ಜೇವರ್ಗಿ: ಕಳೆದ ಕೆಲ ದಿನಗಳಿಂದ ಕೆಂಡದಂತಹ ಬಿಸಿಲಿಗೆ ಬೆಂಡಾಗಿದ್ದ ಜನರಿಗೆ ಸೋಮವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆ ತಂಪೆರೆಯಿತು. ಸೋಮವಾರ ಮಧ್ಯಾಹ್ನ 2.30 ರಿಂದ 3.30ರವರೆಗೆ ಸುಮಾರು ಒಂದು ಗಂಟೆ ಗುಡುಗು, ಗಾಳಿ ಮಿಶ್ರಿತ ಮಳೆ ಸುರಿದ್ದರಿಂದ ಯುಗಾದಿ ಅಮವಾಸ್ಯೆ ದಿನದಂದು ನಾಗರಿಕರಿಗೆ ತಂಪು ಸೂಸಿದಂತಾಗಿದೆ. ಮಧ್ಯಾಹ್ನದ ಸಮಯದಲ್ಲಿ ಯಾವುದೇ ಮುನ್ಸೂಚನೆ ಇರದೇ ಏಕಕಾಲಕ್ಕೆ ಮಳೆ ಆರಂಭವಾಯಿತು.
ಧಾರಾಕಾರ ಮಳೆ ಸುರಿದಿದ್ದರಿಂದ ಪಟ್ಟಣದ ಹಲವು ಬಡಾವಣೆಗಳಲ್ಲಿ ಚರಂಡಿಯಲ್ಲಿಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂತು. ಪಟ್ಟಣದ ಶಾಸ್ತ್ರೀ ಚೌಕ್ ಬಡಾವಣೆಯ ಕೆನರಾ ಬ್ಯಾಂಕ್ ಹತ್ತಿರ ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಗಲೀಜು ವಾತಾವರಣ ಸೃಷ್ಟಿಯಾಯಿತು. ಜೋಪಡಪಟ್ಟಿಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ.
ಅಲ್ಲಲ್ಲಿ ಚರಂಡಿಗಳು ಹೂಳು ತುಂಬಿರುವ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು. ಒಟ್ಟಾರೆಯಾಗಿ ಸೋಮವಾರ ಮಳೆ ಸುರಿದ್ದಿದ್ದರಿಂದ ಪಟ್ಟಣದಲ್ಲಿ ತಂಪಾದ ವಾತಾವರಣ ಸೃಷ್ಟಿಯಾಯಿತು. ಇದೇ ಪ್ರಥಮ ಬಾರಿಗೆ ಯುಗಾದಿ ಅಮವಾಸ್ಯೆ ದಿನದಂದು ಮಳೆಯಾಗಿರುವುದು ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ. ಅಕಾಲಿಕ ಮಳೆಯಿಂದ ರೈತರಿಗೆ ಭೂಮಿ ಹದಗೊಳಿಸಲು ರೈತರಿಗೆ ಅನುಕೂಲವಾಗಲಿದೆ.
ಯುಗಾದಿ ಹಬ್ಬದ ದಿನ ಹಾಗೂ ಹೊಸ ವರ್ಷವೆಂದು ನಂಬಿಕೊಂಡಿರುವ ಕೃಷಿಕರು ಮಂಗಳವಾರ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ. ಈ ಅಕಾಲಿಕ ಮಳೆಯಿಂದ ಬಿಸಿಲಿನ ತಾಪ ಕಡಿಮೆಯಾಗಿದೆ. ತಾಲೂಕಿನ ಕೋಳಕೂರ, ನರಿಬೋಳ, ಆಂದೋಲಾ, ಜನಿವಾರ, ಗೌನಳ್ಳಿ, ಹರವಾಳ, ರೇವನೂರ, ಕಟ್ಟಿಸಂಗಾವಿ, ಯನಗುಂಟಿ, ಮದರಿ, ರದ್ದೇವಾಡಗಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಳೆಯಾದ ಕುರಿತು ವರದಿಯಾಗಿದೆ.