Advertisement

ಅಪರಾಧ ಪತ್ತೆ-ತಡೆಗೆ ವಲಸಿಗರ ಮಾಹಿತಿ ಸಂಗ್ರಹ

12:18 PM Oct 14, 2017 | |

ಬಜಪೆ : ಜಿಲ್ಲೆಯಲ್ಲಿ ಅಪರಾಧ ಪತ್ತೆ ಹಚ್ಚಿ, ತಡೆಗಟ್ಟಲು ಹಾಗೂ ಸುರಕ್ಷತೆ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯತ್‌ ಹಾಗೂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇತರ ರಾಜ್ಯಗಳಿಂದ ಬಂದವರು ವಾಸ್ತವ್ಯ ಇರುವ ಬಗ್ಗೆ ದಾಖಲೀಕರಣ ಅಗತ್ಯವಾಗಿ ಮಾಡಬೇಕಿದೆ.

Advertisement

ಈ ಬಗ್ಗೆ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿರುವ ಪೊಲೀಸ್‌ ಇಲಾಖೆ, ಕಂಪನಿಗಳಲ್ಲಿ ಕೆಲಸ ಮಾಡುವ ಅನ್ಯ ರಾಜ್ಯದ ಜನರ ಮೂಲ ದಾಖಲೆ, ಭಾವಚಿತ್ರ ಸಹಿತ ಮಾಹಿತಿ ಸಂಗ್ರಹಿಸಿದೆ. ಆದರೆ, ಬೇರೆ ಕಡೆಗಳಲ್ಲಿ ದುಡಿಯುವ ವಲಸಿಗರ ದಾಖಲೀಕರಣ ಆಗಿಲ್ಲ. ಇದನ್ನು ಗ್ರಾ.ಪಂ.ಗಳು
ನಿರ್ವಹಿಸಬೇಕಾಗಿದೆ.

ಬಜಪೆ ಠಾಣೆಯಲ್ಲಿ
ಬಜಪೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ  ಎಸ್‌ಇಝಡ್‌ ಕಂಪೆನಿಗಳ ಮತ್ತು ಗಂಜಿಮಠದಲ್ಲಿರುವ ಐಟಿ ಪಾರ್ಕ್‌ನ ಕಂಪೆನಿಗಳಲ್ಲಿ ದುಡಿಯುವ ಅನ್ಯ ರಾಜ್ಯಗಳ ಸುಮಾರು 7000 ಜನರ ದಾಖಲೀಕರಣ ಮಾಡಿದ್ದಾರೆ.

ಅವರ ಮೂಲ ದಾಖಲೆ, ಭಾವಚಿತ್ರ ಹಾಗೂ ಯಾವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಬಗ್ಗೆ ಬಜಪೆ ಠಾಣೆಯಲ್ಲಿ ಮಾಹಿತಿ ಸಂಗ್ರಹವಿದೆ.ಪೆರ್ಮುದೆ, ಬಜಪೆ ಮತ್ತು ಗಂಜಿಮಠ ಗ್ರಾಮ ಪಂಚಾಯ ತ್‌ಗಳ ವ್ಯಾಪ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅನ್ಯ ರಾಜ್ಯದ ವಲಸಿಗರಿದ್ದಾರೆ.

ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿದ್ದು, ಇತರ ರಾಜ್ಯಗಳ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಬಂದು ದುಡಿಯುತ್ತಿದ್ದಾರೆ. ಹೆಚ್ಚಿನ ಕಾರ್ಖಾನೆ, ಕಟ್ಟಡ ಹಾಗೂ ಇತರ ಕಾಮಗಾರಿಗಳಲ್ಲಿ ವಲಸೆ ಕಾರ್ಮಿಕರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ.

Advertisement

ಅವರೊಂದಿಗೆ ಸೇರಿಕೊಂಡಿರುವ ಕೆಲವು ಅಪರಿಚಿತರ ಬಗ್ಗೆ ಯಾವ ದಾಖಲೆಗಳೂ ಪೊಲೀಸ್‌ ಅಥವಾ ಗ್ರಾ.ಪಂ. ಬಳಿ ಇಲ್ಲ. ಅವರು ಎಲ್ಲಿಯವರು ಎಂಬುದೂ ಹೆಚ್ಚಿನವರಿಗೆ ತಿಳಿದಿಲ್ಲ. ಕಳ್ಳತನ, ದರೋಡೆಯಂಥ ಕೃತ್ಯಗಳಲ್ಲೂ ಅವರ ಕೈವಾಡ, ಪಾತ್ರ ಬಯಲಾಗುತ್ತಿದೆ. ಅಪರಾಧ ಕೃತ್ಯಗಳನ್ನೆಸಗಿ ಪರಾರಿಯಾಗುವ ಅವರನ್ನು ಬಂಧಿಸುವುದು ಪೊಲೀಸ್‌ ಇಲಾಖೆಗೂ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಎಲ್ಲ ವಲಸಿಗರ ದಾಖಲೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಗುತ್ತಿಗೆದಾರರೂ ತಮ್ಮಲ್ಲಿರುವ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವರು ಇನ್ನೂ ಕೊಟ್ಟಿಲ್ಲ.  ಹೀಗಾಗಿ, ಈಗ ಲಭ್ಯವಿರುವ ಮಾಹಿತಿ ಪರ್ಯಾಪ್ತವಲ್ಲ. ಗ್ರಾಮ ಪಂಚಾಯತ್‌ ಗಳೂ ತಮ್ಮ ವ್ಯಾಪ್ತಿಯಲ್ಲಿ ವಲಸಿಗರಿದ್ದರೆ ಅವರ ಭಾವಚಿತ್ರ, ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.

ಮನೆ ಮಾಲಕರೂ ಮಾಹಿತಿ ಸಂಗ್ರಹಿಸಲಿ
ಅಪರಿಚಿತರಿಗೆ ಮನೆಯನ್ನು ಬಾಡಿಗೆಗೆ ಕೊಡುವ ಮುನ್ನ ಮಾಲಕರು  ಅವರ ಪೂರ್ಣ ವಿವರ ತಿಳಿದುಕೊಳ್ಳಬೇಕು ಅಲ್ಲದೆ, ತಮ್ಮಲ್ಲಿ ಬಾಡಿಗೆಗಿರುವ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸ್‌ ಠಾಣೆ ಹಾಗೂ ಗ್ರಾಪಂ ಕಚೇರಿಗೆ ಸಲ್ಲಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ದಾಖಲೆ ಒದಗಿಸದೆ ಅಕ್ರಮವಾಗಿ ನೆಲೆಸಿದವರನ್ನು ಪತ್ತೆ ಮಾಡುವುದಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಕರಾವಳಿಯ ಸುರಕ್ಷತೆ, ಅಪರಾಧ ಪತ್ತೆ ಹಾಗೂ ತಡೆ ದೃಷ್ಟಿಯಿಂದ ಇತರೆಡೆಯಿಂದ ಬಂದ ವ್ಯಕ್ತಿಗಳಿಗೆ ಕೆಲಸ ಅಥವಾ ಬಾಡಿಗೆಗೆ ಮನೆ ಕೊಡುವ ಮೊದಲು ಅವರ ಮೂಲ ವಿಳಾಸ ದಾಖಲೆ, ಭಾವಚಿತ್ರವಿರುವ ಗುರುತಿನ ಚೀಟಿ ಇತ್ಯಾದಿಗಳನ್ನು ಸಂಗ್ರಹಿಸಬೇಕು.
 – ಡಿ.ಟಿ. ನಾಗರಾಜ್‌
ಬಜಪೆ, ಠಾಣೆ ಇನ್‌ಸ್ಪೆಕ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next