Advertisement

ಅಪರಾಧ ತಡೆಗೆ ಪೊಲೀಸರೊಂದಿಗೆ ಸಹಕರಿಸಿ: ಮ್ಯಾಥ್ಯೂ

06:41 AM Feb 04, 2019 | |

ಹೊನ್ನಾಳಿ: ನೆರೆಹೊರೆ ಕಾವಲು ಸಮಿತಿ ರಚಿಸಿಕೊಂಡು ಕಳ್ಳಕಾಕರನ್ನು ಹಿಡಿಯಲು ಇಲಾಖೆಗೆ ಸಹಕಾರ ನೀಡಿದರೆ ಕಳ್ಳತನ ಪ್ರಕರಣಗಳು ಸಂಪೂರ್ಣ ಸ್ಥಗಿತಗೊಳ್ಳುತ್ತವೆ ಎಂದು ಸಿಪಿಐ ಬ್ರಿಜೇಶ್‌ ಮ್ಯಾಥ್ಯೂ ಹೇಳಿದರು.

Advertisement

ಪಟ್ಟಣದ ದುರ್ಗಿಗುಡಿ ಬಡಾವಣೆಯ 5ನೇ ವಾರ್ಡ್‌ ಪ.ಪಂ ಸದಸ್ಯೆ ಸವಿತಾ ಹುಡೇದ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ರಾತ್ರಿ ಸ್ವಾಮಿ ವಿವೇಕಾನಂದ ಮೆಮೋರಿಯಲ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೊಲೀಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೆರೆಹೊರೆ ಸಮಿತಿ ಸದಸ್ಯರಿಂದ ರಾತ್ರಿ ಸಮಯದಲ್ಲಿ ತಿರುಗಾಡುವ ವ್ಯಕ್ತಿಗಳನ್ನು ಗುರ್ತಿಸಲು ಪೊಲೀಸರಿಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಕಳ್ಳರು ಸಾಮಾನ್ಯವಾಗಿ ಒಂಟಿ ಮನೆ, ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಾರೆ. ಮನೆಯಿಂದ ಒಂದೆರೆಡು ದಿನ ಹೊರ ಹೋಗುವ ಪ್ರಸಂಗ ಬಂದರೆ ಪೊಲೀಸ್‌ ಇಲಾಖೆಗೆ ತಿಳಿಸಿ ಹೋಗಬೇಕು. ಸಾಧ್ಯವಾದರೆ ಮನೆಯಲ್ಲಿ ಸಂಬಂಧಿಕರೊಬ್ಬರನ್ನು ಬಿಟ್ಟು ಹೋಗುವುದು ಒಳಿತು ಎಂದು ಹೇಳಿದರು.

ಬಡಾವಣೆಯ ನಾಗರಿಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಅದರಿಂದ ಕಳ್ಳರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳ್ಳತನವಾದ ಎಲ್ಲಾ ನಗದು, ಆಭರಣಗಳು ವಾಪಸ್‌ ಸಿಗುತ್ತವೆ ಎಂದು ಹೇಳಿದರು.

Advertisement

ಮುಂದಿನ ದಿನಗಳಲ್ಲಿ ಪೊಲೀಸ್‌ ಬೀಟ್ ಜಾಸ್ತಿ ಮಾಡುತ್ತೇವೆ. ಎಲ್ಲದಕ್ಕೂ ಸಾರ್ವಜನಿಕರ ಸಹಕಾರ ಮುಖ್ಯ. ಅನೇಕ ಸಂದರ್ಭದಲ್ಲಿ ಜನರು ಪೊಲೀಸರಿಗೆ ದೂರು ಕೊಡಲು ಭಯಪಡುತ್ತಾರೆ. ಇದು ಸಲ್ಲದು ಎಂದರು.

18 ವಯೋಮಿತಿ ಮೀರದ ಯುವಕರಿಗೆ ಬೈಕ್‌ ಕೊಡಬಾರದು. ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವಂತೆ ಹೇಳಬೇಕು ಎಂದರು.

ಪಿಎಸ್‌ಐ ತಿಪ್ಪೇಸ್ವಾಮಿ ಮಾತನಾಡಿ, ಪೊಲೀಸರು ಜನಸ್ನೇಹಿ ಎಂಬುದನ್ನು ಜನ ತಿಳಿದುಕೊಳ್ಳಬೇಕು. ಪೊಲೀಸರು ಹಾಗೂ ಜನರ ಮಧ್ಯೆ ಅಂತರ ಕಡಿಮೆಯಾದಾಗ ಅವಘಡಗಳು ಜರುಗುವುದಿಲ್ಲ. ಬೆಳಗ್ಗೆ-ಸಂಜೆ ವಾಯುವಿಹಾರಕ್ಕೆ ತೆರಳುವವರು ಚಿನ್ನಾಭರಣ ಧರಿಸಿಕೊಂಡು ಹೋಗಬಾರದು ಎಂದು ಹೇಳಿದರು.

ಪ.ಪಂ ಸದಸ್ಯ ಸುರೇಶ್‌ ಹೊಸಕೇರಿ, ಬಡಾವಣೆ ವಾಸಿಗಳಾದ ಎಸ್‌.ಎ. ಹುಡೇದ್‌, ಮಹೇಶ್‌ ಹುಡೇದ್‌, ರೇಖಾ ನೀಲಕಂಠಸ್ವಾಮಿ, ಲೀಲಾ ಚಂದ್ರಪ್ಪ, ಪರಮೇಶ್ವರಪ್ಪ, ಎಚ್.ಎಂ. ರಾಜೇಂದ್ರ, ಸಂತೋಷ್‌ ಬಡಾವಣೆಯ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಕುಸುಮ ಮುಡಿಕೇರಿ ಪ್ರಾರ್ಥಿಸಿದರು. ಶಿಕ್ಷಕ ಜಿ.ನಾಗೇಶ್‌ ಸ್ವಾಗತಿಸಿದರು. ಚಂದ್ರಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next