Advertisement

ಶಾಲಾ ಮಕ್ಕಳ ಜೊತೆಗೆ ಕಾಲೇಜಿನ ಮಕ್ಕಳು

11:33 PM Mar 28, 2019 | Team Udayavani |

ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಈ ಸಾಲು ಮತ್ತೆ ಮತ್ತೆ ಮರುಕಳಿಸಿ ನನ್ನನ್ನು ಪ್ರಶ್ನಿಸುತ್ತಿತ್ತು. ಅಂದು ದಿನಾಂಕ ಫೆಬ್ರವರಿ 9ರಂದು ನಮ್ಮ ಕಾಲೇಜಿನ ವತಿಯಿಂದ ಪುಟ್ಟ ಪಯಣ ಬಂಟ್ವಾಳ ತಾಲೂಕಿನ ನೆತ್ತರಕೆರೆಯೆಂಬ ಸ್ವರ್ಗಕ್ಕೆ ಹೊರಟಿತು. ಆದರೆ, ನಮಗಾರಿಗೂ ಆ ದಿನ ಹೇಗಿರಬಹುದೆಂಬ ಕಲ್ಪನೆಯೇ ಇಲ್ಲ. ವಿಂಶತಿಗೆ ಒಂದು ಕಮ್ಮಿ ಎಂಬಂತೆ 19 ಮಕ್ಕಳ ಜೊತೆಗೂಡಿ ಹೊರಟೆವು. ನಮ್ಮ ನೆಚ್ಚಿನ ಉಪನ್ಯಾಸಕಿಯೂ ನಮ್ಮ ಜೊತೆಗಿದ್ದರು.

Advertisement

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರ ಪ್ರತಿಯೊಬ್ಬರಲ್ಲೂ ಕನ್ನಡ ಮಾಧ್ಯಮ, ಸರಕಾರಿ ಶಾಲಾ ಬದುಕಿನ ಚಿತ್ರಣವನ್ನು ಒಮ್ಮೆ ಕಣ್ಣ ಮುಂದೆ ತೆರೆದಿಡುತ್ತದೆ. ನಾವು ಇಂತಹದ್ದೇ ಒಂದು ಸರಕಾರಿ ಶಾಲಾ ಮಕ್ಕಳ ಜೊತೆಗೂಡಲು ನಾವು ಹೊರಟದ್ದು ಬಲು ಹುಮ್ಮಸ್ಸಿನಿಂದ. ಹೊರಡುವ ಹಿಂದಿನ ರಾತ್ರಿಯೇ ಏನೆಲ್ಲ ಕಾರ್ಯಕ್ರಮ, ಚಟುವಟಿಕೆ ಆಯೋಜಿಸಬೇಕೆಂದು ನಿರ್ಧರಿಸಿ ನಮ್ಮ ನಮ್ಮಲ್ಲೇ ಗುಂಪುಗಳಾಗಿ ವಿಂಗಡಿಸಿಕೊಂಡೆವು. ಅದೇ ರೀತಿ ಮರುದಿನ ಶಾಲೆಗೆ ಬಂದಿಳಿದು ಪ್ರಥಮವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದೆವು. ನಾನು ಮತ್ತು ನನ್ನ ಸಹಪಾಠಿ ನರೇಶ್‌ ಅಂಗನವಾಡಿಯ ಮಕ್ಕಳನ್ನು ಸಂಭಾಳಿಸುವ ಜವಾಬ್ದಾರಿ ತೆಗೆದುಕೊಂಡರೆ, ಲಿಖೀತಾ, ರಜತ್‌, ಪ್ಯಾಮ… ಅವ್ನಿ ಒಂದರಿಂದ ಮೂರನೇ ಮಕ್ಕಳ ಜೊತೆಯಾದರು. ಇವರೊಂದಿಗೆ ಸುದೀಪ್ತಿ, ಸುಜಿತ್‌, ವೀರೇಂದ್ರ, ವೆನ್ಸ್‌ಟಾಟ್‌, ವೃಂದಾ ಸಹಕರಿಸಿದರು. ಸಿಂಧೂ, ಪ್ರೀತಿ, ಸೋನಾಲಿ, ನಿಧಿ, ಮೋನಿಷಾ, ಕ್ಷಿತಿಜ್‌, ಮೇಗೇಶ್‌, ಶುಭಾ ಇನ್ನುಳಿದ ತರಗತಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಮಕ್ಕಳೊಂದಿಗೆ ಒಡನಾಡಿದ್ದ ನಮಗೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಹಾಡು-ಕುಣಿತ ಒಂದೆಡೆಯಾದರೆ, ಮಕ್ಕಳ ಬೇರೆ ಬೇರೆ ಚಟುವಟಿಕೆ ಇನ್ನೊಂದೆಡೆ. ತೊದಲು ಮಾತಿನ ಚಾಣಾಕ್ಷತನದ ಈ ಕಂದಮ್ಮಗಳಿಗೆ ಯಾರೇ ಸಾಟಿಯಾಗಲಾರರು. ಅಸೆಂಬ್ಲಿ ಶುರುವಾದ ತತ್‌ಕ್ಷಣ ನಮ್ಮೆಲ್ಲರ ಬಾಯಿ ಮೇಲೆ ಬೆರಳಿಡುವಂತೆ ತಮ್ಮ ತಮ್ಮ ಚಾತುರ್ಯವನ್ನು ತೋರ್ಪಡಿಸಿದರು. ಪ್ರತಿಯೊಬ್ಬರಲ್ಲೂ ಇದ್ದ ಸ್ವತ್ಛತೆ ಕಾಪಾಡುವಿಕೆಯ ಕಾಳಜಿ ನಮ್ಮನ್ನು ಮೂಕವಿಸ್ಮಿತನಾಗಿಸಿತು.

ನಮ್ಮ ತಂಡದ ಕ್ಷಿತಿಜ್‌ ಹೇಳುತ್ತಾನೆ, “ಮೊದಲ ಬಾರಿ ನಾನು ಶಿಷ್ಯನಿಂದ ಶಿಕ್ಷಕನಾದೆ. ಗುರುಗಳ ಮಹತ್ವವನ್ನೂ ಇನ್ನಷ್ಟು ಅರಿತೆ’ ಎಂದು.

ಸಿಂಧೂ “ಮಕ್ಕಳ ಹಿಗ್ಗುವಿಕೆ, ಲವಲವಿಕೆ ನನ್ನ ಶಾಲಾ ದಿನಗಳನ್ನು ನೆನಪಿಸಿತು’ ಎನ್ನುತ್ತಾಳೆ. ರಜತ್‌ ಅನಿಸಿಕೆ, “ಇದು ಎಂದೆಂದಿಗೂ ಮರೆಯಲಾರದ ಸಿಹಿ ಗಳಿಗೆ’ ಎಂಬುದಾದರೆ, ಪ್ಯಾಮ್‌ನದು, “ನಮ್ಮವರ ಜೊತೆಯ ಸುಂದರ ಸಮಯ’ ಎಂದು ಖುಷಿ ಪಡುತ್ತಾನೆ.

Advertisement

ಈ ಎಲ್ಲ ಅನುಭವದ ಜೊತೆಗೆ ಮೇಘೇಶ್‌ ಮತ್ತು ವೀರೇಂದ್ರ ಹೇಳುವ ಮಾತುಗಳನ್ನು ಶ್ಲಾ ಸಲೇಬೇಕು. “ಎಲ್ಲಾ ಇದ್ದು, ಇನ್ನೂ ನಮಗೆ ಬೇಕೆಂದು ಪರಿತಪಿಸುತ್ತೇವೆ ನಾವು. ಕೊಟ್ಟ ಪ್ರೀತಿಗೆ ತುಂಬ ಪ್ರೀತಿಯನ್ನು ಮರಳಿಸಿದ ಈ ಮಕ್ಕಳೇ ನಮಗೆ ದಾರಿದೀಪ. ಬದುಕಿನ ನಾನಾ ಮಜಲುಗಳ ಅನುಭವಿಸಿ ನಾವಿಲ್ಲಿದ್ದೇವೆ. ಆದರೆ ಇಂದು ಈ ಮಕ್ಕಳು ಕೊಟ್ಟಿರುವ ಪಾಠ ದುಡ್ಡು ಕೊಟ್ಟರೂ ಎಲ್ಲೂ ಸಿಗುವಂತಹುದಲ್ಲ. ಪುಟ್ಟ ಚಾಕಲೇಟ್‌ನಲ್ಲಿ ಜಗತ್ತಿನ ಅಷ್ಟೂ ಸಂತೋಷ ಕಾಣುವ ಇವರುಗಳ ಬದುಕು ಎಂಥ ಶ್ರೇಷ್ಠವಾದುದು!’

ನಮಗೆ ಸರ್ಕಾರಿ ಶಾಲೆಯ ಮೇಲಿದ್ದ ಭಾವನೆ, ಗೌರವ ಇನ್ನೂ ಹೆಚ್ಚಾಯಿತು. ಹಾಗೆಯೇ ಒಂದು ಮಾತೂ ಮನದಲ್ಲಿ ಮೂಡಿತು. ಮೋಜು-ಮಸ್ತಿಗೆ ಅವಕಾಶ ನೀಡುವ ನಾವುಗಳು ಈ ಶಾಲೆಗಳ ಬೆಳವಣಿಗೆಗೆ ಯಾಕೆ ಅವಕಾಶ ನೀಡಬಾರದು? ನಮ್ಮಿಂದಾಗುವ ಸಣ್ಣ ಸಹಾಯವೂ ಆ ವಿದ್ಯಾರ್ಥಿಗಳ ಬಾಳನ್ನು ಅರಳಿಸಬಹುದು ಅಲ್ಲವೆ!

ಯಶಸ್ವಿನಿ ಶಂಕರ್‌
ಅಂತಿಮ ವರ್ಷದ ಬಿ. ಇ.,
ಕೆನರಾ ಇಂಜಿನಿಯರಿಂಗ್‌ ಕಾಲೇಜು, ಬೆಂಜನಪದವು

Advertisement

Udayavani is now on Telegram. Click here to join our channel and stay updated with the latest news.

Next