ಕಂಪ್ಲಿ: ಅತಿಥಿ ಗೃಹದಲ್ಲಿ ಸೋಮವಾರ ನಡೆದ ಗಂಗಾಮತಸ್ಥರ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ| ತಳವಾರ ಸಾಬಣ್ಣಾ ಇವರನ್ನು ಗಂಗಾಮತಸ್ಥರ ಸಮುದಾಯದಿಂದ ಸನ್ಮಾನಿಸಲಾಯಿತು.
ಡಾ| ಸಾಬಣ್ಣ ತಳವಾರ್ ಮಾತ ನಾಡಿ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕೋಲಿ, ಗಂಗಾಮತಸ್ಥರಿಗೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯತೆ ಸೇರಿ ನಾನಾ ಸೌಲಭ್ಯಗಳು ದೊರಕಿಲ್ಲ. ಸಮಾಜದಲ್ಲಿ ಭಿನ್ನಾಭಿಪ್ರಾಯ, ಸಂಘಟನಾ ಕೊರತೆ ಸೇರಿ ನಾನಾ ಕಾರಣಗಳಿಂದ ಈತನಕವೂ ಸೂಕ್ತ ರಾಜಕೀಯ ಪ್ರಾತಿನಿಧ್ಯತೆಯನ್ನಾಗಲಿ, ಅರ್ಹ ಪ್ರಮಾಣದ ಸರ್ಕಾರಿ ಸೌಲಭ್ಯಗಳನ್ನಾಗಲಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅನ್ಯ ಸಮಾಜದವರೊಂದಿಗೆ ಉತ್ತಮ ಸಂಬಂಧ ಹೊಂದಬೇಕಿದೆ. ಸಮಾಜದಲ್ಲಿ ಸಂಘಟನೆ ಜಾಗೃತಿಗಾಗಿ ಚಿಂತನಾ ಸಭೆಗಳನ್ನು ಆಯೋಜಿಸಬೇಕಿದೆ.
ಹಾಸ್ಟೆಲ್ ನಿರ್ಮಿಸಲು ಮುಂದಾದಲ್ಲಿ ಅನುದಾನ ಒದಗಿಸಲಾಗುವುದು. ಕೋಲಿ, ಗಂಗಾಮಸ್ಥರ ಸಂಖ್ಯೆಗೆ ಅನುಗುಣವಾಗಿ ಎಂಟರಿಂದ ಹತ್ತು ಜನ ಶಾಸಕರಿರಬೇಕಿತ್ತು. ಆದರೆ ಒಬ್ಬ ಶಾಸಕ, ಮೂವರು ಎಮ್ಮೆಲ್ಸಿಗಳಿದ್ದಾರೆ. ಪ್ರವರ್ಗ-1ಕ್ಕೆ ಶೇ. 4 ಮೀಸಲಾತಿಯಿದ್ದು ಇದನ್ನು ಶೇ.6ಕ್ಕೆ ಏರಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ. ಕೋಲಿ, ಗಂಗಾಮತಸ್ಥರು ಎಸ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದ್ದರೂ ಕಳೆದ ನಾಲ್ಕು ದಶಕಗಳಿಂದಲೂ ಎಸ್ಟಿಗೆ ಸೇರದಂತೆ ಕಾಣದ ಶಕ್ತಿಯೊಂದು ತಡೆಯುತ್ತಿದೆ ಎಂದು ಆಪಾದಿಸಿದರು.
ಗಂಗಾಮತಸ್ಥ ಸಮಾಜದ ಸ್ವಾಮೀಜಿ ಯವರು ಗಂಗಾಮತಸ್ಥರ ರಾಜಕೀಯ ಸೇರಿ ಮೀಸಲಿಗಾಗಿ ಧ್ವನಿ ಎತ್ತಿ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಳ್ಳಬೇಕಿದೆ ಎಂದರು.
ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಮಾತನಾಡಿ, ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕೋಲಿ, ಗಂಗಾಮತಸ್ಥರಿಗೆ ಸಚಿವಸ್ಥಾನ ನೀಡುವಂತೆ ಒತ್ತಾಯಿಸುವಲ್ಲಿ, ಎಸ್ಟಿ ಮೀಸಲಿಗಾಗಿ ಗಂಗಾಮತಸ್ಥರ ರಾಜ್ಯ ಸಮಿತಿ ಕಾರ್ಯನಿರತವಾಗಿದೆ ಎಂದರು.
ಗಂಗಾಮತಸ್ಥರ ಸಂಘದ ರಾಜ್ಯ ಕಾರ್ಯದರ್ಶಿ ಕರೇಕಲ್ ಮನೋಹರ ಇದ್ದರು.