ಸಕಲೇಶಪುರ: ಪುರಸಭಾ ಅಧ್ಯಕ್ಷ ಕಾಡಪ್ಪ ಪ್ರತಿನಿಧಿಸುವ ಪಟ್ಟಣದ 11ನೇ ವಾರ್ಡ್ ನಪ್ರೇಂ ನಗರ ಬಡಾವಣೆಯಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಕೊಳಚೆ ನಿರ್ಮೂಲನ ಮಂಡಳಿಯಿಂದ 20 ಲಕ್ಷ ಹಾಗೂ ಹೆಚ್ಚುವರಿಯಾಗಿ ಪುರಸಭೆಯಿಂದ 8 ಲಕ್ಷ ರೂ.ಗಳು ಬಿಡುಗಡೆ ಯಾಗಿ ಕೊಳಚೆ ನಿರ್ಮೂಲನ ಮಂಡಳಿ ಅನುದಾನದ ಕಾಮಗಾರಿ ಮುಗಿದು ಪುರಸಭೆಯಿಂದ ಬಿಡುಗಡೆಯಾದ ಬಾಕಿ 8 ಲಕ್ಷದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಕಳಪೆಯಾಗಿ ನಡೆಯು ತ್ತಿದೆ ಎಂದು ಆರೋಪಿಸಿ ಖುದ್ದು ಪುರ ಸಭೆ ಅಧ್ಯಕ್ಷ ಕಾಡಪ್ಪ ಹಾಗೂ ತಡೆಗೋಡೆ ಕೆಳಗಿರುವ ಮನೆಯವರು ಎರಡು ದಿನಗಳ ಹಿಂದೆ ಈ ಕಾಮಗಾರಿ ಉಪಗುತ್ತಿಗೆ ಪಡೆದವರ ಜೊತೆಗೆ ಜಗಳವಾಡಿದ್ದಾರೆ. ಆದರೂ ಸಹ ಪುರಸಭಾ ಅಧ್ಯಕ್ಷರ ಮಾತಿಗೆ ಉಪಗುತ್ತಿಗೆದಾರರು ಕವಡೇ ಕಿಮ್ಮತ್ತು ನೀಡಿಲ್ಲ ಎಂದು ತಿಳಿದು ಬಂದಿದೆ.
ತಡೆ ಗೋಡೆಗೆ ಜೆಸಿಬಿ ಆಧಾರ: ಇದಾದ ಎರಡೇ ದಿನಗಳಲ್ಲಿ ತಡೆಗೋಡೆ ಉರುಳಿದ್ದು, ಅದೃಷ್ಟವಷಾತ್ ಕೆಳಗಿರುವ ಮನೆಯ ಅರ್ಧ ಅಡಿ ಹಿಂಭಾಗಕ್ಕೆ ಬಿದ್ದಿದ್ದು ಮತ್ತಷ್ಟು ಅಪಾಯವಾಗದಂತೆ ಜೆಸಿಬಿ ನಿಲ್ಲಿಸಿ ತಡೆಗೋಡೆ ಕುಸಿತವಾಗುವುದನ್ನು ತಡೆಯಲಾಗಿದೆ. ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಹಾಗೂ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕಟ್ಟಲಾಗಿದ್ದ ತಡೆಗೋ ಡೆಗೆ ಪುರಸಭೆಯವರು ಮತ್ತೆ 8 ಅಡಿ ಎತ್ತರಕ್ಕೆ ಕಟ್ಟಲು ಎಂಜಿನಿಯರ್ ಅನುಮತಿ ಕೊ ಟ್ಟಿರುವುದು ಆಶ್ಚರ್ಯಕರವಾಗಿದೆ. ಈ ಹಿನ್ನೆಲೆ ಈ ಕಾಮಗಾರಿಗೆ ಸಂಬಂಧ ಎಲ್ಲ ಗುತ್ತಿಗೆದಾರರು ಹಾಗೂ ಎಂಜಿನಿಯರ್ ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಕ್ರಮದ ಭರವಸೆ: ಘಟನಾ ಸ್ಥಳಕ್ಕೆ ಪುರಸಭಾ ಅಧ್ಯಕ್ಷ ಕಾಡಪ್ಪ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಡೆಗೋಡೆಗೆ ಮೇಲುಗಡೆ ಮಣ್ಣು ತುಂಬಲಾಗುತ್ತಿದೆ. ಇದು ಹೆಚ್ಚಾಗಿದ್ದರಿಂದ ತಡೆಗೋಡೆ ಕುಸಿದಿರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಗುತ್ತಿಗೆದಾರರು ಹಾಗೂ ಅಭಿಯಂತರರ ನಿರ್ಲಕ್ಷ್ಯಕಂಡುಬಂದಿದೆ. ಈ ಕುರಿತು ಉನ್ನತ ಅಧಿಕಾರಿಗಳಿಂದ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪುರಸಭಾ ನಾಮ ನಿರ್ದೇಶಿತ ಸದಸ್ಯ ದೀಪಕ್ ಮಾತನಾಡಿ, ರಾಜ್ಯ ಸರ್ಕಾರ ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ರೂ. ಹಣ ನೀಡಿದ್ದರೂ ಸಹ ಸದುಪಯೋಗ ಆಗುತ್ತಿಲ್ಲ. ಪುರಸಭೆಯಲ್ಲಿ ಕಾಯಂ ಎಂಜಿನಿಯರ್ ಇಲ್ಲ. ಈ ಕಾಮಗಾರಿ ಕುರಿತು ಯಾರು ಉಸ್ತುವಾರಿ ವಹಿಸಿದ್ದರೋ ಅವರೆ ನೇರ ಹೊಣೆ. ಪುರಸಭೆ ಭ್ರಷ್ಟಚಾರದ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದಿದ್ದಾರೆ.
ಈ ಹಿಂದೆ ರಾಜ್ಯದ ಅತ್ಯಂತ ಕ್ರಿಯಾಶೀಲ ಪುರಸಭೆಗಳಲ್ಲಿ ಒಂದಾಗಿದ್ದ ಸಕಲೇಶಪುರ ಪುರಸಭೆ ಕೆಲವು ಪುರಸಭಾ ಸದಸ್ಯರು, ಕೆಲವು ಮಾಜಿ ಪುರಸಭಾ ಸದಸ್ಯರು, ಕೆಲವು ಸಿಬ್ಬಂದಿಗಳ ಕಾರಣ ಭ್ರಷ್ಟಚಾರದಲ್ಲಿ ಅಗ್ರ ಸ್ಥಾನದಲ್ಲಿ ನಿಂತಿದ್ದು ಪುರಸಭೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಬಿಜೆಪಿ ನಗರ ಅಧ್ಯಕ್ಷ ಹಾಗೂ ಪುರಸಭಾ ನಾಮನಿರ್ದೇಶಿತ ಸದಸ್ಯ ಉಮೇಶ್ ಆಗ್ರಹಿಸಿದ್ದಾರೆ.