Advertisement

ಕರಾವಳಿಯಲ್ಲಿ ಚಳಿ ದೂರ; ಸೆಕೆ ಆರಂಭ

01:07 AM Jan 09, 2022 | Team Udayavani |

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಚಳಿಗಾಲದ ವಾತಾವರಣ ಕಡಿಮೆಯಾಗಿ ಸೆಕೆಯ ಅನುಭವವಾಗುತ್ತಿದೆ.

Advertisement

ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಇದು ರಾಜ್ಯದಲ್ಲಿಯೇ ಅತ್ಯಧಿಕ. ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಕನಿಷ್ಠ ಎಂದರೆ 15.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಉಡುಪಿಯಲ್ಲಿ 32.1 ಡಿಗ್ರಿ, ಉತ್ತರ ಕನ್ನಡದಲ್ಲಿ 31.6, ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ 30.0 ಡಿಗ್ರಿ, ಶಿವಮೊಗ್ಗ 30.8 ಡಿಗ್ರಿ, ಕೊಡಗು 28.4 ಹಾಸನ 28.9 ಡಿಗ್ರಿ ಸೆಲ್ಸಿಯಸ್ ಇತ್ತು. ರಾಜಧಾನಿ ಬೆಂಗಳೂರು ನಗರದಲ್ಲಿ 28.8 ಡಿಗ್ರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27.9 ಡಿಗ್ರಿ ಉಷ್ಣಾಂಶ ಇತ್ತು.

ಈ ವರ್ಷ ಚಳಿಗಾಲದ ಅವಧಿ ಕೇವಲ 16 ದಿನ ಮಾತ್ರ ಇತ್ತು. ಕಳೆದ1 ವಾರದಿಂದೀಚೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಚಳಿ ದೂರವಾಗಿದ್ದು, ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆ ಆಗುತ್ತಿದೆ. ಮುಂದಿನ ಮಾರ್ಚ್‌ 15 ರ ತನಕವೂ ಉಷ್ಣಾಂಶದ ಪ್ರಮಾಣವು ಏರುಮುಖವಾಗಿ ಸಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಶನಿವಾರ ರಾಜ್ಯದ ಶೇ. 70ರಷ್ಟು ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆ. ಇತ್ತು. ಚಾಮರಾಜನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ 15ರಿಂದ 17 ಡಿಗ್ರಿ ಉಷ್ಣಾಂಶವಿತ್ತು.

ರಾಜ್ಯದ ಶೇ. 91ರಷ್ಟು ಭೌಗೋಳಿಕ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶವು 28ರಿಂದ 32 ಡಿಗ್ರಿ ಸೆಲ್ಸಿಯಸ್ ಇತ್ತು. ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ 33ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.

Advertisement

ಇದನ್ನೂ ಓದಿ:ಹಿಮವರ್ಷ: ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೂ ಅಡ್ಡಿ

ಕಡಿಮೆ ಮಳೆ
ಮಳೆಯ ಲೆಕ್ಕಾಚಾರ ಗಮನಿಸಿದರೆ, ಈ ವರ್ಷ ಡಿಸೆಂಬರ್‌ ತನಕವೂ ಮಳೆ ಬಂದಿದ್ದರೂ, ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 400 ಸೆ.ಮೀ. ಬರಬೇಕಾಗಿದ್ದರೂ, ಈ ವರ್ಷ 396.3 ಸೆ.ಮೀ. ಮಳೆ ಮಾತ್ರ ಬಂದಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.

ಸೆಕೆ ಆರಂಭ
ಪ್ರಸ್ತುತ ವರ್ಷ ಚಳಿಗಾಲದ ಅವಧಿ ಕಡಿಮೆ. ಹಾಗಾಗಿ ಸೆಕೆಗಾಲ ಬೇಗನೆ ಆರಂಭವಾಗಿದೆ. ಈ ವರ್ಷ ಉಷ್ಣಾಂಶವು ಕನಿಷ್ಠ ಮಟ್ಟಕ್ಕೆ ಹೋಗಲೇ ಇಲ್ಲ; ಇನ್ನು ಕಡಿಮೆ ಆಗುವ ಸಾಧ್ಯತೆ ಇಲ್ಲ. ಏರುತ್ತಲೇ ಹೋಗುತ್ತದೆ.
– ರಾಜೇಗೌಡ,
ಹವಾಮಾನ ತಜ್ಞ , ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next