Advertisement

ಶೀತಲ ಘಟಕ ಪ್ರಸ್ತಾವನೆ ಕಡತವೂ ನಾಪತ್ತೆ!

04:47 PM Dec 21, 2017 | Team Udayavani |

ಗದಗ: ಕಳೆದ ನಾಲ್ಕು ದಿನಗಳಿಂದ ಉದಯವಾಣಿಯಲ್ಲಿ ಪ್ರಕಟಗೊಳ್ಳುತ್ತಿರುವ ಹೂವಿನಂಥ ಸುದ್ದಿ ಸರಣಿ ವರದಿಯಿಂದ
ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಶೀತಲ ಘಟಕ ಪ್ರಸ್ತಾವನೆ ಕಡತಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆದಿದೆಯಾದರೂ ಕಡತ
ಇನ್ನೂ ಸಿಕ್ಕಿಲ್ಲ. ಲಕ್ಕುಂಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಎಸ್‌ಜಿಎಸ್‌ವೈ ಯೋಜನೆಯಡಿ 15 ಲಕ್ಷ ರೂ. ವೆಚ್ಚದಡಿ ಈಗಾಗಲೇ ಹೂ ಮಾರಾಟ ಮಳಿಗೆ ಮತ್ತು ಮಾರುಕಟ್ಟೆ ನಿರ್ಮಿಸಲಾಗಿದೆ. ಮಾರುಕಟ್ಟೆ ಸ್ಥಳ ಶೌಚ ತಾಣವಾಗಿ ಮಾರ್ಪಟ್ಟಿರುವ ಬಗ್ಗೆ  ಜನಪ್ರತಿನಿಧಿಗಳು ಕಣ್ತೆರೆಯಬೇಕಿದೆ. 

Advertisement

ಹೂ ಮಾರುಕಟ್ಟೆಯಿಂದ ಇಲ್ಲ ಪ್ರಯೋಜನ: ಲಕ್ಷಾಂತರ ರೂ. ಹಣ ಖರ್ಚು ಮಾಡಿ ಹೂ ಮಾರಾಟಗಾರರ ಮಳಿಗೆ ಹಾಗೂ  ಮಾರುಕಟ್ಟೆ ನಿರ್ಮಿಸುವಾಗ ಜಿಲ್ಲಾ ಪಂಚಾಯತ್‌ ಆಗಲಿ, ಗ್ರಾಮ ಪಂಚಾಯತ್‌ ಆಗಲಿ ಅಥವಾ ಸಂಬಂಧಿಸಿದ ಇಲಾಖೆಯಾಗಲಿ ಹೂ
ಬೆಳೆಗಾರರನ್ನು ಒಂದು ಮಾತೂ ಕೇಳಿಲ್ಲ. ಹಣ ಖರ್ಚಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಮಾರುಕಟ್ಟೆ ಸದ್ಯ ನಿಷ್ಪ್ರಯೋಜಕವೇ ಸರಿ. ಕಟ್ಟಿಸಿದ ತಕ್ಷಣ ಅದನ್ನು ನಿರ್ವಹಿಸುವ ಹೊಣೆಯನ್ನು ಅಧಿಕಾರಿ ವರ್ಗಕ್ಕೋ, ಸ್ಥಳೀಯ ಆಡಳಿತಕ್ಕೋ ಅಥವಾ ಸ್ಥಳೀಯರಿಗೋ
ನೀಡಿದ್ದರೆ ಬಹುಶಃ ಕಟ್ಟಡ ಹಾಳಾಗುತ್ತಿರಲಿಲ್ಲ. ಈಗದು ಅಕ್ಷರಶಃ ಶೌಚತಾಣವಾಗಿದೆ. ಅಕ್ರಮ ದಾಸ್ತಾನು ಕೇಂದ್ರವಾಗಿದೆ ಎಂಬುದು
ಸ್ಥಳೀಯರ ಆರೋಪ. 

ಇದರಿಂದ ಯಾವುದೇ ಪ್ರಯೋಜನವಿಲ್ಲ. ನಿತ್ಯ ಬಳಸಿದ್ದರೆ ಜನರಲ್ಲೂ ಜಾಗೃತಿ ಬರುತ್ತಿತ್ತು. ಕಟ್ಟಡ ಹಾಳಾಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅದನ್ನು ಹೂ ಬೆಳೆಗಾರರ ಸಂಘದ ಸುಪರ್ಧಿಗೆ ಕೊಟ್ಟರೆ ಉತ್ತಮವಾಗಿ ನಿಭಾಯಿಸಬಹುದು. ಮಳಿಗೆಗಳನ್ನು ಬಾಡಿಗೆ ಕೊಡುವುದರಿಂದ ಆದಾಯವೂ ಬರುತ್ತದೆ. ಬಾಡಿಗೆ ಕಟ್ಟುವವರೂ ಸಹ ಸುತ್ತಮುತ್ತಲಿನ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಲು
ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.

ಗ್ರಾಮೀಣಾಭಿವೃದ್ಧಿ ಸಚಿವರು ಗಮನಿಸಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಅವರ ತವರು ಜಿಲ್ಲೆ ಗದಗ. ಹಾಗಾಗಿ ಜಿಲ್ಲಾ ಉಸ್ತುವಾರಿಯೂ ಅವರದೇ. ರಾಜ್ಯವನ್ನೇ ಬಯಲು ಬಹಿರ್ದೆಸೆ ಮುಕ್ತ ಮಾಡುತ್ತೇನೆ ಎಂದು ಹೊರಟ
ಸಚಿವರಿಗೆ ತವರು ಜಿಲ್ಲೆಯನ್ನೇ ಅದೂ ಜಿಲ್ಲಾ ಕೇಂದ್ರಕ್ಕೆ ಅಣತಿ ದೂರದಲ್ಲಿರುವ ಲಕ್ಕುಂಡಿ ಗ್ರಾಮವನ್ನು ಬಯಲು ಬಹಿರ್ದೆಸೆ
ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಸಚಿವರು ಈ ನಿಟ್ಟಿನತ್ತ ಗಮನ ಹರಿಸಲಿ ಎಂಬುದು ಪ್ರಜ್ಞಾವಂತರ ಒತ್ತಾಯ.

ಭ್ರಷ್ಟಾಚಾರದ ಶಂಕೆ
ಸರ್ಕಾರದೊಂದಿಗೆ ವ್ಯವಹರಿಸಿದ ಕಾಗದ ಪತ್ರಗಳೇ ಕಣ್ಮರೆಯಾಗುವಷ್ಟು ಜಿಲ್ಲೆಯ ಅಧಿಕಾರಿಗಳು ಬೇಜವಾಬ್ದಾರಿಯಾಗಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಕಡತಗಳ ಕಣ್ಮರೆ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ.  ಲಕ್ಕುಂಡಿಯಲ್ಲಿ ಪುಷ್ಪ ಶೀತಲ ಘಟಕದ ನೂತನ ಪ್ರಸ್ತಾವನೆಯೊಂದನ್ನು ಕೂಡಲೇ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸುವ
ಕೆಲಸವಾಗಬೇಕು. ಜೊತೆಗೆ ಕಡತಗಳ ಕಣ್ಮರೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮವೂ  ಬಸವರಾಜ ಸೂಳಿಭಾವಿ, ಪ್ರಗತಿಪರ ಚಿಂತಕ, ಗದಗ.

Advertisement

ಹೂ ಬೆಳೆಗಾರರು ಒಗ್ಗಟ್ಟಾಗಬೇಕಿದೆ
ನಮಗೆ ಹೂ ಮಾರಾಟ ಮಳಿಗೆ ಹಾಗೂ ಮಾರುಕಟ್ಟೆಗಿಂತ ಶೀತಲ ಘಟಕ ನಿರ್ಮಾಣವಾದರೆ ಹೆಚ್ಚು ಅನುಕೂಲ. ಹೂ ಬೆಳೆಗಾರರಲ್ಲಿರುವ ಭಿನ್ನಾಭಿಪ್ರಾಯಗಳಿಂದ ಲಕ್ಷಾಂತರ ರೂ. ಮೌಲ್ಯದ ಸರ್ಕಾರದ ಆಸ್ತಿ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಹೂ ಬೆಳೆಗಾರರೂ ಒಗ್ಗಟ್ಟಾಗಬೇಕಿದೆ. ಜಿಲ್ಲಾಡಳಿತವೂ ನೈಜ ಕಾಳಜಿ ತೋರಬೇಕಿದೆ.  ಸುರೇಶ ಕವಲೂರು, ಹೂ ಬೆಳೆಗಾರ, ಲಕ್ಕುಂಡಿ.

ಬಸವರಾಜ ಕರುಗಲ್‌

Advertisement

Udayavani is now on Telegram. Click here to join our channel and stay updated with the latest news.

Next