ವೆಲ್ಲಿಂಗ್ಟನ್: ಮುಂದಿನ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯದ ನ್ಯೂಜಿಲ್ಯಾಂಡ್ ನ ಸ್ಪೋಟಕ ಆಟಗಾರ ಕಾಲಿನ್ ಮನ್ರೋ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ವೈಟ್-ಬಾಲ್ ಸ್ಪೆಷಲಿಸ್ಟ್ ಆಗಿರುವ ಅವರು ನ್ಯೂಜಿಲ್ಯಾಂಡ್ ಪರ ಹಿಂದಿನ ಎರಡು ಟಿ20 ವಿಶ್ವಕಪ್ ಅಭಿಯಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ತಿಂಗಳ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಆಶಯದಲ್ಲಿದ್ದರು, ಆದರೆ 37 ವರ್ಷ ವಯಸ್ಸಿನ ಮನ್ರೋಗೆ ಅವಕಾಶ ಸಿಗದ ಕಾರಣ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.
ಎಡಗೈ ಆಟಗಾರ ಕಾಲಿನ್ ಮನ್ರೋ ಕಿವೀಸ್‌ಗಾಗಿ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಕಿವೀಸ್ ಪರ ಅವರು ಮೂರು ಶತಕಗಳು ಮತ್ತು 19 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಮೂರು ಶತಕಗಳು ಕೂಡಾ ಟಿ20 ಮಾದರಿಯಲ್ಲಿ ಬಂದಿರುವುದು ವಿಶೇಷ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಮೂರು ಅಥವಾ ಹೆಚ್ಚು ಶತಕ ಬಾರಿಸಿದ ವಿಶ್ವದ ಕೇವಲ ಏಳು ಆಟಗಾರರಲ್ಲಿ ಕಾಲಿನ್ ಮನ್ರೋ ಕೂಡಾ ಒಬ್ಬರು.
ಅವರು ಪ್ರಪಂಚದಾದ್ಯಂತ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತಕ್ಷಣವೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ.
“ಬ್ಲ್ಯಾಕ್ ಕ್ಯಾಪ್ಸ್‌ಗಾಗಿ ಆಡಿರುವುದು ಯಾವಾಗಲೂ ನನ್ನ ಆಟದ ವೃತ್ತಿಜೀವನದಲ್ಲಿ ದೊಡ್ಡ ಸಾಧನೆಯಾಗಿದೆ. ಆ ಜರ್ಸಿಯನ್ನು ಧರಿಸುವುದಕ್ಕಿಂತ ದೊಡ್ಡ ಹೆಮ್ಮೆ ಯಾವುದೂ ಇಲ್ಲ” ಎಂದು ಮನ್ರೋ ಹೇಳಿದರು.