ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲಿಯೂ ಏಕಾಂಗಿಯಾಗಿಲ್ಲ. ಬಿಜೆಪಿ ನಾಯಕರಿಗೆ ಮಾಡಲು ಬೇರೆ ಕೆಲಸ ಇಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಕೆಲವು ನಾಯಕರು ಅವರಿಗೆ ಉಸ್ತುವಾರಿ ನೀಡಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಹಿರಿಯ ನಾಯಕರಾದ ಡಾ.ಜಿ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಸಹ ಆಗಮಿಸಲಿದ್ದು, ಪ್ರಚಾರ ದಿನಾಂಕ ನಿಗದಿಪಡಿಸಿದ್ದಾರೆ. ಶನಿವಾರದಿಂದ ಎಲ್ಲ ನಾಯಕರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತೇವೆ. ಹಾಗಂತ ಎಲ್ಲರೂ ಒಂದೇ ಕಡೆ ಪ್ರಚಾರ ಮಾಡಲು ಆಗುವುದಿಲ್ಲ.
ಹೀಗಾಗಿ ಕ್ಷೇತ್ರವಾರು ಪ್ರಚಾರ ಕೈಗೊಳ್ಳಲು ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಉಪಚುನಾವಣೆಗೆ ತಂತ್ರ, ಪ್ರಚಾರ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚಿಸಲು ವೇಣುಗೋಪಾಲ್ ಶುಕ್ರವಾರ ಬೆಂಗಳೂರಿಗೆ ಆಗಮಿಸಬೇಕಿತ್ತು. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಕೆ.ಸಿ. ವೇಣುಗೋಪಾಲ್ ತೊಡಗಿರುವ ಕಾರಣ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ ಎಂದರು.
ಶಿವಸೇನೆ ಜತೆ ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ದೇಶಕ್ಕೆ ಅಪಾಯಕಾರಿ ಎನ್ನುವುದು ಎಲ್ಲ ಪಕ್ಷಗಳಿಗೂ ಮನವರಿಕೆಯಾಗಿದೆ. ಹೀಗಾಗಿ ಎನ್‌ಡಿಎ ಒಕ್ಕೂಟವನ್ನು ಬಿಟ್ಟು ಬಿಜೆಪಿ ಮಿತ್ರ ಪಕ್ಷಗಳು ಹೊರಬರುತ್ತಿವೆ. ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಒಂದಾಗಬೇಕೆಂದು ಕೈಜೋಡಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಿವಸೇನೆ ಜತೆ ಸರ್ಕಾರ ರಚಿಸುತ್ತಿದೆ ಎಂದರು.