Advertisement
ಪುಟ್ಟ ಭೂತ ಬಂಗಲೆಯಂತಿದ್ದ ಆ ಅಂಗಡಿಯ ಸಂದಿನಲ್ಲಿ ಆವತ್ತು ಸಂಜೆ ಒಂದಷ್ಟು ಹುಡುಗಿಯರು ಬೆಲ್ಲದ ಅಂಟಿಗೆ ಮುತ್ತುವ ಇರುವೆಗಳಂತೆ ಮುತ್ತಿದ್ದರು. ಎಲ್ಲಿ ನೋಡಿದರೂ ಚೆಂದುಳ್ಳಿ ಹುಡುಗಿಯರ ಬಳೆ ಸದ್ದು, ಕಾಲ್ಗೆಜ್ಜೆಯ ಸಪ್ಪಳ… “ಇದೇನಿದು? ಅಲ್ಲೇನಿದೆ ರಹಸ್ಯವಿಶ್ವ?’ ಅಂತ ನೋಡಿದಾಗ ಇನ್ನೂ ಒಂದಷ್ಟು ಹುಡುಗಿಯರು ನನ್ನನ್ನು ದೂಡಿ, ಅಂಗಡಿಯ ಅಜ್ಞಾತ ಕತ್ತಲೆಯಲ್ಲಿ ಮರೆಯಾಗಿಬಿಟ್ಟರು. ನನ್ನನ್ನೇ ದೂಡಿಕೊಂಡು ಹೋಗ್ತಾರಲ್ಲ… ಈ ಹುಡುಗಿಯರದ್ದು ಯಾಕೋ ಅತಿ ಆಯ್ತು, ಅಷ್ಟಕ್ಕೂ ಏನು ಮಾಡ್ತಾರೆ ಇವರೆಲ್ಲ ಅಂತ ನೋಡೋಣವೆಂದು ಅಲ್ಲಿ ಹೋಗಿ ನೋಡಿದರೆ… ಧ್ವನಿ ಕೇಳಿಸಿತು…
Related Articles
ಒಂದು ಕಾಲದಲ್ಲಿ ಹಲವರ ಪಾಲಿಗೆ ದೇವರಂತಿದ್ದ ಕಾಯಿನ್ ಫೋನ್ ಬೂತ್‌ಗಳು ಈಗ ಭೂತಕಾಲದ ಸುರಂಗ ಹೊಕ್ಕಿದ್ದರೂ, ಅಲ್ಲಲ್ಲಿ ಅಳಿದುಳಿದ ಹಳದಿ ಮಂಡೆಯ ಫೋನುಗಳು ಮೊಮ್ಮಕ್ಕಳ ಪಿಸುಮಾತಿಗಾಗಿ ಹಂಬಲಿಸುವ ಅಜ್ಜಿಯಂತೆ ಅಂಗಡಿಯ ಧೂಳಿನಲ್ಲಿ ಯಾರ ಕಣ್ಣಿಗೂ ಕಾಣದೇ ತೆಪ್ಪಗಿವೆ. ಆದರೆ, ಕೆಲವು ಕಡೆ ಇನ್ನೂ ಈ ಕಾಯಿನ್ ಬೂತ್‌ಗಳನ್ನೇ ಅವಲಂಬಿಸಿರುವ ಬೂತಾರಾಧಕರ ಸಂಖ್ಯೆ ತಗ್ಗಿಲ್ಲ. ದೇವರ ಡಬ್ಬಿಗೆ ಕಾಣಿಕೆ ಹಾಕಿದ ಕೂಡಲೇ ಸದ್ದೇನೋ ಕ್ಷಣದಲ್ಲೇ ಬಂದುಬಿಡಬಹುದು. ಅಂದಹಾಗೆ, ಅಲ್ಲಿ ದೇವರು ಮಾತಾಡುವುದಿಲ್ಲ. ಆದರೆ, ನಮ್ಮ ಕಾಯಿನ್‌ಫೋನ್ ಹಾಗಲ್ಲ, ಇಲ್ಲಿ ಒಂದು ರೂಪಾಯಿ ಹಾಕಿದ ತಕ್ಷಣವೇ ದೇವವಾಣಿ ಕೇಳಿಬಿಡುತ್ತದೆ! ಮತ್ತೆ ಒಂದು ರೂಪಾಯಿ ಹಾಕಿದರೆ ದೇವವಾಣಿ ಮುಂದುವರಿಯುತ್ತದೆ. ಹಾಗಾಗಿ, ಇದೇ ನಮ್ಮ ಮಾತಿನ ದೇವರು ಎನ್ನುವುದು ಈಗಲೂ ಆ ದೇವರನ್ನು ನಂಬಿ ಕೂತ ಭಕ್ತರ ಅನಿಸಿಕೆ.
Advertisement
ಅದು ಮಾತಿನ ಪಾಠಶಾಲೆಈಗ ಕಾಯಿನ್‌ಫೋನ್‌ಗಳ ಸಂತತಿ ಮೊದಲಿನಂತಿಲ್ಲ. ಆದರೆ, ಇದು ನಮಗೆ ಮಾತನ್ನು, ತಾಳ್ಮೆಯನ್ನು ಒಂದೊಂದು ನಾಣ್ಯದ ಬೆಲೆಯನ್ನೂ, ಒಂದೊಂದು ನಿಮಿಷದ ಮೌಲ್ಯವನ್ನು, ಮಾತಿನ ಮಹತ್ವವನ್ನು ಕಲಿಸಿದ ಪುಟ್ಟ ಮಾತಿನ ಪಾಠಶಾಲೆ. ಅಮ್ಮ ತನ್ನ ಮಗ ಈ ಸಲ ಪಾಸ್ ಆದ ಎನ್ನುವ ಖುಷಿಯ ಖಬರು ಹೇಳಿದ್ದು, ಅವನು ಅವಳಿಗೆ ಮೊದಲು ಭೇಟಿಯಾಗುವಂತೆ ವಿನಂತಿಸಿದ್ದು, “ನೀನು ನಾಳೆಯೇ ಬಾ… ಹುಡುಗಿ ನೋಡೋಕೆ ಬರ್ತಾ ಇದ್ದಾರೆ, ಮಾರಾಯ್ತಿ’ ಎನ್ನುವ ಧ್ವನಿಗೆ ಅವಳಲ್ಲಿ ಹೊಸ ಭರವಸೆ ತುಂಬಿಸಿದ್ದು, “ಮನೇಲಿ ನೆಟ್ಟ ಗಿಡದಲ್ಲಿ ಇವತ್ತು ಹಣ್ಣಾಗಿದೆ’ ಎನ್ನುವ ಸುವಾರ್ತೆಯನ್ನು ಕಿವಿಯ ಅಂಗಳಕ್ಕೆ ತಲುಪಿಸಿದ್ದು ಈ ಪುಟ್ಟ ಮಾತಿನ ಡಬ್ಬಿಯೇ. ಕಾಲೇಜಿನ ಪಿನ್ಸಿಪಾಲ್‌ಗೆ ಸ್ವರ ಬದಲಿಸಿ ಕಾಲ್ ಮಾಡಿ, ನಾನು ಇಂಥವನ ಅಪ್ಪನೆಂದೂ, “ನಮಗೆ ನಾಳೆ ಕಾಲೇಜಿಗೆ ಪೇರೆಂಟ್ಸ್ ಮೀಟಿಂಗ್‌ಗೆ ಬರಲಾಗುವುದಿಲ್ಲ’ ಎಂದೂ ಹೇಳಿ ಪ್ರಾಂಶುಪಾಲರನ್ನು ಕೆಲ ಹುಡುಗರು ಬಕ್ರ ಮಾಡುತ್ತಿದ್ದುದೂ ಇದೇ ಬೂತ್‌ನಿಂದಲೇ. ಇನ್ನೊಮ್ಮೆ ಪ್ರಾಂಶುಪಾಲರು ಮರಳಿ ಅದೇ ನಂಬರ್‌ಗೆ ಕರೆ ಮಾಡಿದಾಗ, “ಯಾರ್ರೀ ಅದು, ಇದು ಪಬ್ಲಿಕ್ ಕಾಯಿನ್ ಬೂತು’ ಎಂದು ಅಂಗಡಿಯವನು ಪ್ರಾಂಶುಪಾಲರಿಗೆ ದಬಾಯಿಸುತ್ತಿದ್ದ. ಈಗ ಮೊಬೈಲ್ ಬಂದಮೇಲೆಯೇ ಆ ಪ್ರಾಂಶುಪಾಲರು ತಲೆ ಕೆರೆದುಕೊಳ್ಳುವುದನ್ನು ಬಿಟ್ಟಿದ್ದು! ಮೊನ್ನೆ, ಬೂತ್ ಬಂಗಲೆಯಂತಿದ್ದ ಆ ಅಂಗಡಿಗೆ ಮತ್ತೂಮ್ಮೆ ಹೋಗಿದ್ದೆ. ಅಲ್ಲಿ ನೋಡಿದಾಗ ಕೆಲ ಕಾಯಿನ್‌ಫೋನ್‌ಗಳು ಕಾಣೆಯಾಗಿ, ಒಂದೇ ಒಂದು ಕಾಯಿನ್ ಫೋನ್ ಮಾತ್ರವೇ ಅಳಿದುಳಿದಿತ್ತು. ಆ ಕಾಯಿನ್ ಫೋನ್‌ನಲ್ಲಿ ಹುಡುಗಿಯೊಬ್ಬಳು ಕೈಯಲ್ಲಿ ಐದಾರು ಕಾಯಿನ್ ಇಟ್ಟುಕೊಂಡು ಮಾತಾಡುತ್ತಿದ್ದಳು. ಹಿಂದಿನಂತೆ ಆ ಫೋನ್‌ಗಾಗಿ ಸಾಲುಗಟ್ಟಿ ನಿಲ್ಲುವ ಹುಡುಗಿಯರು ಕಾಣಿಸಲಿಲ್ಲ. ಈಗ ನಮ್ಮ ಕೈಗೆ ದೊಡ್ಡ ದೊಡ್ಡ ಮೊಬೈಲ್ ಫೋನುಗಳು ಬಂದಿವೆ, ಮಾತು ಇಲ್ಲಿ ಸಂತೆಯಾಗಿದೆ, ದೈನಂದಿನ ಧಾರಾವಾಹಿಯಂತೆ ಸಪ್ಪೆಯಾಗಿದೆ, ಕಾಯಿನ್ ಫೋನು ಸಣ್ಣ ಪೆಪ್ಪರ್‌ಮಿಂಟಿನಂಥ ಸಿಹಿ ಮಾತು ಕೊಟ್ಟರೂ, ಅದರ ಸ್ವಾದ ದೊಡ್ಡದಿತ್ತು. ಆದರೆ, ಮೊಬೈಲ್‌ನಲ್ಲಿ ಮಾತೆಂಬ ಮಿಠಾಯಿಯ ಗಾತ್ರ ಜಾಸ್ತಿಯಾಗಿದೆ, ಸ್ವಾದ ಕಡಿಮೆಯಾಗಿದೆ ಅಂತ ನಿಮಗೆ ಅನ್ನಿಸುತ್ತಿಲ್ವಾ? ಹಿಂದೆ ಪತ್ರ ಬರೆಯುವವರಿಗೆ ಈಗ ಧೂಳು ತಿನ್ನುತ್ತಾ ನಿಂತಿರುವ ಅಂಚೆ ಡಬ್ಬ ಕಂಡರೆ ಎಷ್ಟು ಖುಷಿಯಾಗುತ್ತದೋ, ಹಾಗೆಯೇ ಕಾಯಿನ್ ಬೂತ್ ಬಳಸುತ್ತಿದ್ದವರಿಗೆ ಎಲ್ಲೋ ಒಂದು ಮೂಲೆಯಲ್ಲಿ ಕಾಯಿನ್ ಫೋನ್ ಕಂಡರೆ ಒಮ್ಮೆ ಫ್ಲಾಶ್ ಬ್ಯಾಕ್ ಎಲ್ಲಾ ಕಣ್ಣಲ್ಲಿ ತೆರೆಕಂಡು, ಮನಸ್ಸು ಥ್ರಿಲ್ ಆಗಿ ಕುಣಿಯುತ್ತದೆ. ಇದೆಲ್ಲ ಬೂತ್‌ನ ಮಹಿಮೆ! ಅವಳು ಪ್ರತಿ ಸಂಜೆ ಹಲೋ ಅಂದಾಗ…
ಅವಳು ಪ್ರತಿ ಸಂಜೆಯೂ ಹಾಸ್ಟೆಲ್‌ನ ಕಾಯಿನ್ ಬೂತ್‌ನಿಂದ ಕರೆ ಮಾಡುತ್ತಿದ್ದಳು. ಬರೀ ಐದೇ ಐದು ಕಾಯಿನ್ ಇಟ್ಟುಕೊಂಡು ಮಾತಾಡುತ್ತಿದ್ದ ಅವಳ ಆ ಸಂಧ್ಯಾರಾಗದ ಐದು ನಿಮಿಷಕ್ಕಾಗಿ ದಿನವಿಡೀ ಕಾಯುತ್ತಿದ್ದೆ, ಆಕೆ ಡಬ್ಬಕ್ಕೆ ಒಂದೊಂದು ಕಾಯಿನ್ ಹಾಕಿದಾಗಲೂ ನನ್ನೆದೆಯ ಒಲವಿನ ಡಬ್ಬಿಗೆ ಪ್ರೀತಿಯ ಕಾಣಿಕೆ ಹಾಕಿದಂತೆ ಅನ್ನಿಸುತ್ತಿತ್ತು. ಆದರೆ, ಕೊನೆಯ 10 ಸೆಕೆಂಡು ಇರುವಾಗ ಟೈಮ್ ಬಾಂಬ್ ಇಟ್ಟಂತೆ “ಟು..ಟು..ಟು..ಟು’ ಅಂತ ಅವಳ ಕಾಯಿನ್ ಫೋನು ಬಡಿದುಕೊಳ್ಳುವಾಗ, “ಅಯ್ಯೋ, ಸಮಯ ಆಗೊØàಯ್ತಾ, ಅಷ್ಟು ಬೇಗ?’ ಅಂತ ನನ್ನ ಹೃದಯ ಬಿಕ್ಕಳಿಸುತ್ತಿತ್ತು. ನನ್ನ ಮಾತುಗಳು ಇನ್ನೂ ಬಾಯಲ್ಲಿ ನಲಿದಾಡುತ್ತಿರುವಾಗ ಡಬ್ ಅಂತ ಬಾಂಬು ಸಿಡಿದಂತೆ ಫೋನು ಕಟ್ ಆಗುತ್ತಿತ್ತು. ಆಕೆಗೆ ಮರಳಿ ಕರೆಮಾಡಲು ಕಾಯಿನ್ ಎಲ್ಲಾ ಖಾಲಿ. ಹಾಸ್ಟೆಲ್ ಫೋನು ಬೇರೆ, ಅವಳ ಹಿಂದೆ ಒಲವಿನ ಸಂಧ್ಯಾರಾಗ ಹಾಡಲು ತಯಾರಾದ ಹಾಸ್ಟೆಲ್ ಮೇಟ್‌ಗಳ ಕ್ಯೂ ಬೇರೆ. ನೀನೇ ಹೇಳು… ಆ ಐದು ನಿಮಿಷದಲ್ಲಿ ಎಂಥ ಮಾಡೋಕೆ ಆಗುತ್ತೆ, ಹುಡುಗಿಯರ ಮಾತು ಹೇಳ್ಳೋಕೆ ಐದು ನಿಮಿಷ ಜಾಸ್ತಿ ಬೇಕು, ಆದ್ರೂ ಅವಳ ಆ ಐದು ನಿಮಿಷ ಎಷ್ಟೋ ಸಾವಿರ ನಿಮಿಷಗಳಾಗಿ, ಎಷ್ಟೋ ಸಂಜೆಗಳನ್ನು ದಾಟಿ, ಇಂದು ನಾವಿಬ್ಬರೂ ಜೊತೆಯಾಗಿದ್ದೇವೆ’ ಅಂತ ಒಂದು ಕಾಲದಲ್ಲಿ ಈ ಮಾತಿನ ಡಬ್ಬಿಯ ಕಷ್ಟ ಸುಖಗಳನ್ನು ಅನುಭವಿಸುತ್ತಿದ್ದ ನನ್ನ ಗೆಳೆಯನ್ನೊಬ್ಬ ಹೇಳಿದಾಗ, ಅವರ ಬೂತ್‌ನ ಮಮತೆಗೆ ತಲೆದೂಗಿದ್ದೆ. – ಪ್ರಸಾದ್ ಶೆಣೈ ಆರ್.ಕೆ.