಜಿ.ಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದ ರ್ಯಾಗಿಂಗ್‌ ಪ್ರಕರಣಗಳು ಅನ್‌ಲಾಕ್‌ ಬಳಿಕ ಜುಲೈಯಲ್ಲಿ ಮರುಕಳಿಸಿವೆ.  ಕಾಲೇಜುಗಳಲ್ಲಿ ರ್ಯಾಗಿಂಗ್‌ ತಡೆ ಸಮಿತಿಗಳಿದ್ದು, ರ್ಯಾಗಿಂಗ್‌ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಈ ಸಮಿತಿಗಳ ಜವಾಬ್ದಾರಿ. ಅದರಂತೆ ರ್ಯಾಗಿಂಗ್‌ ಪ್ರಕರಣಗಳು ಮರು ಕಳಿಸಿದರೆ ಸಂಬಂಧಪಟ್ಟ ಕಾಲೇಜು ಆಡಳಿತಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಡೀನ್‌ಗೆ ಬೆದರಿಕೆ, ಉಪನ್ಯಾಸಕರಿಗೆ ಹಲ್ಲೆ : ರ್ಯಾಗಿಂಗ್‌ ಪಿಡುಗಿನ ಕರಾಳತೆ ಎಷ್ಟರ ಮಟ್ಟಿಗೆ ಇದೆ ಎಂದರೆ, ಅದನ್ನು ಪ್ರಶ್ನಿಸಿದ ಅಧ್ಯಾಪಕರ ಮೇಲೆ ಹಲ್ಲೆ ಕೂಡ ನಡೆದಿದೆ.  ಫೆಬ್ರವರಿ ಕೊನೆಯ ವಾರ ಒಂದು ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿ ಗಳಿಂದ ರ್ಯಾಗಿಂಗ್‌ ನಡೆದಿದ್ದು, ಈ ಬಗ್ಗೆ ಕಾಲೇಜಿನ ಡೀನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಸಿಟ್ಟುಗೊಂಡ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಡೀನ್‌ ಅವರಿಗೆ ಬೆದರಿಕೆ ಹಾಕಿದ್ದರು. ಮಾತ್ರವಲ್ಲದೆ ರ್ಯಾಗಿಂಗ್‌ನ್ನು ಮುಂದುವರಿಸಿದರೆ ಕಾಲೇಜಿನಿಂದ ಡಿಬಾರ್‌ ಮಾಡುವುದಾಗಿ ಬುದ್ಧಿವಾದ ಹೇಳಿದ ಉಪನ್ಯಾಸಕರಿಗೆ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.

ಕಾಲೇಜುಗಳಲ್ಲಿ ರ್ಯಾಗಿಂಗ್‌ ತಡೆಗಟ್ಟಲು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಂತಹ ಕಾಲೇಜುಗಳ ಆಡಳಿತ ಮಂಡಳಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು. -ಎನ್‌. ಶಶಿಕುಮಾರ್‌, ಆಯುಕ್ತರು, ಮಂಗಳೂರು ಪೊಲೀಸ್‌ ಕಮಿಷನರೆಟ್‌

 

Advertisement

Udayavani is now on Telegram. Click here to join our channel and stay updated with the latest news.

Next