Advertisement

ಜನರಿಂದಲೇ ಕೈ ದೇಣಿಗೆ ಸಂಗ್ರಹ

06:00 AM Sep 24, 2018 | Team Udayavani |

ಬೆಂಗಳೂರು:ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಎಐಸಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.

Advertisement

ರಾಷ್ಟ್ರಾದ್ಯಂತ ಪಕ್ಷ ಸಂಘಟನೆಗಾಗಿ ಲೋಕ ಸಂಪರ್ಕದ ಮೂಲಕ ಒಂದು ಕೋಟಿ ಸಹಯೋಗಿ ನೋಂದಣಿ ಗುರಿಯೊಂದಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಜನರಿಂದಲೇ ಹಣ ಸಂಗ್ರಹಕ್ಕೆ ಸಜ್ಜಾಗಿದೆ. ಇದಕ್ಕಾಗಿ ಪ್ರತಿ ಮನೆಯಿಂದ ನಿಧಿ ಸಂಗ್ರಹಿಸುವಂತೆ ಕೆಪಿಸಿಸಿಗೆ ಸೂಚನೆ ನೀಡಲಾಗಿದೆ  ಸಾರ್ವಜನಿಕರಿಂದ ಸಂಗ್ರಹವಾದ ದೇಣಿಗೆ/ ನಿಧಿ ಮೊತ್ತದಲ್ಲಿ ಎಐಸಿಸಿಗೆ ಶೇ. 50, ಕೆಪಿಸಿಸಿಗೆ ಶೇ.25, ಡಿಸಿಸಿಗೆ ಶೇ. 15 ಹಾಗೂ ಬಿಸಿಸಿಗೆ ಶೇ.10ರಷ್ಟು ಹಂಚಿಕೆಯಾಗಲಿದೆ.

ಲೋಕ ಸಂಪರ್ಕ ಹಾಗೂ ನಿಧಿ ಸಂಗ್ರಹ ಅಭಿಯಾನವನ್ನು ವಾರ್ಷಿಕ ಕಾರ್ಯಕ್ರಮವಾಗಿ ಪ್ರತಿವರ್ಷ ಜನವರಿ- ಫೆಬ್ರವರಿಯಲ್ಲಿ ಕೈಗೊಳ್ಳಲು ನಿರ್ಧರಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಅ.2ರ ಗಾಂಧಿ ಜಯಂತಿ ದಿನದಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನವಾದ ನ.19ರವರೆಗೆ ಅಭಿಯಾನ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಪಂಜಾಬ್‌ ಹಾಗೂ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯಲ್ಲಿ ಪೂರ್ಣ ಸರ್ಕಾರವಿರುವುದನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲುದಾರ ಪಕ್ಷವಾಗಿದೆ. ಹಾಗಾಗಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆ, ಕಾರ್ಯಕರ್ತರ ಸಂಖ್ಯೆ ವೃದ್ಧಿ, ಪಕ್ಷದ ಪ್ರಚಾರ ಕಾರ್ಯ ಇತರೆ ಚಟುವಟಿಕೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸಾರ್ವಜನಿಕರಿಂದಲೇ ನಿಧಿ ಸಂಗ್ರಹಕ್ಕೆ ಸಜ್ಜಾಗಿದೆ.ನಗರದಲ್ಲಿ ಭಾನುವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು, ರಾಜ್ಯ ಮುಂಚೂಣಿ ಘಟಕ, ಸೆಲ್‌/ ವಿಭಾಗದ ಅಧ್ಯಕ್ಷರ ಸಭೆಯಲ್ಲಿ ಈ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೂಚನೆ ನೀಡಿದರು.

ಅಭಿಯಾನದ ಐದು ಮಾರ್ಗಸೂಚಿ
ಪ್ರತಿ ಮನೆ ಮನೆಗೆ ಭೇಟಿ ನೀಡಿ ಎಐಸಿಸಿ ಹಾಗೂ ಕೆಪಿಸಿಸಿ ವತಿಯಿಂದ ನೀಡುವ ಕರಪತ್ರ, ಕೈಪಿಡಿ ನೀಡಿ ಪಕ್ಷದ ಸರ್ಕಾರದ ಸಾಧನೆ ಬಗ್ಗೆ  ಮನವರಿಕೆ ಮಾಡಿಕೊಡಬೇಕು. 15ರಿಂದ 21ರ ವಯೋಮಾನದ ಯುವ ಮತದಾರರನ್ನು ಆದ್ಯತೆ ಮೇರೆಗೆ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು. ಒಂದು ಕೋಟಿ ಬೂತ್‌ ಸಹಯೋಗಿಗಳನ್ನು ನೋಂದಾಯಿಸಬೇಕು. ಪ್ರತಿ ಮನೆಯಿಂದ ನಿಧಿ ಸಂಗ್ರಹಿಸಬೇಕು ಎಂದು ಮಾರ್ಗಸೂಚಿ ನೀಡಲಾಗಿದೆ.

Advertisement

ಎಐಸಿಸಿ ಅಧ್ಯಕ್ಷರ ಆದೇಶದಂತೆ ದೇಶಾದ್ಯಂತ “ಲೋಕಸಂಪರ್ಕ ಅಭಿಯಾನ’ ನಡೆಯಲಿದೆ. ಅದರಂತೆ ಅ.2ರಿಂದ ನ.19ರವರೆಗೆ ಅಭಿಯಾನ ನಡೆಸಬೇಕು. ಯುವ ಮತದಾರರನ್ನು ಪಕ್ಷದ ಸಕ್ರಿಯ ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕು. ಬೂತ್‌ ಮಟ್ಟದಲ್ಲಿ ನೋಂದಣಿಯಾದ “ಬೂತ್‌ ಸಹಯೋಗಿ’ ಜತೆಗೆ ದೇಣಿಗೆದಾರರ ವಿವರವನ್ನು “ಶಕ್ತಿ’ಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಒಂದು ಕೋಟಿ ಸಹಯೋಗಿ ನೋಂದಣಿ ಗುರಿ
ಕನಿಷ್ಠ ಒಂದು ಕೋಟಿ ಸಹಯೋಗಿ ನೋಂದಣಿ ಗುರಿ ನೀಡಲಾಗಿದ್ದು, ಪ್ರತಿ ಬೂತ್‌ನಲ್ಲಿ ಕನಿಷ್ಠ 10ರಿಂದ 15 ಸದಸ್ಯರ “ಬೂತ್‌ ಸಹಯೋಗಿ’ಗಳನ್ನು ನೇಮಿಸಬೇಕು. ಈ ಸಹಯೋಗಿಗಳು ತಮ್ಮ ಬೂತ್‌ ವ್ಯಾಪ್ತಿಯಲ್ಲಿ 20 -25 ಮನೆಯವರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಬೇಕು. ಪ್ರತಿ 100 ಬೂತ್‌ ಸಹಯೋಗಿಗಳಿಗೆ ಒಬ್ಬ ಏರಿಯಾ ಬೂತ್‌ ಕೋ ಆರ್ಡಿನೇಟರ್‌ ನೇಮಿಸಬೇಕು. ನಿಧಿ ಸಂಗ್ರಹ ಕಾರ್ಯವನ್ನು ಬೂತ್‌ ಹಂತದಲ್ಲಿ ಅನುಷ್ಠಾನಗೊಳಿಸಬೇಕು. ಅಭಿಯಾನದ ಅನುಷ್ಠಾನ ಬೆಳವಣಿಗೆ ವಿವರವನ್ನು ನೇರವಾಗಿ ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ಪಡೆಯಲಿದ್ದಾರೆ ಎಂದು ತಿಳಿಸಿದೆ.

ದೇಣಿಗೆ ಸಂಗ್ರಹಕ್ಕೆ ಎಐಸಿಸಿ ರಸೀದಿಯನ್ನೇ ಬಳಸಿ ಅದನ್ನು ಜೋಪಾನವಾಗಿ ಕಾಪಾಡಬೇಕು. ಎಐಸಿಸಿ ಮಾರ್ಗಸೂಚಿಯನ್ವಯವಷ್ಟೇ ನಿಧಿ ಸಂಗ್ರಹಿಸಬೇಕು. ಎಐಸಿಸಿ ಅನುಮೋದನೆ ಇಲ್ಲದೆ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಿದೆ. ಲೋಕ ಸಂಪರ್ಕ ಅಭಿಯಾನ ಹಾಗೂ ಶಕ್ತಿ ಪ್ರಾಜೆಕ್ಟ್ ಕಾರ್ಯಕ್ರಮಗಳ ಅನುಷ್ಠಾನದ ಆಧಾರದ ಮೇಲೆ ಕಾರ್ಯವೈಖರಿಯನ್ನು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್‌ ಅಂತ್ಯದೊಳಗೆ ಖಾಲಿಯಿರುವ ಎಲ್ಲ ಬ್ಲಾಕ್‌, ಡಿಸಿಸಿ ಅಧ್ಯಕ್ಷರ ಸ್ಥಾನ ಹಾಗೂ ಕೆಪಿಸಿಸಿ ಸದಸ್ಯರ ನೇಮಕವಾಗಲಿದೆ. ಕೆಪಿಸಿಸಿಯಿಂದ ಬ್ಲಾಕ್‌ ಕಾಂಗ್ರೆಸ್‌ ಸಮಿತಿವರೆಗೆ ಎಲ್ಲ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಗಳ ಪಟ್ಟಿಯನ್ನು ಎಐಸಿಸಿಗೆ ಸೆ.25ರೊಳಗೆ ಸಲ್ಲಿಸಬೇಕು. ಕಳೆದ ಚುನಾವಣೆ ವೇಳೆ ಸಲ್ಲಿಸಿದ್ದ ಡಿಸಿಸಿ, ಬ್ಲಾಕ್‌ ಸಮಿತಿಗಳ ಪಟ್ಟಿಯನ್ನು ಮತ್ತೂಮ್ಮೆ ಪರಾಮರ್ಶಿಸಿ ಬದಲಾವಣೆಯಿದ್ದರೆ ಸರಿಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next