Advertisement

ಬಣ್ಣದ ಉಡುಪಿನ ಕಾಲೇಜ್ ಮತ್ತು ಹಾಸ್ಟೆಲ್ ಜೀವನ

04:50 PM Apr 03, 2022 | Team Udayavani |

ಕಾಲೇಜು ಜೀವನ ಎಂದರೆ ಅದೊಂದು ಬದುಕಿನ ಸುಂದರ ಗಳಿಗೆ. ತುಂಬಿದಷ್ಟೂ ಬುತ್ತಿಗೆ ನೆನಪುಗಳು ಬಂದು ಸೇರಿಕೊಳ್ಳುತ್ತವೆ. ಇನ್ನೂ ಈ ಸಮಯದಲ್ಲಿ ಹಾಸ್ಟೆಲ್ ನಲ್ಲಿ ಇದ್ದರಂತೂ ಅದರ ಗಮ್ಮತ್ತೇ ಬೇರೆ. ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಒಟ್ಟಿಗಿರುವ ಫ್ರೆಂಡ್ಸ್ ಗಳ ನೆನಪುಗಳಂತೂ ಹೇಳಿದಷ್ಟೂ ಹೆಚ್ಚಾಗುವಂತವು. ಕಾಲೇಜಿನಲ್ಲಿದ್ದ ಫ್ರೆಂಡ್ಸ್ ಕೆಲವರು ಹಾಸ್ಟೆಲಿನಲ್ಲಿಯೂ ಜೊತೆಗಿರುತ್ತಾರೆಂದರೆ ಅದರ ಮಜವೇ ಬೇರೆ ಬಿಡಿ. ಕಾಲೇಜಿನಲ್ಲಿ ನಡೆದ ಕೆಲವು ಪ್ರಸಂಗಗಳನ್ನು ನೆನೆಯುತ್ತ, ಪ್ರಾಧ್ಯಾಪಕರ ಹಾವ ಭಾವಗಳನ್ನು ಅನುಕರಣೆ ಮಾಡುತ್ತ, ತಮಾಷೆಗಳ ಸನ್ನಿವೇಶಗಳನ್ನು ಮತ್ತೆ ಸೃಷ್ಟಿಸುತ್ತ ಎಲ್ಲರೂ ಒಟ್ಟಾಗಿ ಮೆಲುಕು ಹಾಕುತ್ತಿದ್ದರೆ ಏನೋ ಒಂದು ಸಂತೋಷ.

Advertisement

ಇನ್ನು ಮುಖ್ಯವಾಗಿ ಹೇಳುವುದಾದರೆ ಕಾಲೇಜಿನ ಕಾರಣದಿಂದ ನಮ್ಮ ಹುಡುಗಿಯರ ಹಾಸ್ಟೆಲುಗಳಲ್ಲಿ ವಾರದಲ್ಲಿ ಒಂದೆರಡು ದಿನವಂತೂ ಕಡ್ಡಾಯವಾಗಿ ಹಬ್ಬದ ವಾತಾವರಣವಿರುತ್ತದೆ. ಏನಪ್ಪ ಅಂತಾದ್ದು ಎಂದು ಯೋಚಿಸ್ತಿದ್ದೀರಾ? ಹೇಳ್ತೇನೆ ಕೇಳಿ….

ಕಾಲೇಜು ಅಂದಮೇಲೆ ಅಲ್ಲಿ ಸಮವಸ್ತ್ರ ಕಡ್ಡಾಯ. ಅಂತೆಯೇ ವಾರದಲ್ಲಿ ಒಂದೆರಡು ದಿನ ಬಣ್ಣದ ಉಡುಪುಗಳನ್ನು ಅಂದರೆ ಕಲರ್ ಡ್ರೆಸ್ ಗಳನ್ನು ತೊಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಾಲೇಜು ಮಾಡಿಕೊಟ್ಟಿರುತ್ತದೆ. ಈ ದಿನಗಳೇ ನಮ್ಮ ಹಾಸ್ಟೆಲುಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಗೆ ಕಾರಣ ಎನ್ನಬಹುದು. ಹೌದು! ಯಾಕೆಂದರೆ ಸಮವಸ್ತ್ರದ ದಿನ ಸಾಧಾರಣವಾಗಿ ತಯಾರಿ ನಡೆಸಿ ಕಾಲೇಜಿಗೆ ಹೋಗುವ ನಾವು ಈ ಕಲರ್ ಡ್ರೆಸ್ ಹಾಕುವ ದಿನದಂದು ಮಾತ್ರ ಸ್ವಲ್ಪ ಹೆಚ್ಚಿಗೆಯೇ ರೆಡಿಯಾಗುತ್ತೇವೆ. ಅದರ ತಯಾರಿಯಂತೂ ಬಹಳ ಜೋರಾಗಿಯೇ ಇರುತ್ತದೆ.

ನಾಳೆ ಕಲರ್ ಡ್ರೆಸ್ ಹಾಕೋದೆಂದರೆ ಹಿಂದಿನ ದಿನವೇ ಯಾವ ಬಟ್ಟೆ ಹಾಕೋದು ಎಂದು ಸೆಲಕ್ಷನ್ ಮಾಡಲೇ ಬಹಳ ಸಮಯ ಬೇಕಾಗುತ್ತದೆ. ನಮ್ಮದೇ ಬಟ್ಟೆಯನ್ನೋ ಅಥವಾ ಫ್ರೆಂಡ್ಸ್ ಯಾರಿಂದಾಲಾದರೋ ಪಡೆದು ತಂದ ಬಟ್ಟೆಯನ್ನು ಅಕ್ಕ ಪಕ್ಕದ ಗೆಳತಿಯರಿಗೆ ತೋರಿಸಿ, ಇದು ನನಗೆ ಚಂದ ಕಾಣುತ್ತದೆಯೋ ಎಂದು ಕತಾರಿಪಡಿಸಿಕೊಳ್ಳುವುದು. ಬಳಿಕ ಅದಕ್ಕೆ ಸರಿ ಹೊಂದುವ ಇಯರಿಂಗ್, ಲಿಪ್ ಸ್ಟಿಕ್, ನೈಲ್ ಫಾಲೀಶ್, ವಾಚು, ಬ್ಯಾಂಗಲ್ಸ್ ಹಾಗೂ ಇತರೆ ಶೃಂಗಾರಕರ ವಸ್ತುಗಳನ್ನು ಹುಡುಕುವ ಕೆಲಸ ಆರಂಭವಾಗುತ್ತದೆ. ಅವರವರ ಬಳಿಯೇ ಮ್ಯಾಚಿಂಗ್ ಇದ್ದರೆ ಸರಿ. ಇಲ್ಲವಾದರೆ ಅದನ್ನು ಇತರ ರೂಮುಗಳಿಗೆ ಹೋಗಿ ಶೋಧಿಸುವ ಕಾರ್ಯ ಶುರುವಾಗುತ್ತದೆ. ಇಷ್ಟೇ ಆದರೆ ಸಾಕೇ? ಪಾದರಕ್ಷೆಗಳೂ ಕೂಡ ನಮಗೆ ಮ್ಯಾಚಿಂಗೇ ಆಗಬೇಕು. ಹಾಗಾಗಿ ಯಾರ ಬಳಿ ಯಾವ ಚಪ್ಪಲಿಗಳಿವೆ, ಅವು ಹೇಗಿವೆ, ಯಾವ ಬಣ್ಣದ್ದಾಗಿವೆ, ನಮ್ಮ ಕಾಲಿಗೆ ಹಿಡಿಸುತ್ತದೆಯೋ ಎಂದು ನಮಗೆ ತಿಳಿದೇ ಇರುತ್ತದೆ. ಅವರ ಬಳಿ ಹೋಗಿ ಮಾರನೇ ದಿನಕ್ಕೆ ಈ ಚಪ್ಪಲಿಯನ್ನು ನನಗೇ ಕೊಡಬೇಕೆಂದು ಆಜ್ಞೆ ಮಾಡಿಯೋ, ಬೇಡಿಕೊಂಡೋ ಒಪ್ಪಿಸಿಯೋ ಅಥವಾ ಆಗಲೇ ತೆಗೆದುಕೊಂಡೇ ಬರುತ್ತೇವೆ. ಒಟ್ಟಿನಲ್ಲಿ ಕಲರ್ ಡ್ರೆಸ್ ಹಾಕುವ ಹಿಂದಿನ ದಿನವೇ ಹೊರಡುವ, ಎಲ್ಲವನ್ನೂ ಹೊಂದಿಸಿಕೊಳ್ಳುವ ನಮ್ಮ ತಯಾರಿಗಳು ಭರದಿಂದ ಸಾಗಿರುತ್ತದೆ.

ಹೊರಡುವ ಬೆಳಗ್ಗೆ ಅಂತೂ ಕೇಳುವುದೇ ಬೇಡ. ಕೆಲವರು ಬೇಗ ಹೊರಟು ಕನ್ನಡಿ ಮುಂದೆ ನಿಂತು ಸಿಂಗರಿಸಿಕೊಳ್ಳುವುದೇನು! ಡ್ರೆಸ್ ನನಗೆ ಸರಿ ಕಾಣುತ್ತದೆಯೆಂದು ಸುತ್ತಲೂ ತಿರುಗಿ ತಿರುಗಿ ನೋಡುವುದೇನು! ಬೇರೆಯವರನ್ನು ಕೇಳುವುದೇನು!. ಅಬ್ಬಬ್ಬ ಸಾಕಾಗಿ ಹೋಗುತ್ತದೆ. ಕೆಲವೊಮ್ಮೆ ಕೆಲವರು ಪದೇ ಪದೇ ಕೇಳುವುದು ಕಿರಿಕಿರಿ ಆಗುವಾಗ ಚಂದ ಕಾಣದಿದ್ದರೂ ಹೇ ಸಕ್ಕತ್ತಾಗಿದೆ, ಎಷ್ಟು ಜನ ಹುಡುಗರು ಬೀಳ್ತಾರೆ ನೋಡು ಎಂದು ಅವರನ್ನು ಸಂತೋಷದಿಂದ ಕಳುಹಿಸಿ ಕಾಟ ತಪ್ಪಿಸಿಕೊಳ್ಳುತ್ತೇವೆ. ನನಗಂತೂ ಇದರಲ್ಲಿ ಎರಡೂ ರೀತಿಯ ಅನುಭವವೂ ಆಗಿದೆ. ಇನ್ನೂ ಕೇಶವರ್ಧನದ ಕೆಲಸ ಕೂಡ ನಡೆಯುತ್ತಲೇ ಇರುತ್ತದೆ. ಹೀಗೆ ಬಾಚು, ಹಾಗೆ ಬಾಚು, ಇದು ಸರಿ ಆಗಲಿಲ್ಲ, ಹೊಸದಾಗಿ ಹಾಕು, ಕೊಡು ನಾನೇ ಬಾಚಿಕೊಳ್ಳುತ್ತೇನೆ ಎನ್ನುವ ಧ್ವನಿಗಳೂ ನಡು ನಡುವಲ್ಲಿ ಕೇಳಿಬರುತ್ತಲೇ ಇರುತ್ತದೆ. ಇವುಗಳ ನಡುವೆ ಇಡೀ ಹಾಸ್ಟೆಲ್ ಗಮ್ ಎಂದು ಪರಿಮಳ ಬೀರುವುದಕ್ಕೆ ತಲೆನೋವೇ ಬಂದು ಹೋಗುತ್ತದೆ. ಒಬ್ಬೊಬ್ಬರ ಬಳಿ ಒಂದೊಂದು ತರದ ಫರ್ಫೀಮ್, ಸೆಂಟುಗಳು. ಕೆಲವೊಬ್ಬರಂತೂ ಎರಡು ಮೂರು ತರಹದ ಸೆಂಟುಗಳನ್ನು ಸಿಂಪಡಿಸಿಕೊಳ್ಳುತ್ತಾರೆ.

Advertisement

ಕೆಲವರು ಎಲ್ಲಾ ರೆಡಿಯಾಗಿ ಇನ್ನೇನು ಕಾಲೇಜಿಗೆ ಹೋಗಬೇಕು ಅಷ್ಟರಲ್ಲಿ ಹಿಂದಿನಿಂದ ಯಾರಾದರು ‘ಇದನ್ಯಾಕೆ ಹಾಕಿದ್ದೀಯ ಚೂರು ಚಂದ ಇಲ್ಲ’ ಅಂದರೆ ಕಥೆ ಮುಗಿಯಿತು. ವಾಪಸ್ಸು ರೂಮಿಗೆ ಬಂದು ಮತ್ತೆ ಬೇರೆ ಡ್ರೆಸ್ ಹಾಕಿ, ಅದಕ್ಕೆ ತಕ್ಕಂತೆ ಮ್ಯಾಚಿಂಗ್ ಹೊಂದಿಸಿಕೊಂಡು ರೆಡಿಯಾಗೇ ಹೊರಡುವುದು. ಇನ್ನು ಕೆಲವರು ಹೊರಟಾಗ ಬೇರೆಯವರ ಡ್ರೆಸ್ ಚಂದ ಕಂಡರೆ ಅವರಿಗೆ ಮಾತಲ್ಲಿ ಮೋಡಿ ಮಾಡಿ ಇಮಿಡಿಯಟ್ ಡ್ರಸ್ಸನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರದ್ದು ಗೋಳೇ ಬೇರೆ. ಕಾಲೇಜಿನಲ್ಲಿ ಬೆಲ್ ಆಗುವ ಸಮಯವಾದರೂ ಹಾಸ್ಟೆಲಿನಲ್ಲಿ ಅವರು ಶೃಂಗಾರ ಮಾಡಿಕೊಳ್ಳುವ ಸಮಯವೇ ಮುಗಿಯುವುದಿಲ್ಲ. ಒಟ್ಟಿನಲ್ಲಿ ಇದೆಲ್ಲವೂ ಕೂಡ ನಮ್ಮ ಹುಡುಗಿಯರ ಹಾಸ್ಟೆಲಿನಲ್ಲಿ ಹಬ್ಬದಂತೆ ಪರಿಣಮಿಸುತ್ತದೆ.

ಅಂತೂ ಎಲ್ಲವನ್ನೂ ಬಹಳ ಕಷ್ಟದಿಂದ ಹೊಂದಿಸಿಕೊಂಡು, ತುಂಬಾ ಸುಂದರವಾಗಿ ಕಾಲೇಜಿಗೆ ರೆಡಿಯಾಗಿ ಬರುತ್ತೇವೆ. ಕೆಲವು ಮೆಚ್ಚುಗೆ ಮಾತುಗಳೂ ಬರುತ್ತವೆ. ನಾವೂ ಬಹಳ ಉಬ್ಬಿ ಹೋಗಿರುತ್ತೇವೆ. ಅಷ್ಟರಲ್ಲೆ ಇವುಗಳ ನಡುವೆ ಯಾರಾದರು ಫ್ರೆಂಡ್ಸ್ ಬಂದು ಈ ಡ್ರೆಸ್, ಚಪ್ಪಲಿ ಅವಳದಲ್ವಾ?… ಇವಳದಲ್ವಾ?.. ಮೊನ್ನೆ ಯಾರೋ ಹಾಕಿದ್ದು ನೋಡಿದ್ದೇನೆ ಅಂದರೆ ಅಲ್ಲಿಗೆ ನಮ್ಮ ಆ ದಿನದ ಕಲರ್ ಡ್ರೆಸ್ಸಿನ ಕಥೆ ಮುಗಿಯಿತು ಎಂದರ್ಥ….

ಹೀಗೆ ನಮ್ಮ ಬಣ್ಣದ ಉಡುಪಿನ ಕಾಲೇಜು ಹಾಗೂ ಹಾಸ್ಟೆಲ್ ಜೀವನ ಬಹಳ ಮಜವಾಗಿ ಸಾಗುತ್ತಿರುತ್ತದೆ. ನಮ್ಮ ಕಾಲೇಜಿನಲ್ಲಿಯೂ ವಾರದಲ್ಲಿ ಎರಡು ದಿನ ಕಲರ್ ಡ್ರೆಸ್ ಹಾಕಲು ಅವಕಾಶವಿದೆ. ಆಗ ಹಾಸ್ಟೆಲಿನಲ್ಲಿ ನಮ್ಮದೂ ಇದೇ ರೀತಿಯ ಪರಿಸ್ಥಿತಿಗಳಿರುತ್ತವೆ. ಕೆಲವೊಂದಕ್ಕೆ ನಾನೇನು ಹೊರತಾದವಳಲ್ಲ. ಒಟ್ಟಿನಲ್ಲಿ ಹಾಸ್ಟೆಲ್ ಹಾಗೂ ಕಾಲೇಜಿನಲ್ಲಿರುವ ನಾವುಗಳು ಮೇಲೆ ಹೇಳಿದ ವಿಷಯಗಳಲ್ಲದೆ ಪ್ರತಿಯೊಂದರಲ್ಲಿಯೂ ಖುಷಿಯನ್ನು ಕಾಣುತ್ತೇವೆ. ನಮ್ಮ ಕಾಲೇಜಾಗಲಿ, ಹಾಸ್ಟೆಲ್ ಆಗಲಿ ಇದುವರೆಗೂ ನಮ್ಮ ಎಂಜಾಯ್ಮೆಂಟುಗಳಿಗೆ, ತರಲೆ ಕೀಟಲೆಗಳಿಗೆ ಯಾವುದೇ ಅಡ್ಡಿಮಾಡಿಲ್ಲ. ಹಾಗಂತ ನಾವದನ್ನು ಎಂದೂ ಮಿಸ್ ಯೂಸ್ ಕೂಡ ಮಾಡಿಕೊಂಡಿಲ್ಲ.

– ನಿಶಾ ಕೆ ಎಸ್, ಅಂತಿಮ ಪತ್ರಿಕೋದ್ಯಮ ಎಸ್ ಡಿ ಎಂ ಕಾಲೇಜು. ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next