Advertisement

ತಣ್ಣೀರುಬಾವಿ  ಗಾಲ್ಫ್ ಕೋರ್ಸ್‌  ಶೀಘ್ರ ಸಾಕಾರ

12:41 PM Oct 14, 2017 | Team Udayavani |

ಮಹಾನಗರ : ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಹತ್ತರ ಬೆಳವಣಿಗೆಯಾಗಿ ಮೂಡಿ ಬರಲಿರುವ ಪ್ರತಿಷ್ಠಿತ ಯೋಜನೆಯಾದ ತಣ್ಣೀರುಬಾವಿ ಸಮೀಪದ ಬೆಂಗ್ರೆಯಲ್ಲಿ ‘ಗಾಲ್ಫ್ ಕೋರ್ಸ್‌’ ನಿರ್ಮಾಣಕ್ಕೆ ಪೂರಕ ಪ್ರಕ್ರಿಯೆಗಳು ಆರಂಭವಾಗಿವೆ. ಕೇಂದ್ರದಿಂದ ಸಿಆರ್‌ಝಡ್‌ ಅನುಮತಿ ದೊರಕಿದರೆ, 2 ವರ್ಷದೊಳಗೆ ಯೋಜನೆ ಸಾಕಾರಗೊಳ್ಳುವ ನಿರೀಕ್ಷೆ ಇದೆ.

Advertisement

ಆಗಸ್ಟ್‌ ಕೊನೆಯಲ್ಲಿ ಸಿಆರ್‌ಝಡ್‌ ಅನುಮತಿ ಕೋರಿ ಹೊಸದಿಲ್ಲಿಗೆ ಪತ್ರ ಬರೆಯಲಾಗಿದ್ದು, ಅಲ್ಲಿ ಒಪ್ಪಿಗೆ ದೊರೆತ ಅನಂತರ ಗಾಲ್ಫ್ ಕೋರ್ಸ್‌ ಯೋಜನೆಗೆ ಚಾಲನೆ ದೊರೆಯಲಿದೆ.

ಓಪಸ್‌ ಲಗೂನ್‌ ಗಾಲ್ಫ್ ಆ್ಯಂಡ್‌ ರೆಸಾರ್ಟ್‌ ಸಂಸ್ಥೆ ಈ ಯೋಜನೆ ಕೈಗೊಳ್ಳುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ಒಟ್ಟು 135 ಎಕರೆ ಜಮೀನಿನಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಇದರಲ್ಲಿ 125 ಎಕರೆಯಲ್ಲಿ ಗಾಲ್ಫ್ ಕೋರ್ಸ್‌ ಹಾಗೂ 10 ಎಕರೆಯಲ್ಲಿ ರೆಸಾರ್ಟ್‌ ನಿರ್ಮಾಣವಾಗಲಿದೆ. ತಣ್ಣೀರುಬಾವಿ ಸಮುದ್ರ ಕಿನಾರೆ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಗೊಳಿಸಬೇಕಿರುವ ಕಾರಣ ಸಿಆರ್‌ಝಡ್‌ ಅನುಮತಿಯನ್ನು ಪಡೆಯಬೇಕಾಗಿದೆ. ಸಿಆರ್‌ಝಡ್‌ ಒಪ್ಪಿಗೆ ಪಡೆದರೆ, ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ತಣ್ಣೀರುಬಾವಿಯ ಸ್ಥಳವನ್ನು ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸಲಿದೆ. ಆ ಬಳಿಕ 2 ವರ್ಷದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಇದೆ.

ಸಿಆರ್‌ಝಡ್‌ ಅನುಮತಿ ಕೇಳಿ ಪ್ರವಾಸೋದ್ಯಮ ಇಲಾಖೆಯು ಸಿಆರ್‌ಝಡ್‌ ಇಲಾಖೆಯನ್ನು ಸಂಪರ್ಕಿಸಿತ್ತು. ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಅನುಮತಿ ನೀಡುವ ಅಧಿಕಾರ ಇಲ್ಲ. ಹೀಗಾಗಿ, ಆಗಸ್ಟ್‌ನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಿಆರ್‌ಝಡ್‌ ಅನುಮತಿಗೆಂದು ಪತ್ರ ರವಾನಿಸಿ, ಅನುಮತಿ ನಿರೀಕ್ಷಿಸಲಾಗಿದೆ.

2012ಕ್ಕೆ ಕರಾರು ಸಿದ್ಧವಾಗಿತ್ತು
ತಣ್ಣೀರುಬಾವಿ ಸಮೀಪದ ಬೆಂಗ್ರೆಯಲ್ಲಿ ಗಾಲ್ಫ್ ಕೋರ್ಸ್‌ ಯೋಜನೆ ಅನುಷ್ಠಾನಗೊಳಿಸಲು 2012ರ ಸೆ.1ರಂದು ಬಿಡ್‌ದಾರರ ಜತೆಗೆ ಕರಾರು ಪ್ರಕ್ರಿಯೆ ನಡೆದಿತ್ತು. ಕೆಲಸ ಪ್ರಾರಂಭಿಸುವ ಮೊದಲು ವಿವರವಾದ ವಿನ್ಯಾಸವನ್ನು ಸಿದ್ಧಪಡಿಸಿ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್‌) ಮತ್ತು ಇತರ ಅಗತ್ಯ ಇಲಾಖೆಗಳ ಅನುಮೋದನೆ ಪಡೆಯಬೇಕಾಗಿತ್ತು. ಈ ಎಲ್ಲ ಪ್ರಕ್ರಿಯೆಗೆ ಸುದೀರ್ಘ‌ ಸಮಯ ಹಿಡಿದಿದ್ದರಿಂದ ಯೋಜನೆ ಆರಂಭಗೊಳ್ಳುವುದು ವಿಳಂಬವಾಗಿದೆ.

Advertisement

ಮಾತು ತಪ್ಪಿದ ಸಚಿವರು
‘ಬೆಂಗ್ರೆ ಕಸಬಾ ಗ್ರಾಮದಲ್ಲಿ ಗಾಲ್ಫ್ ಕೋರ್ಸ್‌ ನಿರ್ಮಾಣಕ್ಕೆ ಜಮೀನು ಕಾದಿರಿಸಲಾಗಿದ್ದು, ಈ ಜಮೀನನ್ನು ಯಾವ ಉದ್ದೇಶಕ್ಕೆ ಕೊಡಲಾಗಿದೆಯೋ ಅದೇ ಉದ್ದೇಶಕ್ಕೆ 2 ವರ್ಷಗಳ ಒಳಗೆ ಉಪಯೋಗಿಸಬೇಕು. ತಪ್ಪಿದಲ್ಲಿ ಈ ಜಮೀನನ್ನು ಸರಕಾರವು ಹಿಂಪಡೆಯಲಾಗುವುದು’ ಎಂದು ಈ ಹಿಂದಿನ ಪ್ರವಾಸೋದ್ಯಮ ಸಚಿವ ಆರ್‌.ವಿ. ದೇಶಪಾಂಡೆ ಅವರು 2015ರ ಜುಲೈನಲ್ಲಿ ತಿಳಿಸಿದ್ದರು. ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ಪರಭಾರೆ, ಗುತ್ತಿಗೆ, ಅಡಮಾನ ಮಾಡಬಾರದು. ಇಲ್ಲಿ ನಡೆಯಲಿರುವ ಚಟುವಟಿಕೆಯಿಂದ ಸ್ಥಳೀಯ ಮೀನುಗಾರಿಕೆಗೆ, ಯಾವುದೇ ರೀತಿಯ ತೊಂದರೆ ಅಥವಾ ವ್ಯತ್ಯಾಸ ಉಂಟಾಗಬಾರದು. ಈ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಪಿಪಿಪಿ ಆಧಾರದ ಮೇಲೆ ಗಾಲ್ಫ್ ಕೋರ್ಸ್‌/ಆಕ್ವಾಮೆರೈನ್‌ ಯೋಜನೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಲಾಗಿದೆ. ಈ ನಿರ್ದಿಷ್ಟ ಕಾರ್ಯಕ್ಕಾಗಿ ಆವಶ್ಯಕತೆ ಆಧಾರದ ಮೇಲೆ ಖಾಸಗಿ ಅಭಿವೃದ್ಧಿದಾರರಿಗೆ ಗುತ್ತಿಗೆ ನೀಡಲು ಅನುಮತಿ ನೀಡಲಾಗಿದೆ ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ವರ್ಷ 5 ಆದರೂ, ಯಾವುದೂ ಇತ್ಯರ್ಥವಾಗಿಲ್ಲ.

18 ಗುಳಿಗಳ ಅಂತಾರಾಷ್ಟ್ರೀಯ ಮಟ್ಟದ ಗಾಲ್ಫ್ ಕೋರ್ಸ್‌
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಚಾಮರಾಜನಗರ, ಕೊಡಗು ಮುಂತಾದ ಜಿಲ್ಲೆಗಳಲ್ಲಿ 19 ಹೋಲ್ಸ್‌ ಗಾಲ್ಫ್ ಕೋರ್ಟ್‌ಗಳು ಮತ್ತು 13 ಗಾಲ್ಫ್ ಕೋರ್ಸುಗಳು ಇವೆ. ಬೆಂಗ್ರೆಯ ನೂತನ ಗಾಲ್ಫ್ ಕೋರ್ಸ್‌ಗೆ 180 ಕೋ.ರೂ. ಅಂದಾಜು ಯೋಜನಾ ವೆಚ್ಚ ಯೋಚಿಸಲಾಗಿದ್ದು, 18 ಗುಳಿಗಳ ಅಂತಾರಾಷ್ಟ್ರೀಯ ಮಟ್ಟದ ಗಾಲ್ಫ್ ಕೋರ್ಸ್‌ ಇದಾಗಿರಲಿದೆ. ಇದಕ್ಕಾಗಿ 135 ಎಕರೆ ಭೂಮಿ ಬಳಕೆಗೆ ಹಸ್ತಾಂತರ ಮಾಡಲಾಗಿದೆ.

ಸ್ಥಳೀಯರ ವಿರೋಧ
ತಣ್ಣೀರುಬಾವಿಯಲ್ಲಿ ಪ್ರಸ್ತಾವಿತ ಗಾಲ್ಫ್ ಕೋರ್ಸ್‌ ನಿರ್ಮಾಣಕ್ಕೆ ಮೀಸಲಿಟ್ಟ ಸರಕಾರಿ ಜಾಗದ ಪಕ್ಕದಲ್ಲಿ ಹಲವಾರು ಜನರು ಮನೆ ಕಟ್ಟಿಕೊಂಡಿದ್ದಾರೆ. ಆದರೆ ಇದರಲ್ಲಿ ಹಲವು ಜನರಿಗೆ ಹಕ್ಕುಪತ್ರ, ಮನೆ ನಂಬರ್‌, ಕುಡಿಯುವ ನೀರು, ಒಳಚರಂಡಿ ಸೌಲಭ್ಯ ದೊರಕದೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಆರೋಪವಿದೆ. ಗಾಲ್ಫ್ ಕೋರ್ಸ್‌ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ಹಾಗೂ ಪ್ರತಿಭಟನೆಯನ್ನೂ ನಡೆಸಿದ್ದರು.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next