Advertisement

ವರುಣನ ಅವಕೃಪೆ: ಕಾಫಿ ಬೆಳೆಗಾರರು ಕಂಗಾಲು

03:37 PM Apr 08, 2023 | Team Udayavani |

ಅರಕಲಗೂಡು: ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ತೋಟಗಾರಿಕೆ ಬೆಳೆಗಳು ಒಣಗ ತೊಡಗಿದ್ದು, ಕಷ್ಟ ಪಟ್ಟು ಕೈಗೊಳ್ಳಲಾಗಿರುವ ವಾಣಿಜ್ಯ ಬೆಳೆಗಳನ್ನು ಉಳಿಸಿ ಕೊಳ್ಳುವಲ್ಲಿ ರೈತರು, ಬೆಳೆಗಾರರು ಹೈರಾಣಾಗುತ್ತಿದ್ದಾರೆ. ಕಳೆದ ವರ್ಷವಿಡೀ ಬಿಡದೆ ಅಬ್ಬರಿಸಿ ಅತಿವೃಷ್ಟಿ ಸಂಕಷ್ಟ ತಂದೊಡ್ಡಿದ್ದ ಮಳೆ ಈ ಸಲ ಏಪ್ರಿಲ್‌ ತಿಂಗಳಲ್ಲೂ ಬಾರದೆ ಕೃಷಿಕರಲ್ಲಿ ಆತಂಕ ಮೂಡಿಸಿದೆ.

Advertisement

ಮಳೆ ಬಾರದೆ ಬಿರು ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಬಾಧಿಸತೊಡಗಿದೆ. ಕಳೆದ ವರ್ಷ ಏಪ್ರಿಲ್‌ ವೇಳೆಗೆ ಎರಡು ಮೂರು ಬಾರಿ ಅಬ್ಬರ ಮಳೆ ಸುರಿದಿತ್ತು. ಈ ಸಲ ಒಮ್ಮೆಯೂ ವರುಣ ಕೃಪೆ ತೋರಿಲ್ಲ. ಪರಿಣಾಮವಾಗಿ ರೈತರು ಭೂಮಿ ಉಳುಮೆ ಕೂಡ ನಡೆಸಲು ಸಾಧ್ಯವಾಗದೆ ಮುಗಿಲಿನತ್ತ ಮುಖ ಮಾಡಿ ಕೈಕಟ್ಟಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.

ರೈತರ ಬದುಕು ದುರ್ಬರ: ತಾಲೂಕಿನಲ್ಲಿ ಕಾವೇರಿ, ಹೇಮಾವತಿ ನದಿ, ಹಾರಂಗಿ ನಾಲಾ ವ್ಯಾಪ್ತಿ ಹಾಗೂ ಮಳೆಯಾಶ್ರಿತ ಪ್ರದೇಶದ ಸಾವಿರಾರು ಎಕರೆ ಭೂಮಿ ವರುಣನ ಅವಕೃಪೆಗೆ ತುತ್ತಾಗಿ ಪಾಳು ಬಿದ್ದಿದೆ. ನಾಲಾ ವ್ಯಾಪ್ತಿಯ ಜಮೀನಿಗೂ ಕೂಡ ನೀರಿಲ್ಲದೆ ಮುಂಗಾರು ಬೆಳೆಗಳನ್ನು ಬೆಳೆಯಲು ರೈತರು ಮಳೆಯನ್ನೆ ಅವಲಂಬಿಸಬೇಕಾಗಿದೆ. ಇನ್ನು ಮಳೆಯಾಶ್ರಿತ ಜಮೀನು ಹೊಂದಿರುವ ರೈತಾಪಿ ವರ್ಗದ ಜನರು ಕೃಷಿ ಕಾಯಕ ಸ್ಥಗಿತಗೊಳಿಸಿ ವರುಣನ ಆಗಮನಕ್ಕಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಮಳೆ ಬಿದ್ದಿದ್ದರೆ ರೈತರು ಈ ವೇಳೆಗೆ ಜಮೀನಿನಲ್ಲಿ ಕೃಷಿ ಕಾರ್ಯ ಚುರುಕುಗೊಳಿಸುತ್ತಿದ್ದರು. ದುರಾದೃಷ್ಟವಶಾತ್‌ ಹನಿ ಮಳೆಯೂ ಇಳೆಗೆ ಬೀಳದೆ ರೈತರ ಬದುಕು ಮುರಾಬಟ್ಟೆಯಾಗಿದೆ.

ಬಾಡುತ್ತಿರುವ ಸಸಿ ಮಡಿಗಳು: ನಾಟಿ ಹಂತಕ್ಕೆ ಬೆಳೆಸಿರುವ ತಂಬಾಕು ಸಸಿ ಮಡಿಗಳು ನೀರಿಲ್ಲದೆ ಬಾಡುತ್ತಿವೆ. ರೈತರ ಶ್ರಮ ವ್ಯರ್ಥವಾಗುತ್ತಿದೆ. ಕಳೆದೆರಡು ದಿನಗಳಿಂದ ಅಗಸದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆ ಬೀಳುತ್ತಿಲ್ಲ. ಯುಗಾದಿ ಕಳೆದರೂ ವಾಡಿಕೆಯಂತೆ ವರುಣನ ಆಗಮನವಾಗದೆ ಬಿರು ಬೇಸಿಗೆ ಬಾಧಿಸಿ ಅನಾವೃಷ್ಟಿ ಅನ್ನದಾತರ ಕೈ ಕಚ್ಚುತ್ತಿದೆ. ಇಷ್ಟೇ ಅಲ್ಲದೆ ಒಂದೆಡೆ ವಿಧಾನಸಭಾ ಚುನಾವಣೆ ಕಾವು ಕೂಡ ಹಳ್ಳಿಗಳನ್ನು ವ್ಯಾಪಿಸತೊಡಗಿದೆ. ಮತ್ತೂಂದೆಡೆ ಜನತೆಗೆ ಬರಗಾಲದ ಛಾಯೆಯೂ ಆವರಿಸಿದೆ.

ತೋಟಗಾರಿಕೆ ಬೆಳೆಗಳಿಗೆ ಹಾನಿ: ತಾಲೂಕಿನ ಮಲ್ಲಿ ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು, ಏಲಕ್ಕಿ ಇತರೆ ಹೋಬಳಿ ವ್ಯಾಪ್ತಿಯಲ್ಲಿ ಅಡಿಕೆ, ಬಾಳೆ ಹಾಗೂ ತರಕಾರಿ ಬೆಳೆಗಳನ್ನು ಕೈಗೊಳ್ಳಲಾಗಿದೆ. ಈ ವೇಳೆಗಾಗಲೇ ಕಾಫಿ ಹೂ ಬಿಡುವ ಹಂತಕ್ಕೆ ಬರ ಬೇಕಿತ್ತು. ನೀರಿನ ಅಭಾವದಿಂದ ಬಹುತೇಕ ಕಡೆ ಹೂ ಬಿಡಲು ಸಾಧ್ಯವಾಗಿಲ್ಲ. ಈಗಾಗಲೇ ಹೂ ಕಚ್ಚಿರುವ ಕಾಫಿ ಗಿಡಗಳ ನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಕಾಳು ಮೆಣಸಿನ ಬಳ್ಳಿಗಳು ಒಣಗತೊಡಗುತ್ತಿವೆ.

Advertisement

ತಂಬಾಕು ಸಸಿ ಮಡಿ,ನಾಟಿಗೂ ಹಿನ್ನೆಡೆ: ತಾಲೂಕಿನ ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ, ಹಳ್ಳಿಮೈಸೂರು ಹೋಬಳಿ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ನಾಟಿ ಮಾಡಲು ಮಳೆ ಕೈಕೊಟ್ಟಿರು ವುದು ದೊಡ್ಡ ಹೊಡೆತ ನೀಡಿದಂತಾಗಿದೆ. ಈಗಾಗಲೇ ನೀರಾವರಿ ಮೂಲಗಳನ್ನು ಹೊಂ ದಿರುವ, ಕೆರೆ ಕಟ್ಟೆಗಳ ವ್ಯಾಪ್ತಿಯ ರೈತರು ಹೊಗೆಸೊಪ್ಪು ಸಸಿ ಮಡಿ ಬೆಳೆಸಿದ್ದಾರೆ. ಆದರೆ ಸಸಿಮಡಿಗಳು ನಾಟಿ ಮಾಡುವ ಹಂತಕ್ಕೆ ಬೆಳೆದಿದ್ದು ಇನ್ನೂ ಭೂಮಿ ಉಳಲು ಮಳೆ ಬಿದ್ದಿಲ್ಲ. ಹೀಗಾಗಿ ನಾಟಿ ಕಾರ್ಯ ನಡೆಸಲು ಹಿನ್ನಡೆಯಾಗಿದ್ದು ಬೆಳೆ ನಷ್ಟ ಬಾಧಿಸುವ ಭೀತಿ ಸೃಷ್ಟಿಸಿದೆ.

ಇತರೆ ಬೆಳೆ ಕೈಗೊಳ್ಳಲು ತೊಂದರೆ: ತಾಲೂಕಿನಲ್ಲಿ ಹೆಚ್ಚಾಗಿ ಆಲೂಗಡ್ಡೆ, ಮುಸುಕಿನ ಜೋಳ, ಶುಂಠಿ ಬಿತ್ತನೆಗೆ ಜಮೀನು ಹದಗೊಳಿಸಲು ಮಳೆ ಮುನಿಸು ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಕಳೆದ ವರ್ಷ ಅತಿವೃಷ್ಟಿ ಹೊಡೆತಕ್ಕೆ ಬೆಳೆದ ಬೆಳೆಗಳನ್ನು ಕಳೆದು ಕೊಂಡು ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದ ಅನ್ನದಾತರು ಈ ಬಾರಿ ಅನಾವೃಷ್ಟಿ ಸಂಕಷ್ಟ ಎದುರಿಸುತ್ತಿದ್ದಾರೆ.

ಬಿಸಿಲಿನ ತಾಪಕ್ಕೆ ನಾಲೆ ಕೆರೆಗಳು ಒಣಗುತ್ತಿವೆ: ತಾಲೂಕಿನ ಬಹುತೇಕ ಕಡೆ ನಾಲೆಗಳು, ಕೆರೆ ಕಟ್ಟೆಗಳ ಒಡಲು ನೀರಿಲ್ಲದೆ ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಕುಸಿದು ಬೊರ್‌ವೆàಲ್‌ಗ‌ಳಲ್ಲಿ ನೀರಿನ ಪ್ರಮಾಣ ತಗ್ಗಿದೆ. ಕೆರೆ ಕಟ್ಟೆಗಳ ಅಚ್ಚುಕಟ್ಟು ಭಾಗದ ತೋಟದ ಬೆಳೆಗಳು ಬಿಸಿಲಿನ ಝಳಕ್ಕೆ ಒಣಗಿ ನಲುಗುತ್ತಿವೆ.

ಬೆಳೆಗಾರರು ಕಂಗಾಲು: ಮುಖ್ಯವಾಗಿ ತಾಲೂಕಿನ ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಮಳೆ ಇಲ್ಲದೆ ಕಾಫಿ ಬೆಳೆಗಾರರು ಕಂಗಾಲಾಗಿ ದ್ದಾರೆ. ನೂರಾರು ಎಕರೆ ಪ್ರದೇಶ ದಲ್ಲಿ ಕಾಫಿ ತೋಟಗಳು ರಣ ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿವೆ. ನೀರಿಲ್ಲದೆ ದಿಕ್ಕು ತೋಚದಾಗಿದೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ. ಅರಕಲಗೂಡು ತಾಲೂಕಿನಲ್ಲಿ ವಾಡಿಕೆಯಂತೆ ಜನವರಿಯಿಂದ ಮಾರ್ಚ್‌ವರೆಗೆ 18.3 ಮಿ.ಮೀ.ಮಳೆ ಆಗಬೇಕಿತ್ತು. ಈ ಬಾರಿ ಇನ್ನೂ ಮಳೆ ಬಂದಿಲ್ಲ. ಪರಿಣಾಮವಾಗಿ ರೈತರು ಕೃಷಿ ಚಟುವಟಿಕೆ ನಡೆಸಲು ತೊಂದರೆ ಉಂಟಾಗಿದೆ. ● ರಮೇಶ್‌ ಕುಮಾರ್‌, ತಾಲೂಕು ಸಹಾಯಕ ಕೃಷಿ ನಿರ್ದೇಶಕ.

ಏಪ್ರಿಲ್‌ ಮಾಸದಲ್ಲಿ ಈ ಹೊತ್ತಿಗೆ ಎರಡು ಸಲ ಮಳೆ ಆಗಬೇಕಿತ್ತು. ಬದಲಿಗೆ ಬಿರುಬೇಸಿಗೆ ನೆತ್ತಿ ಸುಡುತ್ತಿದ್ದು ಕಾಫಿ ತೋಟಗಳಲ್ಲಿ ಮಳೆ ಇಲ್ಲದೆ ಗಿಡಗಳು ಹೂ ಕಟ್ಟಲು ಸಹ ಸಾಧ್ಯವಾಗಿಲ್ಲ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಬೋರ್‌ ವೆಲ್‌ಗ‌ಳು ಬತ್ತಿ ನೀರು ಸಾಕಾಗುತ್ತಿಲ್ಲ. ಒಂದೆರಡು ಸಲ ಹದ ಮಳೆಯಾಗಿದ್ದರೆ ಈ ವೇಳೆಗೆ ಕಾಫಿ ಗಿಡಗಳಲ್ಲಿ ಹೂ ಕಟ್ಟಿ ಬೆಳೆ ಉಳಿಸಿಕೊಳ್ಳಬಹುದಿತ್ತು. ಮಳೆ ಬೀಳದೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ನಮ್ಮ ಬದುಕು ದುರ್ಬರವಾಗಿದೆ. ● ವಿಶ್ವನಾಥ್‌, ಕಾಫಿ ಬೆಳೆಗಾರ.

Advertisement

Udayavani is now on Telegram. Click here to join our channel and stay updated with the latest news.

Next