Advertisement

ಕಾಫಿ ತಿಂಡಿಗೆ ದೇವರೇ ಗತಿ ಭವನ!

03:45 AM Feb 21, 2017 | |

ರಸ್ತೆ ಮಧ್ಯ ಬೈಕು ನಿಲ್ಲಿಸಿದವನೊಬ್ಬ ಜೋರಾಗಿ ಹಾರ್ನ್ ಹೊಡೀತಿದ್ದಾನೆ. ದಾರಿ ಬಿಡುವಂತೆ ನಾನೂ ಹಾರ್ನ್ ಮಾಡಿದೆ. ಅಷ್ಟೆ. ರಸ್ತೆ ಪಕ್ಕದ ಕಾಡಿನಿಂದ ತರಗೆಲೆಗಳ ಮೇಲೆ ಯಾರೋ ನಡೆದು ಬರುತ್ತಿರುವಂತೆ ಚರಪರ ಸದ್ದು ಕೇಳಿತು. ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ನನಗೂ ಮುಂದಿನವನಿಗೂ ನಡುವೆ ಯಾವುದೋ ಒಂದು ಕಪ್ಪು ಜೀವಿಯೊಂದು ಹಾರಿದಂತಾಯ್ತು!

Advertisement

ಇವೆಲ್ಲದರ ಗುಂಗಿನಲ್ಲಿದ್ದರೂ ಅಯಸ್ಕಾಂತದಂತೆ ಮತ್ತೆ ಸೆಳೆದದ್ದು ಆ ಸಂಜೆ ಮಂಜು ಮುಸುಕಿದ್ದ ಕೊಡಚಾದ್ರಿ. ಮೂಕಾಂಬಿಕಾ ದೇವಸ್ಥಾನದ ಮುಂದೆ ನಿಂತ್ರೆ ಕೊಡಚಾದ್ರಿ ಕಾಣುತ್ತೆ. ಅಲ್ಲಿಂದ ಇನ್ನಷ್ಟು ಮುಂದೆ ಹೋಗಿ 10 ಕಿ. ಮೀ ಏರು ದಾರಿ. ಜೀಪು ಹೋಗುವ ರಸ್ತೆ. ಅರ್ಧ ಗಂಟೆಯಲ್ಲಿ ಹತ್ತಿ, ಸೂರ್ಯಾಸ್ತ ನೋಡಿ ಇಳಿದು ಬರುವಾ ಎಂಬುದು ನಮ್ಮ ಯೋಜನೆ. ಆದರೀ ಯೋಚನೆ ಅದೆಷ್ಟು ಟೊಳ್ಳು ಎಂಬುದು ಗೊತ್ತಾದದ್ದು ಚಾ ಅಂಗಡಿಯ ಯಜಮಾನತ್ರ ದಾರಿ ಕೇಳಿದಾಗ.

ಕೊಡಚಾದ್ರಿಯ ಏರು ದಾರಿಗೆ ಮುಂಚೆ ನಾವಿನ್ನೂ 40 ಕಿ.ಮೀ ಹೋಗಬೇಕಿತ್ತು. ನಗರದ ಹಾದಿಯಲ್ಲಿ ಕ್ರಮಿಸಿ ನಡುವೆ ಬಲಕ್ಕೆ ತಿರುಗಬೇಕಿತ್ತು. ರಾತ್ರಿಗಳಿಗೆ ಹೆದರುವವರು ನಾವಲ್ಲ. ಪ್ರಾಣ ಒಂದುಳಿದರೆ ಸಾಕು. ಪ್ಲ್ಯಾನ್‌ಫ್ಲಾಪ್‌ ಆದ್ರೂ ತೊಂದರೆ ಇಲ್ಲ. ಪರಸ್ಪರ ಬೈದುಕೊಳ್ಳುವವರೂ ಅಲ್ಲ. ಆದ್ದರಿಂದ ಹಿಂತಿರುಗುವ ಮಾತಿಲ್ಲ. ಮುಂದೋಡಿದೆವು. ಕೊಡಚಾದ್ರಿಯ ಬುಡ ತಲುಪಿದೆವು. ಇನ್ನು ಹತ್ತು ಕಿ.ಮೀ ಏರು ದಾರಿ. ಬೈಕ್‌ನಲ್ಲಿ ಹತ್ತಬಾರದೆಂದೇನಿಲ್ಲ. ಆದರೆ ಜೀಪ್‌ಗ್ಳಿಗೆ ಮಾತ್ರ ಹೇಳಿ ಮಾಡಿಸಿದ ದಾರಿಯದು. ಆದರೆ ನಾವು ಬುಡ ತಲುಪುವಾಗ ಹೊತ್ತು ಮೀರಿತ್ತು. ಹತ್ತಿದ್ದ ಜೀಪುಗಳೆಲ್ಲಾ ಇಳಿಯುತ್ತಿದ್ದವು.

ರಾತ್ರಿ ಅಲ್ಲೆಲ್ಲಾದರೂ ರೂಮಿನಲ್ಲಿದ್ದು ಬೆಳಗಿನ ಜೀಪುಗಳಲ್ಲೇ ಹೋಗುವುದು ಒಳ್ಳೆಯದೆಂದರು. ಸೂರ್ಯಾಸ್ತ ನೋಡಿ ಇಂದೇ ಮರಳಿ ಬರಬೇಕೆಂದಿದ್ದವರಿಗೆ,ಎಲ್ಲೂ ಉಳ್ಕೊಳ್ಳೋದೇ ಬೇಡ. ಹತ್ತೋದೆ. ಸ್ವಲ್ಪ ಹೊತ್ತಲ್ಲೇ ಇಳಿದು ಮರಳ್ಳೋದೆ ಎಂದೆವು. ನಮ್ಮದು ಅದೆಂತಹ ತಪ್ಪು ನಿರ್ಧಾರ, ನರಕದ ಹಾದಿ ಎಂದು ಗೊತ್ತಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಒಂದು ಕಿ.ಮೀ ಹೋಗುವಷ್ಟರಲ್ಲಿ ಸಾಕಾಯ್ತು. ತಿರುಗಾ ಮುರುಗಾ ತಿರುವು. ಏನು ಕೊರಕಲಪ್ಪ. ರಸ್ತೆ ತುಂಬಾ ಕಲ್ಲುಗಳೇ. ಜಾರಿದರೆ ಕೆಳಗೆ ಉರುಳಬೇಕಷ್ಟೆ. ಸೂರ್ಯಾಸ್ತ ಆಗಿ ಹೋಗಿತ್ತು.ನಂತರದ ಬೆಳಕುಗಳು ಮೆಲ್ಲನೆ ಕರಗಿಹೋಗುತ್ತಿದ್ದವು.

ಕತ್ತಲ ಈ ಏರುದಾರಿಯಲ್ಲಿ ಇಬ್ಬರೂ ಕೂತು ಹೋಗುವಂತಿರಲಿಲ್ಲ. ಒಬ್ಬರು ಇಳಿಯಲೇಬೇಕು. ಮುಂದಿನಿಂದ ಬರುವ ಜೀಪುಗಳಿಗೆ ದಾರಿ ಮಾಡಿಕೊಡಬೇಕು. ಕಣ್ಣಿಗೆ ಹೊಡೆಯುವ ಅವುಗಳ ಮೊನಚು ಬೆಳಕಿನಿಂದ ತಪ್ಪಿಸಿಕೊಳ್ಳಬೇಕು. ಸುಸ್ತಾಗಿದ್ದ ಸ್ನೇಹಿತನ ವೇಗಕ್ಕೆ ಜೊತೆಯಾಗಿ ಬೈಕ್‌ ಚಲಾಯಿಸಿದ್ದರೆ ಕತ್ತಲು ಇಳಿದು ಹೋದರೂ ನಾವು ಗುರಿ ಮುಟ್ಟುತ್ತಿರಲಿಲ್ಲ.ಅದಕ್ಕೆ ಸ್ನೇಹಿತನನ್ನು ಮೆಲ್ಲನೆ ನಡೆಯಲು ಹೇಳಿ, ಒಂದೊಂದು ಏರನ್ನೂ ಒಂಟಿಯಾಗಿ ಹತ್ತಿ ಅವನು ಬರುವವರೆಗೆ ಕಾಯೋದು. ಬಂದ ಮೇಲೆ ಮತ್ತೆ ಹಾಗೇ, ನಾ ಮುಂದೆ ಅವ ಹಿಂದೆ ಚಲಿಸುವುದು.

Advertisement

ಹೀಗೆ ನಾನೊಬ್ಬನೇ ಮುಂದೆ ಹೋದೆ. ಎರಡು ಕಡಿದಾದ ತಿರುವು ದಾಟಿದೆ. ಮುಗಿಯಿತು ಅನ್ನುವಾಗ ಅದಕ್ಕೆ ತಾಗಿಕೊಂಡೇ ಮೂರನೆಯದು. ಅದನ್ನೂ ದಾಟಿ ಮೇಲೆ ನಿಲ್ಲೋಣವೆಂದು ಎಕ್ಸಲೇಟರ್‌ ಜೋರು ಕೊಡುತ್ತಿರುವಾಗಲೇ ಎದುರಿನಿಂದ ಹಾರ್ನ್ ಬಿಗಿಯುತ್ತಿತ್ತು.

ಅದು ಜೀಪಿನ ಹಾರ್ನಲ್ಲ. ಬೈಕಿನದ್ದು. ಆ ರಸ್ತೆಯಲ್ಲಿ ಎರಡು ಬೈಕ್‌ ಹೋಗಲಂತೂ ಅಡ್ಡಿ ಇರಲಿಲ್ಲ. ಆದ್ರೂ ಯಾಕೆ ಅಲ್ಲೇ ನಿಂತು ಹಾರ್ನ್ ಹೊಡೀತಿದ್ದಾನೆ. ಅರ್ಥವಾಗದೇ ನಾನೂ ಸದ್ದು ಮಾಡಿದೆ. ಅಷ್ಟೆ. ಪಕ್ಕದ ಕಾಡಿನ ತರಗಲೆ ಚರಪರ. ನನಗೂ ಮುಂದಿನವನಿಗೂ ನಡುವೆ ಏನೋ ಒಂದು ಕಪ್ಪು ಜೀವಿ ಹಾರಿದಂತಾಯ್ತು. ಏನೆಂದುಯೋಚಿಸುವ ಮೊದಲೇ ದುಡು ದುಡು ಸದ್ದು ಹೆಚ್ಚಾಯ್ತು. ಉಸಿರು ಮೇಲೆ ಕೆಳಗಾಯ್ತು. ಆ ಜೀವಿಯಂತೂ ಆ ಅವಸರದ ಓಟದಲ್ಲೂ ಒಮ್ಮೆ ನನ್ನ ನೋಡಿತು. ಮತ್ತೂಮ್ಮೆ ಅವನನ್ನ. ಈ ಕ್ಷಣ ಹೊತ್ತಿನ ನಡುಗುವ ನೋಟದಲ್ಲಿ ಅದು ಕಾಟಿಯೆಂದು ಗೊತ್ತಾಯ್ತು. ಆ ಹೊತ್ತು ನನ್ನಲ್ಲಿ ಮಾತಿರಲಿಲ್ಲ. ಯಾಕಂದ್ರೆ ನನ್ನ ಪ್ರಾಣವೇ ಹೊಟ್ಟೆಯೊಳಗೆ ಅಡಗಿ ಕೂತಿತ್ತು.

ಸೂರಜ್‌ ಬಂದ ಕೂಡಲೇ ಹೇಳಿದೆ: ಇನ್ನಿಲ್ಲಿ ನಿಲ್ಲುವುದು ಬೇಡ ಮಾರಾಯ. ಬೇಗ ಹತ್ತಿ ಹೋಗೋಣ. ಅವು ಮತ್ತೆ ಬರಬಹುದು ಎಂದು. ಇಳಿಯುವುದು ಸುಲಭವಿತ್ತೇನೋ? ಒಮ್ಮೆ ಅನ್ನಿಸಿತು. ಸೋಲೋದು ಬೇಡ. ಆದದ್ದಾಗಲಿ. ಹೋಗೋದು ಹೋಗಲಿ ಎಂದು ಅವನನ್ನೂ ಕೂರಿಸಿ ಕಲ್ಲಿನ ಕೊರಕಲಿನಲ್ಲಿ ಇನ್ನೆರಡು ಕಿ.ಮೀ ಹತ್ತಿದೆ. ಹತ್ತಾರು ಜೀಪುಗಳು ಇಳಿದವು. ಮತ್ತೆರಡು ಕಿ.ಮೀ ಏರಿದೆ.

ಇಲ್ಲ, ಬೆಟ್ಟದ ತುದಿ ಇನ್ನೂ ಬರಲಿಲ್ಲ. ದೂರದ ಎತ್ತರದಲ್ಲಿ ಮಿಣುಕು ಬೆಳಕೊಂದು ಕಾಣಿಸಿತು. ಆದರದು ಮತ್ತೆ ಈಗ ಬಂದಷ್ಟೇ ದೂರವಿತ್ತು. ಕತ್ತಲ ಒಳಗೆ ಕಾಡೂ, ಕಾಡಿನ ದಾರಿಯೂ ಬೆಳೆಯುತ್ತಲೇ ಇತ್ತು. ಬೆದರಿಸುತ್ತಲೇ ಸಾಗಿತ್ತು. ನಮ್ಮ ಯೋಜನೆಯಂತೂ ಪಕ್ಕಾ ಬುಡಮೇಲಾಗಿತ್ತು. ಬೆಟ್ಟದ ತುದಿ ತಟ್ಟುವಾಗ ಚಂದ್ರೋದಯದ ಹಾಲಿತ್ತು.

ಮರಳಿ ಇಳಿಯುವ ಮಾತೇ ಇರಲಿಲ್ಲ. ರಾತ್ರಿ ಅಲ್ಲೇಉಳಿದುಕೊಳ್ಳಬೇಕು. ಮೂಲ ಮೂಕಾಂಬೆಯ ಪೂಜಾರಿಗಳ (ಜೋಗಿ ಕುಟುಂಬದ) ಮನೆಯಲ್ಲಿ ಮಲಗುವ  ಮಾತಾಯಿತು. ತಮಗೆಂದು ಬೇಯಿಸಿದ್ದರಲ್ಲೇ ನಮಗೂ ಹಂಚಿಕೆಯಾಯಿತು. ಊಟ, ಚಾಪೆ, ದಿಂಬುಗಳೇನೂ ಉಚಿತವಲ್ಲ. ಆದರೂ ಅವರು ತೋರಿದ ಪ್ರೀತಿ, ವಿಶ್ವಾಸ, ನೂರ್ಕಾಲ ನೆನಪಲ್ಲಿ ಉಳಿಯುವಂತದ್ದು.

ಖುಷಿ ಪಡಲು ಕಣ್ಣಮುಂದೆ ಅದ್ಭುತವಾದ ವಸ್ತುವೇ ಇರಬೇಕೆಂದಿಲ್ಲ. ಅಲ್ಲಿಂದಿಲ್ಲಿಗೆ ಅಲೆಯುವಾಗ ಕಣ್ಣಿಗೆ ಬೀಳುವ ಊರಿನ ಹೆಸರುಗಳು ಕೂಡಾ ಕೆಲವೊಮ್ಮೆ ಕುತೂಹಲ ಹುಟ್ಟಿಸುತ್ತವೆ. ಹೊಟೇಲಿನ ಹೆಸರುಗಳು ಪರಿಮಳವನ್ನು ಅರಸುವಂತೆ ಮಾಡುತ್ತವೆ. ಹಾಗೊಂದು ದಿನ ಕಾಳಿಂಗ ನಿಂತದ್ದು “ದೇವರೇ ಗತಿ ಭವನ’ದ ಮುಂದೆ!

1968ರಲ್ಲಿ ಎಸ್‌. ಎಮ್‌. ಪೆಜತ್ತಾಯರು ತಮ್ಮ ಅಕ್ಕ, ಭಾವನಿಗಾಗಿ ನಿರ್ಮಿಸಿಕೊಟ್ಟ ಗೋಟಿನ ಫಾರ್ಮನ್ನು ನೋಡಲೆಂದು ಹೋಗಿದ್ದೆವು. ಚಹಾ ಕುಡಿಯಬೇಕೆಂದು ಬೈಕ್‌ ನಿಲ್ಲಿಸಿದ್ದು ಹರಿಖಂಡಿಗೆಯಲ್ಲಿ. ಆಗ ಕಣ್ಣಿಗೆ ಬಿದ್ದಿದ್ದು ಈ ಬೋರ್ಡು. ಕಾಫಿ , ಚಹಾ ಕುಡಿಯುವ ಅಭ್ಯಾಸವೇ ಇಲ್ಲದ ನಾನೂ ಬೋರ್ಡ್‌ ಕಂಡೊಡನೆ ಕುತೂಹಲಗೊಂಡೆ. ನನಗೂ ಒಂದು ಚಹಾವಿರಲಿ ಎಂದೆ.

ಹೊಟೇಲಿನ ಮೂಲ ಹೆಸರು ವೈಶಾಲಿ. ಅದು ಹೊಟೇಲ್‌ ಮಾಲೀಕರ ಮಗಳ ಹೆಸರು. ತನ್ನ ತಂದೆ ದಿವಂಗತರಾದ ಮೇಲೆ ಅವರ ನೆನಪಿಗಾಗಿ ಬದಲಾಯಿಸಿದ ಹೆಸರಿದು, “ದೇವರೇ ಗತಿ ಭವನ’.

(ಮುಂದುವರಿಯುವುದು)

– ಮಂಜುನಾಥ್‌ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next