ವಾಷಿಂಗ್ಟನ್: ಬ್ರಿಟನ್‌ನ ಸ್ಯಾಲಿಸ್ಪರಿಯಲ್ಲಿ ಗುಪ್ತಚರ ಏಜೆಂಟ್‌ಗೆ ವಿಷವಿಕ್ಕಿ ಸಾಯಿಸಿದ ಪ್ರಕರಣ ಇದೀಗ ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಅಮೆರಿಕ, ಐರೋಪ್ಯ ಒಕ್ಕೂಟ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ದೇಶಗಳು ರಷ್ಯಾದ 106 ಮಂದಿ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ. 60 ರಾಜತಾಂತ್ರಿಕರನ್ನು ಅಮೆರಿಕವೊಂದೇ ಉಚ್ಚಾಟಿಸಿದ್ದು, ಸಿಯಾಟಲ್‌ನಲ್ಲಿರುವ ರಷ್ಯಾ ದೂತಾವಾಸ ಕಚೇರಿ ಮುಚ್ಚಲು ಆದೇಶಿಸಿದೆ. ಇದರಿಂದಾಗಿ 2ನೇ ವಿಶ್ವ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ರಷ್ಯಾ ನಡುವೆ ಉಂಟಾಗಿದ್ದ ಶೀತಲ ಸಮರದ ದಿನಗಳನ್ನು ನೆನಪಿಸುವ ಘಟನಾವಳಿಗಳು ಮತ್ತೂಮ್ಮೆ ಪುನಾರವರ್ತನೆಯಾದಂತಾಗಿವೆ.
ಅಮೆರಿಕದಿಂದ ಉಚ್ಚಾಟನೆಗೊಂಡವರಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸದ ನೆಪದಲ್ಲಿ ಅಮೆರಿಕ ವಿರುದ್ಧ ಗೂಢಚರ್ಯೆ ಮಾಡಿಕೊಂಡಿದ್ದವರೂ ಸೇರಿದ್ದಾರೆ. ದೇಶ ತೊರೆದು ಹೋಗಲು 7 ದಿನಗಳ ಕಾಲಾವಕಾಶವನ್ನು ಟ್ರಂಪ್ ಆಡಳಿತ ನೀಡಿದೆ.
ದೂತಾವಾಸ ಮುಚ್ಚಿ: ಅಮೆರಿಕದ ಸಿಯಾಟಲ್‌ನಲ್ಲಿರುವ ರಷ್ಯಾ ದೂತಾವಾಸ ಕಚೇರಿಯನ್ನೂ ತಕ್ಷಣವೇ ಮುಚ್ಚಬೇಕು ಎಂದು ಅಧ್ಯಕ್ಷ ಟ್ರಂಪ್ ಕಟ್ಟಪ್ಪಣೆ ಹೊರಡಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತಿಳಿಸಿದ್ದಾರೆ. ಅಮೆರಿಕವೊಂದರಲ್ಲಿಯೇ ರಷ್ಯಾದ 100 ಮಂದಿ ಅಧಿಕಾರಿಗಳು ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 48 ಮಂದಿ ಗುಪ್ತಚರ ಇಲಾಖೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ರಮದಿಂದ ರಷ್ಯಾ ಅಮೆರಿಕ ನೆಲದ ಮೇಲೆ ಗೂಢಚರ್ಯೆ ಮಾಡುತ್ತಿರುವುದರ ಮೇಲೆ ಪ್ರಹಾರ ನಡೆಸಿದಂತಾಗಿದೆ ಎಂದು ಸ್ಯಾಂಡರ್ಸ್ ತಿಳಿಸಿದ್ದಾರೆ.
ಭಾರತಕ್ಕೆ ಸಂದೇಶವಲ್ಲ: ರಷ್ಯಾ ವಿರುದ್ಧ ಪ್ರತೀಕಾರಾತ್ಮಕ ವಾಗಿಯೇ ಕ್ರಮ ಕೈಗೊಳ್ಳಲಾಗಿದೆ. ಆದರೆ ಭಾರತ ಇದರಿಂದ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದಿದೆ ಅಮೆರಿಕ. ಭಾರತದ ಜತೆಗೆ ಟ್ರಂಪ್ ಸರ್ಕಾರ ವಿಶೇಷ ಬಾಂಧವ್ಯ ಹೊಂದಿದೆ ಎಂದಿದ್ದಾರೆ ಹಿರಿಯ ಅಧಿಕಾರಿಯೊಬ್ಬರು.
ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಯಾಗಿರುವ ನಿಕ್ಕಿ ಹ್ಯಾಲೆ, ವಿಶ್ವಸಂಸ್ಥೆಯಲ್ಲಿರುವ ರಷ್ಯಾದ 12 ಗುಪ್ತಚರ ಏಜೆಂಟ್‌ಗಳು ರಹಸ್ಯವಾಗಿ ಕಾರ್ಯ ವೆಸಗುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯನ್ನು ಗುರಾಣಿಯನ್ನಾಗಿ ಬಳಸಿಕೊಂಡು ತನ್ನ ರಹಸ್ಯ ಕೆಲಸಗಳನ್ನು ಪೂರೈಸಲು ರಷ್ಯಾ ಮುಂದಾಗಿದೆ ಎಂದೂ ಆರೋಪಿಸಿದ್ದಾರೆ. ಇದೇ ವೇಳೆ, ಫ್ರಾನ್ಸ್ ಮತ್ತು ಜರ್ಮನಿ ತಲಾ ನಾಲ್ವರು ರಷ್ಯಾ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ. ಐರೋಪ್ಯ ಒಕ್ಕೂಟದ 14 ಪ್ರಾಂತ್ಯಗಳೂ ರಷ್ಯಾದ 30ಕ್ಕೂ ಅಧಿಕ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರ ಕೈಗೊಂಡಿವೆ.
ಶೀತಲ ಸಮರದ ಅವಧಿ
ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜಗತ್ತಿನ ರಾಷ್ಟ್ರಗಳೆಲ್ಲವೂ ಅಮೆರಿಕ ಮತ್ತು ರಷ್ಯಾ ಪರವಾಗಿದ್ದವು. 1950ರಿಂದ 1990ರ ವರೆಗೆ ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಪರಸ್ಪರ ರಾಜತಾಂತ್ರಿಕರ ಉಚ್ಚಾಟನೆ, ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ನಡೆಸಿಕೊಳ್ಳುತ್ತಿದ್ದವು. ಸೋವಿಯತ್ ಒಕ್ಕೂಟ ಛಿದ್ರವಾದ ಬಳಿಕ ಆ ಕಾಲಘಟ್ಟ ಸರಿದು ಹೋಯಿತು.
ಬಿಕ್ಕಟ್ಟೇನು?
ಬ್ರಿಟನ್‌ನ ಸ್ಯಾಲಿಸºರಿಯಲ್ಲಿ ರಷ್ಯಾದ ಗುಪ್ತಚರ ಏಜೆಂಟ್ ಸರ್ಗೆ ಸ್ಕ್ರಿಪಾಲ್ ಮತ್ತು ಪುತ್ರಿಗೆ ಅಪಾಯಕಾರಿಯಾದ ರಾಸಾಯನಿಕ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಸದ್ಯ ಅವರಿಬ್ಬರ ಸ್ಥಿತಿ ಗಂಭೀರವಾಗಿದ್ದು, ಸ್ಯಾಲಿಸºರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾದ ಬಳಿಕ ಕಳೆದ ವಾರ ಯು.ಕೆ. 23 ರಷ್ಯಾ ರಾಜತಾಂತ್ರಿಕರನ್ನು ಹೊರಹಾಕಿತ್ತು. ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ಪ್ರಕಾರ, ಬಿಕ್ಕಟ್ಟಿಗೆ ರಷ್ಯಾ ಕಾರಣ. ಆದರೆ ಪುಟಿನ್ ಆಡಳಿತ ಆರೋಪ ತಿರಸ್ಕರಿಸಿದೆ. ಸ್ಕ್ರಿಪಾಲ್ 2006ರಲ್ಲಿ ದೇಶದ್ರೋಹದ ಆರೋಪದಲ್ಲಿ 13 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ರಾಷ್ಟ್ರ ಎಷ್ಟು?
ಅಮೆರಿಕ 60
ಉಕ್ರೇನ್ 13
ಕೆನಡಾ 04
ಫ್ರಾನ್ಸ್, ಜರ್ಮನಿ,
ಪೋಲಂಡ್ ತಲಾ 4
ಚೆಕ್ ರಿಪಬ್ಲಿಕ್,
ಲಿಥುಯಾನಿಯಾ ತಲಾ 03
ಡೆನ್ಮಾರ್ಕ್, ಇಟಲಿ,
ನೆದರ್ಲೆಂಡ್ ತಲಾ 02
ಇಸ್ಟೋನಿಯಾ, ಕ್ರೊವೇಶ್ಯಾ,
ಫಿನ್ಲಂಡ್, ಲಾತ್ವಿಯಾ,
ರೊಮಾನಿಯಾ ತಲಾ 01
ಒಟ್ಟು 106