Advertisement

ತಂಪೆರಗದ ಮಳೆ, ಅಲಲ್ಲಿ ಮಾತಿನ ಹೊಳೆ…

05:49 PM Jan 19, 2018 | |

“ಪೆನ್‌ ಹಿಡಿದ್ರೆ ರೈಟರ್‌, ಗನ್‌ ಹಿಡಿದ್ರೆ ಶೂಟರ್‌, ಅಖಾಡಕ್ಕೆ ಇಳಿದ್ರೆ ಫೈಟರ್‌…’ ಹೀಗೆ ಮಾಸ್‌ ಡೈಲಾಗ್‌ ಹರಿಬಿಟ್ಟು, ಬೆರಳೆಣಿಕೆಯಷ್ಟಿರುವ ಪುಂಡರನ್ನು ಹಿಗ್ಗಾಮುಗ್ಗಾ ಥಳಿಸುತ್ತಾನೆ ಪುರಂದರ ಅಲಿಯಾಸ್‌ ಪೋರ. ಅವನು ಹಾಗೆ ಎರ್ರಾಬಿರ್ರಿ ಹೊಡೆದಾಡೋದು ವಿದೇಶಿ ನೆಲದಲ್ಲಿ! ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಸಂಬಂಧವಿಲ್ಲ. ಹಾಗೇ, ಚಿತ್ರದ ಪೋಸ್ಟರ್‌ನಲ್ಲಿ ಹಾಕಿರುವಂತೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ, ಹತ್ಯೆಗೆ ಸಂಬಂಧಿಸಿದಂತೆ ಸುದೀರ್ಘ‌ ಕಥೆ ಸಾಗುತ್ತದೆ ಅಂದುಕೊಂಡರೆ ಆ ಊಹೆ ತಪ್ಪು.

Advertisement

ತೆರೆಯ ಮೇಲೆ ಅದು ಕೇವಲ ಶೇ.10 ರಷ್ಟು ಮಾತ್ರ ಕಾಣಸಿಗುತ್ತದೆ. ಅದು ಬಿಟ್ಟರೆ, ಕಥೆ ಬೀದರ್‌ಗೆ ಶಿಫ್ಟ್ ಆಗುತ್ತೆ. ಚಿತ್ರದ ಒಂದೇ ಒಂದು ಪ್ಲಸ್‌ ಅನ್ನುವುದಾದರೆ, ಅಮೆರಿಕವನ್ನು ಅಂದವಾಗಿ ತೋರಿಸಿರುವುದು. ಅದನ್ನು ಹೊರತುಪಡಿಸಿದರೆ, ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಕಥೆಯ ಎಳೆ ಚೆನ್ನಾಗಿದೆ. ಆದರೆ, ಅದರ ನಿರೂಪಣೆಯಲ್ಲಿ ಸಾಕಷ್ಟು ಕೊರತೆ ಇದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇಟ್ಟುಕೊಂಡಿದ್ದರೆ ಬಹುಶಃ ಒಂದೊಳ್ಳೆಯ ಚಿತ್ರವಾಗುವ ಸಾಧ್ಯತೆ ಇತ್ತು.

ಅಮೆರಿಕದಲ್ಲಿ ನಡೆಯುವ ಕಥೆ ರೋಚಕವೆನಿಸದಿದ್ದರೂ, ಅಲ್ಲಿನ ದೃಶ್ಯರೂಪ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಹೊರತುಪಡಿಸಿದರೆ, ದ್ವಿತಿಯಾರ್ಧ ಕಥೆ ಎಲ್ಲಿಂದೆಲ್ಲಿಗೋ ಸಾಗುತ್ತೆ. ಅಲ್ಲೇನಾಗುತ್ತೆ ಅಂದುಕೊಳ್ಳುವ ಹೊತ್ತಿಗೆ ನೋಡುಗನ ಸಹನೆ ಮೀರಿರುತ್ತೆ. ಸಾಮಾನ್ಯವಾಗಿ ಆರಂಭದಲ್ಲೇ ಹೀರೋ ಬಿಲ್ಡಪ್‌ ಕೊಡುವುದನ್ನ ಬಹುತೇಕ ಚಿತ್ರಗಳಲ್ಲಿ ಕಾಣಬಹುದು. ಆದರೆ, ಇದು ಅದರ ವಿರುದ್ಧವಾಗಿದೆ. ಕ್ಲೈಮ್ಯಾಕ್ಸ್‌ ಹಂತದಲ್ಲಿ ಹೀರೋ ಬಿಲ್ಡಪ್‌ ಕೊಡುತ್ತಾನೆ.

ಅದು ಹೇಗಿದೆ ಎಂಬ ಕುತೂಹಲವಿದ್ದರೆ, ಸಿನಿಮಾ ನೋಡಲ್ಲಡ್ಡಿಯಿಲ್ಲ. ಚಿತ್ರದಲ್ಲಿ ಹಲವು ಎಡವಟ್ಟುಗಳು ಕಾಣಸಿಗುತ್ತಾ ಹೋಗುತ್ತವೆ. ಒಂದು ಗೃಹಮಂತ್ರಿ ಪಾತ್ರ ತುಂಬಾ ಸಿಲ್ಲಿಯಾಗಿ ಕಾಣುತ್ತೆ. ಇನ್ನು, ರಾತ್ರಿ ಕುಡಿದು ಪಾರ್ಟಿ ಮಾಡಿ, ಎಲ್ಲೋ ಬಿದ್ದವರು, ಬೆಳಗಾದ ಮೇಲೂ ಅದೇ ಗುಂಗಲ್ಲಿ ತೂರಾಡಿಕೊಂಡು ಮಾತಾಡುವ ಸನ್ನಿವೇಶಗಳೂ ನಗೆಪಾಟಿಲಿಗೆ ಈಡಾಗುತ್ತವೆ. ಆರಂಭದಲ್ಲಿ ವಿದೇಶಿ ನೆಲದಲ್ಲಿ ಗಂಭೀರವಾಗಿ ಸಾಗುವ ಕಥೆ, ಯಾವಾಗ ಬೀದರ್‌ ಕಡೆಗೆ ತಿರುಗುತ್ತೋ,

ನೋಡುಗ ಮೆಲ್ಲನೆ ಸೀಟಿಗೆ ಒರಗುವಂತಾಗುವಷ್ಟರಲ್ಲೇ, ಹಾಡೊಂದು ಕಾಣಿಸಿಕೊಂಡು ಒಂದಷ್ಟು ರೀಫ್ರೆಶ್‌ ಮೂಡ್‌ಗೆ ತರುತ್ತದೆ. ಹಾಡು ಮುಗಿಯುತ್ತಿದ್ದಂತೆಯೇ ಮತ್ತದೇ ಟ್ರಾಕ್‌ಗೆ ಸಾಗುವ ಕಥೆ, ಕ್ಲೈಮ್ಯಾಕ್ಸ್‌ ಹಂತದಲ್ಲಿ ಮಾತ್ರ ಒಂದಷ್ಟು ತಿರುವು ಪಡೆದುಕೊಳ್ಳುತ್ತೆ. ಕೊನೆಯ ಹತ್ತು ನಿಮಿಷ ಸಣ್ಣದ್ದೊಂದು ಕುತೂಹಲ ಹರಿಬಿಟ್ಟು, ನೋಡುಗರನ್ನು ಹಿಡಿದಿಟ್ಟುಕೊಳ್ಳವಲ್ಲಿ ಯಶಸ್ವಿಯಾಗುತ್ತೆ. ಆ ಕುತೂಹಲಕ್ಕಾದರೂ ಅಲ್ಲಿ ಸುರಿಯೋ “ಮಳೆ’ಯಲ್ಲಿ ಮಿಂದೇಳಲ್ಲಡ್ಡಿಯಿಲ್ಲ.

Advertisement

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗು ಹತ್ಯೆಗೆ ಸಂಬಂಧಿಸಿದಂತೆ, ವರದಿ ಮಾಡಲು ಪತ್ರಕರ್ತ ಪುರಂದರ (ಜನಾರ್ದನ್‌) ಅಮೆರಿಕಕ್ಕೆ ಹೋಗುತ್ತಾನೆ. ವರದಿಗಾರಿಕೆ ಜತೆಗೆ ಅಲ್ಲಿನ ಗ್ಯಾಂಗ್‌ಸ್ಟರ್‌ ಜತೆ ಹೊಡೆದಾಡುತ್ತಾನೆ. ಕೊನೆಗೆ ಅಲ್ಲಿ ಓದಲು ಹೋಗಿ ಅಪಾಯಕ್ಕೆ ಸಿಲುಕಿದ ಕನ್ನಡಿಗರನ್ನೂ ರಕ್ಷಿಸುತ್ತಾನೆ. ಅಷ್ಟೇ ಅಲ್ಲ, ಆ ಪೋರ ಕನ್ನಡದ ಹುಡುಗಿಯೊಬ್ಬಳ ಹೃದಯವನ್ನೂ ಕದಿಯುತ್ತಾನೆ.

ಅವನ ಕೆಲಸ ಮುಗಿದ ಬಳಿಕ ಸ್ವದೇಶಕ್ಕೆ ಮರಳುತ್ತಾನೆ. ಅವನು ಇಷ್ಟಪಟ್ಟ ಆ ಹುಡುಗಿ ಸಿಗುತ್ತಾಳ್ಳೋ ಇಲ್ಲವೋ ಅನ್ನೋದೇ ಕಥೆ. ಜನಾರ್ದನ್‌ ಅಭಿನಯದಲ್ಲಿ ಪರವಾಗಿಲ್ಲ. ಡೈಲಾಗ್‌ ಡಿಲವರಿಯಲ್ಲಿನ್ನೂ ಗತ್ತು ತೋರಲು ಸಾಧ್ಯವಿತ್ತು. ಹೊಡೆದಾಟದಲ್ಲಿ ಹರಸಾಹಸ ಮಾಡಿದ್ದಾರೆ. ಪ್ರೀತಿ ಮಾಡುವಲ್ಲಿ ಎಲ್ಲವನ್ನೂ ಮೀರಿಸಿದ್ದಾರೆ. ವ್ಯಾಲರಿ ಅಂದದಲ್ಲಷ್ಟೇ ಅಲ್ಲ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ಮರ ಸುತ್ತುವುದನ್ನು ಹೊರತುಪಡಿಸಿದರೆ, ಸೆಂಟಿಮೆಂಟ್‌ ದೃಶ್ಯದಲ್ಲಿ ಗಮನ ಸೆಳೆಯುತ್ತಾರೆ. ಗಿರೀಶ್‌ ಕಾರ್ನಾಡ್‌ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ತಬಲಾನಾಣಿ, ಮೋಹನ್‌ಜುನೇಜ, ಲಕ್ಕಿಶಂಕರ್‌ ಸೇರಿದಂತೆ ಇತರೆ ಪಾತ್ರಗಳು ಆಗಾಗ ಇಷ್ಟವಾಗುತ್ತವಷ್ಟೇ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಇಂದ್ರಸೇನ ಅವರ ಸಂಗೀತದಲ್ಲಿ ಎರಡು ಹಾಡು ಪರವಾಗಿಲ್ಲ. ನಿರಂಜನ್‌ಬಾಬು ಛಾಯಾಗ್ರಹಣದಲ್ಲಿ ಅಮೆರಿಕದ ಸುಂದರ ತಾಣ ಮತ್ತು ಬೀದರ್‌ ಕೋಟೆಯ ಸೊಬಗಿದೆ.

ಚಿತ್ರ: ನೀನಿಲ್ಲದ ಮಳೆ
ನಿರ್ಮಾಣ: ಶೈಲೇಂದ್ರ ಕೆ.ಬೆಲ್ದಾಳ್‌, ದೇವರಾಜ್‌ ಶಿಡ್ಲಘಟ್ಟ, ಜನಾರ್ದನ್‌, ಆರ್‌.
ನಿರ್ದೇಶನ: ಜನಾರ್ದನ್‌, ಆರ್‌.
ತಾರಾಗಣ: ಜನಾರ್ದನ್‌, ವ್ಯಾಲರಿ, ಗಿರೀಶ್‌ ಕಾರ್ನಾಡ್‌, ತಬಲಾನಾಣಿ, ಲಕ್ಕಿಶಂಕರ್‌, ಮೋಹನ್‌ ಜುನೇಜಾ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next