Advertisement

ಕುಡಿಯುವ ನೀರಿಗೆ ಕಾಯಿನ್‌ ಬೂತ್‌: ನಯಾಪೈಸೆ ಪ್ರಯೋಜನ ಇಲ್ಲ

01:37 PM May 06, 2017 | Harsha Rao |

ಬೆಳ್ತಂಗಡಿ: ಬಿರುಬೇಸಗೆಯಲ್ಲಿ ಹನಿ ನೀರಿಲ್ಲದೇ ಅದೆಷ್ಟೋ ಬಾವಿ, ಕೊಳವೆಬಾವಿಗಳು ಬತ್ತಿವೆ. ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಅಕ್ಷರಶಃ ಒದ್ದಾಡುತ್ತಿವೆ. ದ.ಕ. ಜಿಲ್ಲೆಯಲ್ಲಿ ಎರಡು ತಾಲೂಕನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಹಾಗಂತ ಬರ ಪರಿಹಾರ ಏನೇನೂ ದಕ್ಕಿಲ್ಲ. ಆದರೆ ಬರಪೀಡಿತ ತಾಲೂಕುಗಳ ಘೋಷಣೆಗೆ ಮುನ್ನವೇ ಜಿಲ್ಲಾಡಳಿತ ಕುಡಿಯುವ ನೀರು ಪರಿಹಾರಕ್ಕೆ ಹಳ್ಳಿಗಳಲ್ಲಿ ಕಾಯಿನ್‌ ಬೂತ್‌ ವ್ಯವಸ್ಥೆ ಮಾಡಿತ್ತು.

Advertisement

ದ.ಕ. ಜಿಲ್ಲೆಯ 148 ಕಡೆ ಇಂತಹ ಬೂತ್‌ ಅಳವಡಿಸಲು ಸರಕಾರ 12.58 ಕೋ. ರೂ. ಖರ್ಚು ಮಾಡಿದೆ. ಆದರೆ ನಯಾಪೈಸೆ ಪ್ರಯೋಜನ ಈವರೆಗೆ ಆಗಿಲ್ಲ. ನೀರಿಲ್ಲ ಎಂದು ಪಡಿತರ ಪದ್ಧತಿಯಲ್ಲಿ ನೀರು ಕೊಡುವ ಆಡಳಿತ ಇಂತಹ ವಿಷಯಗಳಲ್ಲಿ ಹಣ ಪೋಲಾಗುವಾಗ ಮೌನ ವಹಿಸಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕಳೆದ ಬಾರಿಯೂ ಈ ಸಲದಂತೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಿದ್ದು, ಕುಡಿಯುವ ನೀರಿಗಾಗಿ ಪರದಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಸಾಕಷ್ಟು ಕಡೆ ಕೊಳವೆ ಬಾವಿ ತೋಡಿಸಿ ಪರಿಹಾರ ಹುಡುಕಲಾಯಿತು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಯೋಜನೆ ರೂಪಿಸಿತ್ತು. ಅದರಂತೆ ಬೆಳ್ತಂಗಡಿ ತಾಲೂಕಿನ 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಮೊದಲಿಗೆ ಈ ಯೋಜನೆ ಜಾರಿಗೆ ಬಂದಿತು.

ಕಾಯಿನ್‌ ಹಾಕಿ ನೀರು ಪಡೆಯಿರಿ: ಕಾಯಿನ್‌ ಬೂತ್‌ ಮೂಲಕ ಕುಡಿಯುವ ನೀರನ್ನು ನೀಡುವ ಯೋಜನೆ ಇದಾಗಿದ್ದು, ಜಿ. ಪಂ.ನ ನೀರು ಮತ್ತು ನೈರ್ಮಲೀಕರಣ ವಿಭಾಗ ಇದರ ಅನುಷ್ಠಾನ ಮಾಡಿದೆ. ಬೂತ್‌ಗೆ ಹೋಗಿ 1 ರೂ. ಕಾಯಿನ್‌ ಹಾಕಿ ಬಟನ್‌ ಒತ್ತಿದರೆ ಒಮ್ಮೆಲೆ 10 ಲೀ. ನೀರು ಸಿಗಲಿದೆ. ಮತ್ತೆ ನೀರು ಬೇಕಾದರೆ ಮತ್ತೆ 1 ರೂ. ಕಾಯಿನ್‌ ಹಾಕಬೇಕು. ಅದಕ್ಕೆ ಬೂತ್‌ ನಿರ್ಮಾಣ ಮಾಡಿ, ಯಂತ್ರ ಅಳವಡಿಸಲಾಗುತ್ತದೆ. ಗ್ರಾ.ಪಂ.ಗಳಲ್ಲಿ ಈಗ ಇರುವ ನೀರಿನ ವ್ಯವಸ್ಥೆಯಿಂದಲೇ ಸಂಪರ್ಕ ಕಲ್ಪಿಸಿ, ನೀರನ್ನು ಶುದ್ಧೀಕರಣಗೊಳಿಸಿ ನೀಡುವುದು ಯೋಜನೆಯ ಸಾರಾಂಶ. ಇದರಂತೆ ದ.ಕ.ದ ವಿವಿಧೆಡೆ 148 ಬೂತ್‌ಗಳ ನಿರ್ಮಾಣವಾಗಿದೆ. ಆದರೆ ಬೂತ್‌ ರಚಿಸಿ ತಿಂಗಳು ಹನ್ನೊಂದಾದರೂ ಹನಿ ನೀರೂ ಬಂದಿಲ್ಲ.

ಎಲ್ಲೆಲ್ಲಿ: ಬೆಳ್ತಂಗಡಿ ತಾಲೂಕಿನಲ್ಲಿ 13 ಕಡೆಗಳಲ್ಲಿ ಮೊದಲ ಹಂತದಲ್ಲಿ ಈ ನೀರಿನ ಬೂತ್‌ ಹಾಕಲಾಗಿದೆ. ಈ ಪೈಕಿ ಜಿ.ಪಂ. ಮಾಹಿತಿ ಪ್ರಕಾರ 5 ಕಾರ್ಯನಿರ್ವಹಿಸುತ್ತಿವೆ. ಸುಳ್ಯದಲ್ಲಿ 11 ನಿರ್ಮಾಣವಾಗಿದ್ದು, ಒಂದೂ ಕಾರ್ಯನಿರ್ವಹಿಸುತ್ತಿಲ್ಲ. ಪುತ್ತೂರಿನಲ್ಲಿ 16 ನಿರ್ಮಾಣವಾಗಿದ್ದು, 1 ಕಾರ್ಯನಿರ್ವಹಿಸುತ್ತಿದೆ. ಬಂಟ್ವಾಳದಲ್ಲಿ 27 ಕಡೆ ಮಾಡಲಾಗಿದ್ದು, ಒಂದು ಕಡೆಯೂ ನೀರು ವಿತರಣೆಯಾಗುತ್ತಿಲ್ಲ. ಮಂಗಳೂರು ತಾಲೂಕಿನಲ್ಲಿ 19 ಕಡೆ ಮಾಡಲಾಗಿದ್ದು, ಎಲ್ಲಿಯೂ ನೀರಿಲ್ಲ. ಒಟ್ಟು ಜಿಲ್ಲೆಯಲ್ಲಿ 148 ಕಡೆ ಇಂತಹ ಘಟಕಗಳಿದ್ದು, ಇನ್ನೂ 4 ಕಡೆ ನಿರ್ಮಾಣವಾಗುತ್ತಿವೆ. ಅಧಿಕೃತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ 5 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಕೂಲಂಕಷವಾಗಿ ನೋಡಿದರೆ ಅದೂ ಅಸಮರ್ಪಕವಾಗಿದೆ.

Advertisement

ಖರ್ಚು: ಪ್ರತೀ ಘಟಕಕ್ಕೆ 8.50 ಲಕ್ಷ ರೂ. ವೆಚ್ಚ ತಗುಲಿದ್ದು, ಸರಕಾರ ತಲಾ 5 ಲಕ್ಷ ರೂ. ಮಂಜೂರು ಮಾಡಿದೆ. ಉಳಿದ 3.50 ಲಕ್ಷ ರೂ. ಸ್ಥಳೀಯ ಸಂಸ್ಥೆ ಅಥವಾ ಸ್ಥಳೀಯ ಮೂಲಗಳಿಂದ ಬಳಸಲಾಗಿದೆ. ಈ ವರ್ಷಾರಂಭದೊಳಗೆ ಯೋಜನೆ ಕಾರ್ಯಗತ ವಾಗಬೇಕಿದ್ದು, ದ.ಕ. ವ್ಯಾಪ್ತಿಯಲ್ಲಿ ಯಶಸ್ವಿಯಾದರೆ ಉಳಿದ ಕಡೆಗಳಲ್ಲಿಯೂ ಆರಂಭವಾಗಬೇಕಿತ್ತು. ಆದರೆ 12.58 ಕೋ. ರೂ.ಗಳ ಮಹತ್ವದ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲೇ ಇಲ್ಲ.

ಕಾಯಿನ್‌ ಮೆಶಿನ್‌ ಅಳವಡಿಸಲೇ ಇಲ್ಲ: ಬೂತ್‌ಗಳ ನಿರ್ಮಾಣವಾಗಿದ್ದರೂ ಅದರಲ್ಲಿ ಕಾಯಿನ್‌ ಮೆಶಿನ್‌ ಅಳವಡಿಸಲೇ ಇಲ್ಲ. ಗುತ್ತಿಗೆದಾರರು ನಿರ್ದಿಷ್ಟ ಸಮಯದಲ್ಲಿ ಕಾಯಿನ್‌ ಮೆಷಿನ್‌ ಅಳವಡಿಸಿ ನೀರು ಬರುವ ವ್ಯವಸ್ಥೆ ಮಾಡಿಕೊಡಬೇಕಿತ್ತು. ಆದರೆ ಸರಕಾರದ ಕೆಲಸ ದೇವರ ಕೆಲಸ ಎಂದಾಗಿದೆ. ನೀರಿಗಾಗಿ ಬಣ್ಣ ಹೊತ್ತ ಬೂತ್‌ಗಳಷ್ಟೇ ಇವೆ. ಅದಕ್ಕಾಗಿ ಖರ್ಚಾಗಿದೆಯೇ ಹೊರತು ಬೇರೇನೂ ಪ್ರಯೋಜನ ಕಂಡಿಲ್ಲ. ನೋಟಿಸ್‌ ನೀಡಲಾಗುವುದು: ಈ ವರ್ಷ ಬೇಸಗೆಗೆ ಸಾರ್ವಜನಿಕ ಉಪಯೋಗಕ್ಕೆ ದೊರಕುವಂತೆ ಬೂತ್‌ಗಳ ನಿರ್ಮಾಣ ಪೂರ್ಣವಾಗಬೇಕಿತ್ತು. ಗುತ್ತಿಗೆದಾರರು ಮಾಡಿಕೊಡದ ಕಾರಣ ಈ ಬಾರಿ ಬೇಸಗೆಯಲ್ಲಿ ಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಗುತ್ತಿಗೆದಾರರಿಗೆ ನಿರ್ದಿಷ್ಟ ದಿನಗಳೊಳಗೆ ಪೂರ್ಣ ಮಾಡಿಕೊಡು ವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪತ್ರ ಬರೆಯಲಿದ್ದಾರೆ ಎಂದು ಜಿ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next