ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ವಾಣಿಜ್ಯ ಸಚಿವರಿಗೆ ಕರ್ನಾಟಕ ಬೆಳೆಗಾರರಒಕ್ಕೂಟದಿಂದ ಮನವಿ ಮಾಡಿದ್ದು, ಮಂಡಳಿ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ ಪರಿಣಾಮ ಕಾಫಿ ಮಂಡಳಿ ಕಾರ್ಯದರ್ಶಿ ರಾಜ್ಯದ ಮೂರು ಜಿಲ್ಲೆಗೆಳಿಗೆ ಅ.12ರಿಂದ14ರವರೆಗೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿ ವಾಣಿಜ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಕೆ.ಜಿ.ಎಫ್. ನೂತನ ಅಧ್ಯಕ್ಷ ಎನ್.ಬಿ. ಉದಯ್‌ಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಫಿ ಬೆಳೆ ಬೆಳೆಯುವ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಭಾರೀ ಪ್ರಮಾಣದ ಕಾಫಿ ಬೆಳೆ ಹಾಗೂ ಕಾಫಿ ತೋಟ ನಾಶವಾಗಿವೆ ಎಂದರು. ಕಾಫಿ ಮತ್ತು ಕಾಳುಮೆಣಸು ಬೆಳೆ ಬೆಲೆ ಕುಸಿತದಿಂದ ಕಾಫಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಉದ್ಯಮ ನಂಬಿರುವ ಲಕ್ಷಾಂತರ ಕಾರ್ಮಿಕರು ತೊಂದರೆಯಲ್ಲಿ ಸಿಲುಕಿರುವುದು ಸೇರಿದಂತೆ ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕೆ.ಜಿ.ಎಫ್. ಮನವಿ ಮಾಡಿದೆ ಎಂದು ತಿಳಿಸಿದರು.
ಕಾಫಿ ಮಂಡಳಿ ಇತ್ತೀಚೆಗೆ ಸರ್ಕಾರದ ನೂತನ ಕಾರ್ಯದರ್ಶಿ ಡಾ| ಕೆ.ಜಿ. ಜಗದೀಶ್ ಅವರನ್ನು ನೇಮಕ ಮಾಡಿದ್ದು, ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೆ.ಜಿ.ಎಫ್. ನೂತನ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ| ಜಗದೀಶ್ ಅ.12ರಿಂದ ಅ.14ರ ವರೆಗೆ ಕಾಫಿ ಬೆಳೆ ಬೆಳೆಯುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಕಾಫಿ ತೋಟಗಳ ಪರಿಶೀಲನೆ ಮತ್ತು ಬೆಳೆಗಾರರಸಮಸ್ಯೆ ಆಲಿಸಿ ಸಮಗ್ರ ವರದಿ ತಯಾರಿಸಿ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ ಎಂದರು.
ಪ್ರತೀಕೂಲ ಹವಾಮಾನ ಮತ್ತು ಬೆಲೆ ಏರಿಳಿತದಿಂದ ಕಾಫಿ ಉದ್ಯಮ ನಷ್ಟದಲ್ಲಿದ್ದು, ಬೆಳೆಗಾರರ ಬದುಕು ಅತಂತ್ರವಾಗಿದೆ. ಬೆಳೆಗಾರರುಕೇಂದ್ರ ಸರ್ಕಾರದ ನೆರವಿನ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಬಳಿ ಕೆಜಿಎಫ್ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ತಿಳಿಸಿದರು.
ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬಾಕಿ ಸಾಲವನ್ನು ಶೇ.3ರ ಬಡ್ಡಿದರದಲ್ಲಿ ಮರು ಹೊಂದಾಣಿಕೆ ಮಾಡಬೇಕು. ಹೊಸ ಸಾಲವನ್ನು ಶೇ.3ರ ಬಡ್ಡಿದರದಲ್ಲೇ ನೀಡಬೇಕು. ಬೆಳೆಗಾರರ ಕೃಷಿ ಸಾಲವನ್ನು ಸಿ-ಬಿಲ್‌ನಿಂದ ಹೊರಗಿಡಬೇಕು. ನರೇಗಾ ಯೋಜನೆ ವ್ಯಾಪ್ತಿಗೆ ಕಾಫಿ ತೋಟಗಳನ್ನು ಸೇರಿಸಿರುವುದು ಸ್ವಾಗತಾರ್ಹವಾಗಿದ್ದರೂ ಇದಕ್ಕೆ 5 ಎಕರೆಯ ಮಿತಿ ಹೇರಿರುವುದನ್ನು ತೆಗೆದು ಎಲ್ಲ ಬೆಳೆಗಾರರಿಗೂ ನರೇಗಾ ಯೋಜನೆಯ ಸೌಲಭ್ಯ ನೀಡಬೇಕು ಎಂದರು.
ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕು. ರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.ಕಾಡಾನೆ ಹಾವಳಿಯಿಂದ ನಾಶವಾಗುವಪ್ರತೀ ತೋಟಗಳಲ್ಲಿನ ಪ್ರತೀ ರೊಬಾಸ್ಟಾ ಗಿಡಕ್ಕೆ 9 ಸಾವಿರ ರೂ. ಹಾಗೂ ಅರೇಬಿಕಾ ಗಿಡಕ್ಕೆ 7500 ರೂ. ಪರಿಹಾರ ನೀಡಬೇಕು. ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ.90ರಷ್ಟು ಸಹಾಯಧನ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಜಿಎಫ್ ಕಾರ್ಯದರ್ಶಿ ಮುರಳೀಧರ್, ಮುಖಂಡರಾದ ಮಹೇಶ್ ಗೌಡ, ಎನ್.ಕೆ. ಪ್ರದೀಪ್, ಅತ್ತಿಕಟ್ಟೆ ಜಗನ್ನಾಥ್, ತೀರ್ಥಮಲ್ಲೇಶ್, ಸಿ.ಎ. ಸುರೇಶ್, ರತ್ನಾಕರ್, ಡಿ.ಎಂ. ವಿಜಯ್ ಇದ್ದರು.