Advertisement

ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಸಂಗ್ರಹಿಸಿ

10:29 AM Aug 03, 2020 | Suhan S |

ಶಿಡ್ಲಘಟ್ಟ: ಸ್ಥಳೀಯ ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತರು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ, ಚಿಂತಾಮಣಿ ತಾಲೂಕಿನ ನಗರದ ಎನ್‌. ಆರ್‌. ಬಡಾವಣೆ, ಕೋನಪ್ಪಲ್ಲಿ ಪಂಚಾಯಿತಿ ಸೂರಪ್ಪಲ್ಲಿಯ ಕಂಟೈನ್ಮೆಂಟ್‌ ಝೋನ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಅವರು ಮಾತನಾಡಿದರು.

ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕೋವಿಡ್ ಸೋಂಕು ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಗೆ ಹರಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸ ಬೇಕು. ಎಲ್ಲಾ ಗ್ರಾಪಂ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.

ಮಾಹಿತಿ ಪಡೆಯಿರಿ: ಸ್ಥಳೀಯ ಅಧಿಕಾರಿಗಳು, ಆಶಾಕಾರ್ಯಕರ್ತರು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಸದಸ್ಯರ ಆರೋಗ್ಯದ ಮಾಹಿತಿ ಪಡೆಯಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಿದಾಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಮಾತನಾಡಿ, ಸ್ಥಳೀಯ ಮಟ್ಟದ ಸಮಿತಿಗಳು ಹಾಗೂ ಸ್ವಯಂ ಸೇವಕರು ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕೋವಿಡ್ ಸೋಂಕಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಭಾಸ್ಕರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಆರೋಗ್ಯ ಸೇವಾ ಕೇಂದ್ರ :  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಎಲ್ಲಾ ಗ್ರಾಮಗಳಲ್ಲಿ ಆರೋಗ್ಯ ಸೇವಾ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದ್ದು, ಇದುವರೆಗೆ 50 ಗ್ರಾಮಗಳಲ್ಲಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಸಿಇಒ ಬಿ.ಫೌಝೀಯಾ ತರುನ್ನುಮ್‌ ಹೇಳಿದ್ದಾರೆ. ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಸೋಂಕಿನ ಲಕ್ಷಣ ಇದ್ದರೆ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ತ್ವರಿತವಾಗಿ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಗ್ರಾಮ ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next