Advertisement

ಕಾಫಿ ಬದಲಿಗೆ ಬಂದಿದೆ ಜಾಫಿ!

08:48 AM May 29, 2019 | Suhan S |

ಬೆಂಗಳೂರು: ನಿಮಗೆ ಕಾಫಿ ಗೊತ್ತು. ಆದರೆ, ‘ಜಾಫಿ’ ಗೊತ್ತಾ? ಇಂತಹದ್ದೊಂದು ಪಾನೀಯ ಮಾರುಕಟ್ಟೆಗೆ ಬಂದಿದೆ. ಇದು ಕಾಫಿಯ ರುಚಿಗೆ ಅತ್ಯಂತ ಸನಿಹವಾಗಿದ್ದು, ಆರೋಗ್ಯಕ್ಕೂ ಉತ್ತಮ!

Advertisement

ಕಾಫಿ ಬೀಜಗಳನ್ನು ಪುಡಿ ಮಾಡಿ, ಅದರ ಪುಡಿಯಿಂದ ಕಾಫಿ ತಯಾರಿಸಲಾಗುತ್ತಿದೆ. ಅದೇ ರೀತಿ, ಹಲಸಿನ ಬೀಜಗಳನ್ನು ಪುಡಿ ಮಾಡಿ, ಅದರಿಂದ ತಯಾರಿಸಿದ ಪಾನೀಯವೇ ‘ಜಾಫಿ’. ರೈತರು, ಯುವಕರನ್ನು ಒಳಗೊಂಡ ಪರಿವರ್ತನ ಟ್ರಸ್ಟ್‌ ಎಂಬ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಈ ಉಪ ಉತ್ಪನ್ನದ ಮೂಲಕ ಹಲಸಿಗೆ ಹೊಸ ರೂಪ ನೀಡಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

‘ಹಲಸಿನ ಬೀಜಗಳಿಂದ ‘ಜಾಫಿ’ ಪಾನೀಯವನ್ನು ಅಭಿವೃದ್ಧಿಪಡಿಸಿದ್ದು ದೇಶದಲ್ಲಿ ಇದೇ ಮೊದಲು. ಹಲಸಿನ ಬೀಜಗಳನ್ನು ಒಣಗಿಸಿ, ಹುರಿದು ವೈಜ್ಞಾನಿಕವಾಗಿ ಈ ಜಾಫಿಯನ್ನು ತಯಾರಿಸಲಾಗಿದೆ. ಇದರಲ್ಲಿ ನಾರಿನ ಅಂಶ, ಪ್ರೊಟೀನ್‌, ಕಾರ್ಬೋಹೈಡ್ರೆಟ್‌ಗಳು, ಮಧುಮೇಹ ರೋಗಕ್ಕೆ ಮಾರಕವಾದ ಗ್ಲುಟೆನ್‌ ಮತ್ತು ಕೇಸಿನ್‌ ಅಂಶಗಳಿಂದ ಮುಕ್ತವಾಗಿದೆ. ಹಾಗಾಗಿ, ಉತ್ತಮ ಆರೋಗ್ಯಕ್ಕೆ ಹೇಳಿಮಾಡಿಸಿದ್ದಾಗಿದೆ. ಜತೆಗೆ ರುಚಿಯೂ ಇದೆ’ ಎಂದು ಪರಿವರ್ತನ ಟ್ರಸ್ಟ್‌ನ ಶಿವಣ್ಣ ‘ಉದಯವಾಣಿ’ಗೆ ತಿಳಿಸಿದರು.

ಏನು ಉಪಯೋಗ?: ಜಾಫಿಗೆ ಹಸಿವನ್ನು ನಿಯಂತ್ರಿಸುವ ಸಾಮರ್ಥ್ಯ ಇದೆ. ದಿನಕ್ಕೆ ಮೂರ್‍ನಾಲ್ಕು ಬಾರಿ ಸೇವಿಸಿದರೂ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದಾಕ್ಷಣ ‘ಜಾಫಿ’ ಹೀರುವುದು ಸೂಕ್ತ ಎಂದ ಅವರು, ತಿಂಗಳಿಗೆ 50 ಮಂದಿ ಈ ಜಾಫಿ ಪುಡಿಯನ್ನು ಖರೀದಿಸುತ್ತಿದ್ದಾರೆ. ಔಟ್ಲೆಟ್‌ಗಳಿಗೆ ನಾನು ಕೊಡುವುದಿಲ್ಲ. ನೇರವಾಗಿ ಗ್ರಾಹಕರಿಗೆ ತಲುಪಿಸುತ್ತೇನೆ. 100 ಗ್ರಾಂಗೆ 90 ರೂ. ಆಗುತ್ತದೆ. ಯುವಕರು ಮತ್ತು ವೃದ್ಧರಿಂದ ಹೆಚ್ಚು ಬೇಡಿಕೆ ಬರುತ್ತಿದೆ ಎಂದು 65 ವರ್ಷದ ಶಿವಣ್ಣ ಮಾಹಿತಿ ನೀಡಿದರು.

ಇದಲ್ಲದೆ, ಹಲಸಿನ ಬೀಜಗಳ ಪುಡಿಯನ್ನು ಸೌಂದರ್ಯವರ್ಧಕವಾಗಿಯೂ ಬಳಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಹಲಸಿನ ಪೌಡರ್‌ ತಯಾರಿಸಲಾಗಿದೆ. ಇದನ್ನು ರಾತ್ರಿ ಹಾಲಿನಲ್ಲಿ ಮಿಶ್ರಣ ಮಾಡುವುದರಿಂದ ಕೂದಲು ಉದುರುವುದಿಲ್ಲ. ಬೆಳಿಗ್ಗೆ ಸ್ನಾನಕ್ಕೂ ಮುನ್ನ ಮೊಸರಿನಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಲೆಗಳು ಮಾಯವಾಗುತ್ತವೆ. ಜತೆಗೆ ಹಲಸಿನ ಬೀಜಗಳಿಂದ ಸಾಂಬಾರು ಪೌಡರ್‌ ಕೂಡ ತಯಾರಿಸಲಾಗಿದೆ. ಈ ಮೌಲ್ಯವರ್ಧಿತ ಉತ್ಪನ್ನಗಳಿಂದ ರೈತರಿಗೂ ಅನುಕೂಲ ಆಗಿದ್ದು, ಅವರ ಆದಾಯದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ ಎಂದು ಅವರು ವಿವರಿಸಿದರು.

Advertisement

ಹಲಸಿನ ಬಜ್ಜಿ!:

ಆಲೂಗಡ್ಡೆ ಬಜ್ಜಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಅದು ಆರೋಗ್ಯಕ್ಕೆ ಅಷ್ಟು ಸೂಕ್ತವಲ್ಲ; ಇದಕ್ಕೆ ಪರ್ಯಾಯವಾಗಿ ಹಲಸಿನಿಂದಲೂ ಬಜ್ಜಿಯನ್ನು ಮಾಡಬಹುದು. ಬಾಯಲ್ಲಿ ನೀರೂರಿಸುವ ಹಲಸಿನ ಬಜ್ಜಿ, ಚಿಪ್ಸ್‌, ಹಪ್ಪಳ, ಜಾಫಿ ರುಚಿ ಸವಿಯಲು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್ಆರ್‌)ದ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ಮಾವು ಮತ್ತು ಹಲಸಿನ ಮೇಳಕ್ಕೆ ನೀವು ಭೇಟಿ ನೀಡಬೇಕು.

● ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next