Advertisement

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಗೊಳಿಸಲು ಸಹಕರಿಸಿ

10:47 AM Sep 20, 2018 | Team Udayavani |

ದಾವಣಗೆರೆ: ಸಂವಿಧಾನ ಕೊಡಮಾಡಿದ ಮಹತ್ವದ ಶಿಕ್ಷಣದ ಹಕ್ಕನ್ನು ಪೋಷಕರು, ಜನಪ್ರತಿನಿಧಿಗಳು ಅರ್ಥೈಸಿಕೊಂಡು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಿಷ್ಠಗೊಳಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಹೇಳಿದ್ದಾರೆ.

Advertisement

ಬುಧವಾರ, ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ, ಗ್ರಾಮ ಪಂಚಾಯಿತಿ ಹಾಗೂ ಸ್ಪಂದನಯುವಜನ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಪ್ರತಿಯೊಬ್ಬರೂ ಗೌರವ, ಸಮಾನತೆಯ ಜೀವನ ನಿರ್ವಹಣೆಗೆ ಸಂವಿಧಾನ ಶಿಕ್ಷಣದ ಹಕ್ಕು ನೀಡಿದೆ ಎಂದರು.

ದೇಶಾದ್ಯಂತ 2010ರಲ್ಲಿ ಜಾರಿಯಾಗಿರುವ ಉಚಿತ ಗುಣಾತ್ಮಕ ಕಡ್ಡಾಯ ಶಿಕ್ಷಣ ಕಾಯ್ದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ದುರ್ಬಲ ವರ್ಗದ ಕುಟುಂಬದ 14 ವರ್ಷದೊಳಗಿನ ಮಕ್ಕಳಿಗೆ ಶೈಕ್ಷಣಿಕ ಹಕ್ಕು ಕಲ್ಪಿಸಿದೆ. ಪೋಷಕರು ಸಹ ಮಕ್ಕಳ ಶಿಕ್ಷಣದ ಬಗ್ಗೆ ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದರು. 

ಉತ್ತಮ ನಾಗರಿಕ ಸಮಾಜಕ್ಕಾಗಿ ಹಲವಾರು ಕಾಯ್ದೆಗಳಿವೆ. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯೂ ಇದೆ. ಬಾಲ್ಯವಿವಾಹ ಮಾಡಿದವರು, ಮಕ್ಕಳನ್ನು ದುಡಿಮೆಗೆ ತಳ್ಳುವರಿಗೆ, ಬಾಲಕಾರ್ಮಿಕ ಪದ್ಧತಿಗೆ ಪ್ರೇರೇಪಿಸಿದರೆ ಶಿಕ್ಷೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯಾಬಲ ಆಧರಿಸಿ ಶಿಕ್ಷಕರ ನಿಯೋಜಿಸುವ ಪದ್ಧತಿ ಅವೈಜ್ಞಾನಿಕವಾಗಿದೆ. ಜನಪ್ರತಿ ನಿಧಿಗಳು, ಅಧಿ ಕಾರಿಗಳು ಶಿಕ್ಷಣ ಹಕ್ಕು ಕಾಯ್ದೆಯನ್ನೇ ದಾರಿತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೆ ಇರುವ ಜನಪ್ರತಿನಿಧಿಗಳು ಈ ಕಾಯ್ದೆ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

Advertisement

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌ .ಟಿ. ಮಂಜುನಾಥ್‌ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯನ್ನು ಸಂಬಂಧಿಸಿದ ಇಲಾಖೆ ನಿಯಂತ್ರಿಸಬೇಕು. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಅವುಗಳನ್ನು ಬಲಪಡಿಸಬೇಕು. ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ಹಚ್ಚದೆ ಕಡ್ಡಾಯವಾಗಿ ಪಾಠಪ್ರವಚನ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಕೆಲವಾರು ಸರ್ಕಾರಿ ಶಾಲೆಗಳು ದಾನಿಗಳ ನೆರವು, ಶಾಲಾ ಸಮಿತಿಗಳ ಸಹಭಾಗಿತ್ವದಿಂದ ಉತ್ತಮವಾಗಿವೆ. ಕೆಲವೆಡೆ ಪಟ್ಟಭದ್ರರು ಶಾಲೆಗಳ ಆಸ್ತಿಗಳ ಮೇಲೆ ಹಿಡಿತ ಹೊಂದಿದ್ದು ವಂಚನೆ ಮಾಡುತ್ತಿದ್ದಾರೆ.ಅಂತಹವರನ್ನು ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಶಾಲಾ ಸಮಿತಿಯವರು ದೂರ ಇಡಲು ಮುಂದಾಗಬೇಕಿದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಆರ್‌. ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ಶಾಲಾ ಸಮಿತಿ ಉಪಾಧ್ಯಕ್ಷ ಡಿ. ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೃಷ್ಣ, ಮುಖ್ಯ ಶಿಕ್ಷಕ ಕೆ.ಎಂ. ಮಂಜುನಾಥ್‌, ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್‌.ಅಶ್ವಿ‌ನಿ, ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next