ಚಾಮರಾಜನಗರ: ಲಾಕ್‌ಡೌನ್ ಸಂದರ್ಭದಲ್ಲಿ ಜಾರಿಗೊಳಿಸಿದ ಕಟ್ಟು ನಿಟ್ಟಿನ ಕ್ರಮಗಳಿಗೆ ಸ್ಪಂದಿಸಿದ ರೀತಿಯಲ್ಲಿಯೇ ಪ್ರಸಕ್ತ ಸನ್ನಿವೇಶದಲ್ಲೂ ಜಿಲ್ಲೆಯ ಸಾರ್ವಜನಿಕರು ಕೋವಿಡ್-19 ತಡೆಯಲು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮನವಿ ಮಾಡಿದ್ದಾರೆ.
ನಿರ್ಲಕ್ಷ್ಯ ಬೇಡ: ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಜಿಲ್ಲೆಯ ಜನರು ತಮ್ಮ ಹೊಣೆಗಾರಿಕೆ ಮರೆತಂತಿದೆ. ಕೋವಿಡ್-19 ತಡೆಗೆ ಅನುಸರಿಸಬೇಕಾದ ನಿಯಮ ಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇತರರ ಆರೋಗ್ಯದ ದೃಷ್ಟಿಯಿಂದಲೂ ಮಾಸ್ಕ್ ಧರಿಸುವುದು ಕ್ಷೇಮ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ತಿಳಿಸಿದ್ದಾರೆ.
ಅಂತರ ಕಾಯ್ದುಕೊಳ್ಳಿ: ಸಾರ್ವಜನಿಕ ಸ್ಥಳ, ಕಚೇರಿ, ಸಾರಿಗೆ ಹಾಗೂ ಖಾಸಗಿ ವಾಹನಗಳಲ್ಲಿ ಎಲ್ಲರೂ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಇಂದಿಗೂ ವಿಶೇಷವಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಜನ ಸಂದಣಿ ಕಂಡು ಬರುತ್ತಿದೆ. ಸಂಜೆ ಸಮಯದಲ್ಲಿ ತಿಂಡಿ ತಿನಿಸುಗಳ ಮಾರಾಟ ಸ್ಥಳಗಳಲ್ಲಿ ಗುಂಪು ಗುಂಪಾಗಿ ಜನರು ಸೇರುವುದು ಕಂಡುಬರುತ್ತಿದೆ. ಪ್ರಸ್ತುತ ದಿನಗಳಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವುದು ಸಾರ್ವಜನಿಕ ಬದತೆಯಾಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಯಾಣಕ್ಕೆ ಕಡಿವಾಣ ಹಾಕಿ: ಜಿಲ್ಲೆಯ ಜನರು ಕೋವಿಡ್-19 ವೈರಾಣು ತಡೆಗಾಗಿ ಆದಷ್ಟು ಹೊರಜಿಲ್ಲೆ, ರಾಜ್ಯಗಳಿಗೆ ಪ್ರಯಾಣಿಸುವುದನ್ನು ಮುಂದೂಡಬೇಕು. ಅಗತ್ಯ ಸಂದರ್ಭಗಳಲ್ಲಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ಹೇಳಿದರು. ಅಂತರ ಜಿಲ್ಲೆ, ರಾಜ್ಯದಿಂದ ಜಿಲ್ಲೆಗೆ ಬರುವವರೊಂದಿಗೆ ಎಚ್ಚರಿಕೆಯಿಂದ ಇರಬೇಕು.
ಅಪರಿಚಿತರು ಬಂದಾಗ ಮಾಹಿತಿ ನೀಡಬೇಕು. ಪ್ರತಿ ಅಂಗಡಿ ಮುಂಗಟ್ಟು, ವ್ಯಾಪಾರ ಸ್ಥಳಗಳಲ್ಲಿ ಕಡ್ಡಾಯವಾಗಿ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್-19 ಹರಡದಂತೆ ಅಗತ್ಯವಿರುವ ಮೂಲ ಸವಲತ್ತುಗಳಾದ ಸ್ಯಾನಿಟೈಸರ್, ಸೋಪು ಇನ್ನಿತರ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.