ಚಿಕ್ಕಬಳ್ಳಾಪುರ: ಅಂತೂ ಇಂತೂ ಹಲವು ವರ್ಷಗಳ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಹೋಟೆಲ್ನಲ್ಲಿ ಬಿಸಿ ನೀರು ಹಾಗೂ ಮಿನರಲ್ ವಾಟರ್ ಖರೀದಿ ಮಾಡುವ ಸಂಕಷ್ಟ ತಪ್ಪಿದ್ದು, ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಜಿಲ್ಲಾಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ.
22 ಕೋಟಿ ರೂ. ವೆಚ್ಚದ ಜಿಲ್ಲಾಸ್ಪತ್ರೆಯಲ್ಲಿ ಬಿಸಿ ನೀರು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ನಿತ್ಯ ಆಸ್ಪತ್ರೆಗೆ ದಾಖಲಾಗುವ ಒಳ ರೋಗಿಗಳು, ಸಂಬಂಧಿಕರು ಬಿಸಿ ನೀರನ್ನು ಹೋಟೆಲ್ಗಳಲ್ಲಿ ಖರೀದಿಸಬೇಕಿತ್ತು. ಮಿನರಲ್ ವಾಟರ್ ಬಾಟಲುಗಳನ್ನು ಖರೀದಿಸಿ ಕೈ ಸುಟ್ಟುಕೊಳ್ಳುತ್ತಿದ್ದರು. ಈ ಬಗ್ಗೆ ಅನೇಕ ಬಾರಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರ ಲಿಲ್ಲ.
ಡೀಸಿ ಆದೇಶಕ್ಕೆ ಶುದ್ಧ ನೀರಿನ ಘಟಕ: ಜಿಲ್ಲಾಸ್ಪತ್ರೆಯಲ್ಲಿ ಈಗ ಪ್ರತಿ ಮಹಡಿಯಲ್ಲೂ ಬಿಸಿ ನೀರು, ತಣ್ಣೀರು ಹಾಗೂ ಶುದ್ಧ ಕುಡಿಯುವ ಅತ್ಯಾಧುನಿಕ ನೀರಿನ ಘಟಕಗಳನ್ನು ಅಳವಡಿಸಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಈ ಘಟಕಗಳನ್ನು ಅಳವಡಿಸಿದೆ. ಇದು ಆಸ್ಪತ್ರೆಗೆ ಬರುವ ಬಡಜನರಿಗೆ ಸಹಕಾರಿಯಾಗಿದೆ. ಆದರೆ ಜನರು ಹೊರಗೆ ಹೋಗಿ ಬಿಸಿ ನೀರು ಮತ್ತು ಶುದ್ಧ ಕುಡಿಯುವ ನೀರು ಖರೀದಿಸದೆ ಆಸ್ಪತ್ರೆಯಲ್ಲೇ ಇರುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ.
ದಿನದ 24 ಗಂಟೆಯೂ ಬಿಸಿ ನೀರು ಸಿಗುತ್ತದೆ. ಜನರಿಗೆ ಈ ಸೌಲಭ್ಯ ಎಲ್ಲಿದೆ ಎಂದು ಮಾರ್ಗಸೂಚಿ ಬರಹದ ಮೂಲಕ ಅರಿವು ಮೂಡಿಸಬೇಕಿದೆ. ಸದ್ಯಕ್ಕಂತೂ ಅನೇಕ ಮಂದಿ ಹೊರಗಡೆಯಿಂದ ಬಾಟಲು, ಬಿಸಿನೀರು, ತಣ್ಣೀರು ತರುವುದನ್ನು ಬಿಟ್ಟು ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳಿಂದ ಅನುಕೂಲ ಪಡೆಯುತ್ತಿದ್ದಾರೆ. ಸದ್ಯ ಆಸ್ಪತ್ರೆಯ ನೆಲಮಹಡಿಯಲ್ಲಿ ( ಹೊರ ರೋಗಿಗಳ ವಿಭಾಗ ಇರುವ ಮಹಡಿ)ದಲ್ಲಿ ಕೊಠಡಿ ಸಂಖ್ಯೆ 54 ಮತ್ತು 56 ರ ಮಧ್ಯೆ (ಮಕ್ಕಳ ತಜ್ಞರ ಕೊಠಡಿ) ಅಳವಡಿಸಲಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆ: ಬಿಸಿನೀರು ಮತ್ತು ಕುಡಿಯುವ ನೀರಿಗೆ ಜಿಲ್ಲಾಸ್ಪತ್ರೆಗೆ ಬರುವ ಸಾರ್ವ ಜನಿಕರು ಹಾಗೂ ರೋಗಿಗಳ ಪರದಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ಡಿಎಸ್‌ಗೆ ಸೂಚನೆ ಕೊಟ್ಟಿದ್ದರ ಪ್ರತಿಫಲ ಈ ಸೌಲಭ್ಯ ಕಲ್ಪಿಸಲಾಗಿದೆ.
ಆಸ್ಪತ್ರೆಗೆ ಬರುವವರು ನಿತ್ಯ ನೀರಿಗಾಗಿ ಖರ್ಚು ಮಾಡಲಾಗುತ್ತಿದ್ದ 50, 60 ರೂ. ಹಣ ಉಳಿಯಲಿದೆ ಎನ್ನಬಹುದು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಕೈಗೆಟುಕುತ್ತಿರುವ ಶುದ್ಧ ಕುಡಿಯುವ ನೀರು ಹಾಗೂ ಬಿಸಿ ನೀರಿಗೆ ರೋಗಿಗಳು ಸೇರಿದಂತೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.